ಸುಹಾಸ್ ಶೆಟ್ಟಿ ಹತ್ಯೆ: ಪೊಲೀಸ್ ಮಹಾ ನಿರ್ದೇಶಕರು, ಉಸ್ತುವಾರಿ ಸಚಿರಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕೊಲೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಮಹಾನಿರ್ದೇಶಕರಿಂದ ಮಾಹಿತಿ ಪಡೆದು ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಘಟನೆಯನ್ನು ಖಂಡಿಸಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಹೆಚ್ಪಿ ಬಂದ್ ಆಚರಿಸುತ್ತಿದೆ.

ಮಂಗಳೂರು, ಮೇ 2: ಮಂಗಳೂರಿನಲ್ಲಿ ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ (Suhas Shetty) ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಂದ ಮಾಹಿತಿ ಪಡೆದರು. ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರಿಗೆ ಸೂಚನೆ ನೀಡಿದರು. ಕಾನೂನು ಸವ್ಯವಸ್ಥೆ ಹದಗೆಡದಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು. ಮತ್ತೊಂದೆಡೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಘಟನೆ ಕುರಿತು ಮಾಹಿತಿ ನೀಡಿದರು.
ಆರೋಪಿಗಳ ಬಂಧನಕ್ಕೆ 4 ತಂಡ ರಚನೆ: ಗೃಹ ಸಚಿವ ಪರಮೇಶ್ವರ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ಗುರುವಾರ ರಾತ್ರಿ 8.30ರ ಸುಮಾರಿಗೆ ಕೊಲೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಆಗಲಿದೆ. ಆರೋಪಿಗಳ ಬಂಧನಕ್ಕೆ 4 ತಂಡ ರಚನೆ ಮಾಡಿದ್ದೇವೆ ಎಂದರು.
ಮಂಗಳೂರು ಜನ ಶಾಂತಿ ಕಾಪಾಡಬೇಕು. ಸರ್ಕಾರ ನಿಮ್ಮ ಜೊತೆ ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಗೆ ತಿಳಿಸಿದ್ದೇವೆ. ತನಿಖೆ ಮುಂದುವರಿದಿದೆ. ಯಾರೇ ಆಗಿದ್ದರೂ ಕಠಿಣ ಕ್ರಮ ಆಗಲಿದೆ. ಯಾವುದೇ ಪಕ್ಷದವರಾಗಿದ್ದರೂ ಕೊಲೆ ಆರೋಪಿಗಳನ್ನು ಬಿಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಬಿಜೆಪಿ ಆರೋಪಕ್ಕೆ ಪರಮೇಶ್ವರ್ ತಿರುಗೇಟು
ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ತಪ್ಪಿತಸ್ಥರು ಯಾರೇ ಆದರೂ ಕ್ರಮ ಆಗಲಿದೆ. ಈ ಹಿಂದೆಯೂ ಕಠಿಣ ಕ್ರಮ ಆಗಿದೆ. ಈಗಲೂ ಕೂಡ ಕ್ರಮ ಆಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹಿಂದೂಗಳಿಲ್ವಾ? ನಾವ್ಯಾರು ಹಿಂದೂಗಳು ಅಲ್ವಾ ಎಂದು ಪ್ರಶ್ನಿಸಿದರು.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಗುರುವಾರ ರಾತ್ರಿ ಮಂಗಳೂರಿನ ಬಜಪೆ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ. ಘಟನೆಗೆ ಹಿಂದೂ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ನಾಯಕರು ಕೂಡ ಘಟನೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ನೆಟ್ಟಾರು ಕೊಲೆ ಪ್ರತಿಕಾರಕ್ಕೆ ಫಾಜಿಲ್ ಹತ್ಯೆ: ಇದೇ ಸೇಡಿಗೆ ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿ ಫಾಜಿಲ್ ಎಂಬಾತನ ಕೊಲೆ ಮಾಡಲಾಗಿತ್ತು. ಅದಕ್ಕೆ ಪ್ರತಿಕಾರವಾಗಿ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಘಟನೆ ಖಂಡಿಸಿ ಇಂದು ದಕ್ಷಿಣ ಕನ್ನಡ ಬಂದ್ ಆಚರಿಸಲಾಗುತ್ತಿದೆ. ವಿಹೆಚ್ಪಿ ಕರೆ ನೀಡಿರುವ ಬಂದ್ ಕಾರಣ ಅಂಗಡಿ ಮುಂಗಟ್ಟುಗಳು, ಬಸ್ ಸಂಚಾರ ಸ್ಥಗಿತಗೊಂಡಿದೆ.