ಮರಡಿಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು
ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಮರಡಿಗುಡ್ಡ ವೃಕ್ಷವನದಲ್ಲಿ ಜಿಪ್ ಲೈನ್ ಪ್ರಾರಂಭವಾಗಿದೆ. ನೂರಾರು ಮೀಟರ್ ಎತ್ತರದಿಂದ 200 ಮೀ ದೂರಕ್ಕೆ ಪ್ರವಾಸಿಗರು ಸಾಗಬಹುದಾಗಿದೆ.
ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ಪಟ್ಟಣವನ್ನು ಕೊಂಗರನಾಡು ಎಂದೇ ಕರೆಯಲಾಗುತ್ತಿತ್ತು. ಅದರ ಪರಿಣಾಮವಾಗಿ ಕೊಳ್ಳೆಗಾಲದ ಮಧ್ಯೆ ಇದ್ದ ಆ ಗುಡ್ಡ ಅತ್ತ್ಯುತ್ತಮ ಪ್ರವಾಸಿ ತಾಣವಾಗಿದೆ. ಬೆಟ್ಟದ ಮೇಲಿಂದ ನಿಂತು ನೋಡಿದರೆ ಇಡೀ ಪಟ್ಟಣವೇ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಈ ಬೆಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸಲು ಬೆಟ್ಟದಲ್ಲಿ ಈಗ ಜಿಪ್ ಲೈನ್ ಅಳವಡಿಸಲಾಗಿದೆ. ಈ ಸಾಹಸ ಕ್ರೀಡೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕೊರೊನಾ ಬಳಿಕ ತೆರೆದಿರುವ ಜಿಪ್ ಲೈನ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಯುವಕ, ಯುವತಿಯರ ತಂಡವೇ ಹರಿದು ಬರುತ್ತಿದೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಪ್ರಕೃತಿ ಸೌಂದರ್ಯ ಕಣ್ಮನ ಸೆಳೆಯುತ್ತಿದೆ.
ಚಾಮರಾಜನಗರ ಜಿಲ್ಲೆ ಶೇ 51ರಷ್ಟು ದಟ್ಟ ಕಾಡಗಳನ್ನು ಹೊಂದಿದೆ. ವೀಕೆಂಡ್ ಬಂತು ಅಂದರೆ ಪ್ರವಾಸಿಗರು ಗಡಿ ಜಿಲ್ಲೆಯತ್ತ ಮುಖ ಮಾಡುತ್ತಾರೆ. ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಇದೀಗ ಸಾಹಸಿ ಕ್ರೀಡೆಗಳನ್ನು ಆಯೋಜನೆ ಮಾಡುವ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಯೋಜನೆ ರೂಪಿಸಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮರಡಿಗುಡ್ಡ ವೃಕ್ಷ ವನದಲ್ಲಿ ನೂತನವಾಗಿ ಅಳವಡಿಸಿರುವ ಜಿಪ್ ಲೈನ್ ಸಾಹಸ ಕ್ರೀಡೆಯು ಪ್ರವಾಸಿಗರ ಕೇಂದ್ರ ಬಿಂದುವಾಗಿದೆ. 20 ಲಕ್ಷ ವೆಚ್ಚದಲ್ಲಿ ಲಾಕ್ಡೌನ್ನಲ್ಲಿ ಪ್ರಾರಂಭಗೊಂಡ ಕಾಮಗಾರಿ ಪೂರ್ಣಗೊಂಡಿದೆ. ಆ ಮೂಲಕ ಗಡಿ ಜಿಲ್ಲೆಯಲ್ಲಿಯ ಜನರಿಗೆ ಮೊದಲ ಬಾರಿಗೆ ಜಿಪ್ ಲೈನ್ ಕ್ರೀಡೆ ಆಡುವ ಅವಕಾಶ ಕಲ್ಪಿಸಿದಂತಾಗಿದೆ.
ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಮರಡಿಗುಡ್ಡ ವೃಕ್ಷವನದಲ್ಲಿ ಜಿಪ್ ಲೈನ್ ಪ್ರಾರಂಭವಾಗಿದೆ. ನೂರಾರು ಮೀಟರ್ ಎತ್ತರದಿಂದ 200 ಮೀ ದೂರಕ್ಕೆ ಪ್ರವಾಸಿಗರು ಸಾಗಬಹುದಾಗಿದೆ. ಕ್ರೀಡೆಯಾಡಲು ರಕ್ಷಣಾ ಸಲಕರಣೆಗಳನ್ನು ನೀಡಲಾಗುತ್ತಿದೆ. ಕೊವಿಡ್ ನಿಯಮಾವಳಿಯಂತೆ ಸಾನಿಟೈಸ್, ಮಾಸ್ಕ್ ಧಾರಣೆಯೊಂದಿಗೆ ಆಟವಾಡಲು ಅವಕಾಶ ನೀಡಲಾಗಿದೆ. ಪ್ರತಿನಿತ್ಯ ನೂರಾರು ಮಂದಿ ರೋಪ್ ಲೈನ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.
ಜಿಪ್ ಲೈನ್ ಸವಾರರಿಗೆ ಅತ್ಯಾಧುನಿಕ 4k ಗೋ ಪ್ರೋ ಕ್ಯಾಮರಾ ಸೆಲ್ಫಿ ಸ್ಟಿಕ್ ನೀಡಲಾಗುತ್ತಿದೆ. ರೋಪ್ ಮೂಲಕ ತೇಲುವ ರೋಚಕ ಕ್ಷಣವನ್ನು ಸ್ವತಃ ಸವಾರರೇ ಸೆರೆಹಿಡಿಯಬಹುದಾಗಿದೆ. ವಯಸ್ಕರಿಗೆ 60 ರೂ. ಮಕ್ಕಳಿಗೆ 30 ರೂ. ಅನ್ನು ಜಿಪ್ ಲೈನ್ ಸವಾರಿಗೆ ನಿಗದಿ ಮಾಡಲಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಖುಷಿ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ರೋಪ್ ವೇ ಮಾತ್ರ ಅಲ್ಲದೆ ಇಡೀ ಕೊಳ್ಳೇಗಾಲದ ಸೌಂದರ್ಯವನ್ನು ಸವಿಯಬಹುದಾಗಿದೆ. ಕೊಳ್ಳೇಗಾಲದ ಎತ್ತರವಾದ ಪ್ರದೇಶದ ಮರಡಿಗುಡ್ಡದಿಂದ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶವನ್ನು ಕಣ್ತುಂಬಿಕೊಳ್ಳುವುದು ಮನ ಸೆಳೆಯುತ್ತಿದೆ ಎಂದು ಪ್ರವಾಸಿಗರಾದ ಡಾ. ದಿವ್ಯ ಹೇಳಿದ್ದಾರೆ.
ಒಟ್ಟಾರೆ ಕೊವಿಡ್ ಭೀತಿಯಲ್ಲಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಜನರಿಗೆ ಹೆಚ್ಚು ಚೈತ್ಯನ್ಯ ತುಂಬಲಿದೆ ಜಿಪ್ ಲೈನ್ ಸಾಹಸ ಕ್ರೀಡೆ. ಒಂದು ಕಡೆಗೆ ಹೋಗಲು ಮಾತ್ರ ಅವಕಾಶವಿದ್ದು, ಮರಳಿ ಬರಲು ಅವಕಾಶ ಇಲ್ಲದಾಗಿದೆ. ಬರುವ ದಿನಗಳಲ್ಲಿ ಎರಡು ಕಡೆಗೆ ಹೋಗಲು ಅವಕಾಶ ಕಲ್ಪಿಸಬೇಕು ಎಂಬುವುದು ಪ್ರವಾಸಿಗರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಗಮನ ಹರಿಸಲಿ ಎಂಬುವುದು ಪರಿಸರ ಪ್ರಿಯರ ಅಭಿಪ್ರಾಯವಾಗಿದೆ.
ವರದಿ: ಎಂ ಇ ಮಂಜುನಾಥ್
ಇದನ್ನೂ ಓದಿ: ಚಾಮರಾಜನಗರದಲ್ಲಿ ಸಫಾರಿಗೆ ಹೋದವರಿಗೆ ಮೂರು ಕರಡಿಗಳ ದರ್ಶನ, ಪ್ರವಾಸಿಗರು ಫುಲ್ ಖುಷ್; ವಿಡಿಯೋ ನೋಡಿ
ಏಷ್ಯಾದ ಅತಿದೊಡ್ಡ ಕರಡಿ ಧಾಮದಲ್ಲಿ ಸಫಾರಿ ಆರಂಭ; ಪ್ರವಾಸಿಗರು ಫುಲ್ ಖುಷ್
Published On - 9:52 am, Tue, 7 September 21