ಸ್ಪೀಕರ್ ಯು.ಟಿ ಖಾದರ್ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯಗೂ ಜೀವ ಬೆದರಿಕೆ..!
ಕರಾವಳಿ ಭಾಗದಲ್ಲಿ ಸೇಡಿಗೆ ಸೇಡು ಮುದುವರಿದಿದೆ. ಫಾಜಿಲ್ ಹತ್ಯೆ ಪ್ರತೀಕಾರಕ್ಕೆ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇದರ ಮಧ್ಯ ಉಡುಪಿಯಲ್ಲಿ ಆಟೋ ಚಾಲಕನ ಹತ್ಯೆಗೆ ಯತ್ನ ನಡೆದಿದೆ. ಇದರ ಮಧ್ಯ ಇದೀಗ ಸ್ಪೀಕರ್ ಯುಟಿ ಖಾದರ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯಗೂ ಸಹ ಜೀವ ಬೆದರಿಕೆ ಹಾಕಲಾಗಿದೆ.

ಮಂಡ್ಯ, (ಮೇ 02): ಚಾಮರಾಜನಗರ (Chamarajanagar) ಹಾಗೂ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸ್ಫೋಟಿಸುವುದಾಗಿ (Bomb Threat) ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮಧ್ಯಾಹ್ನ 3 ಗಂಟೆಯೊಳಗೆ ಸ್ಫೋಟವಾಗಲಿದೆ ಎಂದು ಅಪರಿಚಿತನಿಂದ ಬಂದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ (Siddaramaiah) ಸಹ ಜೀವ ಬೆದರಿಕೆ ಕರೆ ( life threat call )ಬಂದಿದೆ. ಈ ಸಂಬಂಧ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಇಮದು (ಮೇ 02) ಮಂಡ್ಯದಲ್ಲಿ ಸುದ್ದಿಗಾರರ ಮುಂದೆ ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಖಾದರ್ಗೆ ಮಾತ್ರವಲ್ಲ ನನಗೂ ಜೀವ ಬೆದರಿಕೆ ಕರೆ ಬಂದಿದೆ. ನನಗೂ ಬೆದರಿಕೆ ಕರೆಗಳು ಬಂದಿವೆ ಏನು ಮಾಡಲು ಆಗುತ್ತೆ. ನನಗೆ ಬೆದರಿಕೆ ಕರೆಗಳು ಬಂದಾಗ ಪೊಲೀಸರಿಗೆ ತಿಳಿಸಿದ್ದೇನೆ. ಬೆದರಿಕೆ ಕರೆ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮಕ್ಕೆ ಸೂಚಿಸಿದ್ದೇನೆ. ಅಲ್ಲದೇ ಸ್ಪೀಕರ್ಗೆ ಬಂದ ಬೆದರಿಕೆ ಹಾಕಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ ಎಂದರು.
ಇದನ್ನೂ ಓದಿ: Bomb Thteat: ಚಾಮರಾಜನಗರ, ರಾಯಚೂರು ಡಿಸಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಸಂದೇ
ಇನ್ನು ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ವಿಚಾರದ ಬಗ್ಗೆ ಪ್ರತಿಕ್ರಿಯಸಿದ ಸಿಎಂ, ಈ ಹತ್ಯೆ ಯಾಕೆ ನಡೆದಿದೆ ಗೊತ್ತಿಲ್ಲ. ಮೃತ ವ್ಯಕ್ತಿ ರೌಡಿಶೀಟರ್ ಎಂದು ಹೇಳುತ್ತಿದ್ದಾರೆ. ಹಂತಕರು ಯಾರೇ ಆಗಿದ್ದರೂ ಕೂಡಲೇ ಕ್ರಮ ಆಗಬೇಕು. ಶೀಘ್ರವೇ ಆರೋಪಿಗಳ ಪತ್ತೆಗೆ ಕ್ರಮವಹಿಸಬೇಕು. ಇಂತಹ ಘಟನೆಗಳಿಗಾಗಿಯೇ ಬಿಜೆಪಿಯವರು ಕಾಯುತ್ತಿದ್ದಾರೆ ಹೇಳಿದರು.
ಬೆದರಿಕೆ ಕರೆ ಬಗ್ಗೆ ಖಾದರ್ ಹೇಳಿದ್ದಿಷ್ಟು
ಇನ್ನು ತಮಗೆ ಬಂದಿರುವ ಬೆದರಿಕೆ ಕರೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಯುಟಿ ಖಾದರ್, ಈ ಹಿಂದೆಯೂ ಹಲವು ಬಾರಿ ಬೆದರಿಕೆ ಕರೆಗಳು ಬಂದಿವೆ. ಭೂಗತಲೋಕ ಪಾತಕಿಗಳಿಂದ ಜೀವ ಬೆದರಿಕೆ ಕರೆ ಬಂದಿರುವುದಾಗಿ ಸ್ಪಷ್ಟಪಡಿಸಿದರು.
ಎಲ್ಲಿ ಹುಟ್ಟಬೇಕು, ಎಲ್ಲಿ ಸಾಯಬೇಕು ಎಂಬುದನ್ನು ಆ ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ಮಾಡಿಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರು ಇಟ್ಟಂತೆ ಇರಲಿ, ನಮ್ಮ ಕೈಯಲ್ಲಿ ಏನೂ ಇಲ್ಲ ಈಗ ಮಾತನಾಡುತ್ತಿದ್ದೇನೆ. ಮರಳಿ ಮತ್ತೆ ಹೋಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ಎಂದು ಹೇಳಿದ್ದಾರೆ.
ಚಾಮರಾಜನಗರ, ರಾಯಚೂರು ಡಿಸಿ ಕಚೇರಿಗೆ ಬೆದರಿಕೆ
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮಧ್ಯಾಹ್ನ 3 ಗಂಟೆಯೊಳಗೆ ಸ್ಫೋಟವಾಗಲಿದೆ ಎಂದು ಅಪರಿಚಿತನಿಂದ ಬಂದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇ-ಮೇಲ್ ಸಂದೇಶ ಬಂದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಚಾಮರಾಜನಗರ ಎಸ್ಪಿ ಕವಿತಾಗೆ ಮಾಹಿತಿ ನೀಡಿದೆ. ಸದ್ಯ ಇ-ಮೇಲ್ ಖಾತೆ ಬಗ್ಗೆ ಮಾಹಿತಿ ಪೊಲೀಸರು ಪಡೆಯುತ್ತಿದ್ದಾರೆ. ಚಾಮರಾಜನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದೆಡೆ, ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಅಪರಿಚಿತನಿಂದ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ತಕ್ಷಣವೇ ಪೊಲೀಸರು ಡಿಸಿ ಕಚೇರಿಗೆ ಭೇಟಿ ನೀಡಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ರಾಯಚೂರು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ.