ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣ: ನಾಡಿಗೆ ಮರಳಲು ಗ್ರಾಮಸ್ಥರಿಗೆ ಭೀತಿ, ಆಹಾರವಿಲ್ಲದೆ ಜಾನುವಾರುಗಳ ಪರದಾಟ
ಇವಿಎಂ ಧ್ವಂಸ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಗ್ರಾಮದ ಪುರುಷರೆಲ್ಲಾ ಕಾಡು ಸೇರಿದ್ದು, ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿತ್ತು. ಇತ್ತ ಹಸುಗಳಿಗೆ ಮೇವಿಲ್ಲದೆ ವಿಲ ವಿಲ ಒದ್ದಾಡತೊಡಗಿದವು. ಈ ಹಿನ್ನಲೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.
ಚಾಮರಾಜನಗರ, ಮೇ 14: ಇಂಡಿಗನತ್ತ ಇವಿಎಂ ಧ್ವಂಸ ಪ್ರಕರಣಕ್ಕೆ (EVM vandalized Case) ಸಂಬಂದ ಪಟ್ಟಂತೆ ಈಗಾಗಲೇ 250 ಅಧಿಕ ಮಂದಿಯ ವಿರುದ್ದ ಎಫ್ಐಆರ್ ದಾಖಲಾಗಿದ್ದು ಇತ್ತ ಬಂಧನದ ಭೀತಿಯಿಂದ ಇಂಡಿಗನತ್ತ (Indiganatha) ಹಾಡಿಯನ್ನು ತೊರೆದ ಗ್ರಾಮಸ್ಥರು ಕಾಡು ಸೇರಿದ್ದಾರೆ. ಇತ್ತ ಗ್ರಾಮದಲ್ಲಿ ದನಕರಗಳು ಮೇವಿಲ್ಲದೆ ಪರದಾಟಪಡುತ್ತಿವೆ. ಈಗ ಇಂಡಿಗತನತ್ತ ಗ್ರಾಮದ ಜನತೆಗೆ ಜಿಲ್ಲಾಧಿಕಾರಿ ಅಭಯ ನೀಡಿದ್ದು ಮರಳಿ ಗ್ರಾಮಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
ಏಪ್ರಿಲ್ 26 ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿತ್ತು. 14 ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲೆಡೆ ಮತದಾನ ನಡೆಯುತ್ತಿತ್ತು. ಆದ್ರೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಹಾಡಿಯಲ್ಲಿ ಮದ್ಯಾಹ್ನ 1 ಗಂಟೆ ಕಳೆದರೂ ಒಂದೇ ಒಂದು ಮತ ಕೂಡ ಚಲಾವಣೆ ಆಗಿರಲಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನಲೆಯಲ್ಲಿ ಇಂಡಿಗನತ್ತ ಹಾಡಿಯ ಜನತೆ ಮತದಾನವನ್ನು ಬಹಿಷ್ಕರಿಸಿದ್ದರು. ಆದರೆ, ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಪಕ್ಕದ ಮೆಂದಾರೆ ಹಾಡಿಯ ಜನತೆಯ ಮನವೊಲಿಸಿ ಮತದಾನಕ್ಕೆ ಕರೆತಂದರು. ಈ ವೇಳೆ, ಮೆಂದಾರೆ ಹಾಗೂ ಇಂಡಿಗನತ್ತ ಹಾಡಿಯ ಜನತೆ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದರು. ಈ ವೇಳೆ ಇಂಡಿಗನತ್ತ ಹಾಡಿಯ ಜನತೆ ಕಲ್ಲು ತೂರಿ ಮತಪೆಟ್ಟಿಗೆಯನ್ನ ಧ್ವಂಸ ಗೊಳಿಸಿದ್ದರು. ಈ ವೇಳೆ 250 ಕ್ಕೂ ಹೆಚ್ಚು ಜನರ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನಲೆ ಗ್ರಾಮವನ್ನ ತೊರೆದ ಜನರು ಕಾಡು ಸೇರಿದ್ದರು.
ಇಡೀ ಗ್ರಾಮವೇ ಖಾಲಿ ಖಾಲಿ!
ಪ್ರಕರಣ ದಾಖಲಾಗುತ್ತಿದ್ದಂತೆಯೇ ಗ್ರಾಮದ ಪುರುಷರೆಲ್ಲಾ ಕಾಡು ಸೇರಿದ್ದು, ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿತ್ತು. ಇತ್ತ ಹಸುಗಳಿಗೆ ಮೇವಿಲ್ಲದೆ ವಿಲ ವಿಲ ಒದ್ದಾಡತೊಡಗಿದವು. ಈ ಹಿನ್ನಲೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ. ಗಲಭೆಯಲ್ಲಿ ಭಾಗಿಯಾದವರ ವಿರುದ್ಧವಷ್ಟೇ ಕ್ರಮ ಕೈಗೊಳ್ಳುತ್ತೇವೆ. ಎಲ್ಲರೂ ಗ್ರಾಮ ತೊರೆಯಬೇಡಿ. ನಿಮ್ಮ ಪರ ಜಿಲ್ಲಾಡಳಿತವಿದೆ ಎಂದು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಮನವಿ ಮೇರೆಗೆ ಈಗ ಅರ್ಧದಷ್ಟು ಗ್ರಾಮಸ್ಥರು ಈಗ ಮರಳಿ ಗೂಡು ಸೇರಿದ್ದಾರೆ. ಆಹಾರವಿಲ್ಲದೆ ಪರಿತಪ್ಪಿಸುತ್ತಿದ್ದ ಮೂಕ ಪ್ರಾಣಿಗಳಿಗೆ ಈಗ ಜಿಲ್ಲಾಡಳಿತ ವತಿಯಿಂದ ಮೇವಿನ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Chamarajanagar: ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ: ಅಷ್ಟಕ್ಕೂ ಆಗಿದ್ದೇನು? ಕಾರಣ ಬಿಚ್ಚಿಟ್ಟ ಜಿಲ್ಲಾಧಿಕಾರಿ
ತಪ್ಪು ಮಾಡಿದ್ದು ಯಾರೋ ಶಿಕ್ಷೆ ಇನ್ಯಾರಿಗೋ ಎಂಬಂತಾಗಿತ್ತು. ಆದರೆ, ಜಿಲ್ಲಾಡಳಿತದ ಭರವಸೆಯಿಂದ ಈಗ ಗ್ರಾಮಸ್ಥರಿಗೆ ಮರು ಜೀವ ಬಂದಂತಾಗಿದ್ದು ಮರಳಿ ಗ್ರಾಮಕ್ಕೆ ಬಂದಂಥ ಗ್ರಾಮಸ್ಥರಿಗೆ ಈಗ ಜಿಲ್ಲಾಡಳಿತದ ವತಿಯಿಂದ ದಿನಸಿ ಹಾಗೂ ದಿನ ಬಳಕೆ ವಸ್ತುಗಳನ್ನು ನೀಡಲಾಗುತ್ತಿದೆ. ನಾಗಮಲೆಗೆ ಹೋಗುವ ಚಾರಣದ ನಿಷೇಧದ ಕುರಿತು ಮುಂಬರುವ ದಿನಗಳಲ್ಲಿ ಸೂಕ್ತ ಕ್ರಮ ತೆಗೆದು ಕೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Tue, 14 May 24