ಚಾಮರಾಜನಗರ: ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ 2 ಹುಲಿಗಳ ಮೃತದೇಹ ಪತ್ತೆ

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿವೆ. ಸ್ಥಳಕ್ಕೆ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಮರಾಜನಗರ: ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ 2 ಹುಲಿಗಳ ಮೃತದೇಹ ಪತ್ತೆ
ಮೃತ ಹುಲಿಗಳು
Edited By: ವಿವೇಕ ಬಿರಾದಾರ

Updated on: Dec 08, 2023 | 2:33 PM

ಚಾಮರಾಜನಗರ, ಡಿಸೆಂಬರ್​ 08: ಕಳೆದ ಎರಡು ವಾರಗಳ ಹಿಂದೆ ಬಂಡೀಪುರದ ಮದ್ದೂರು ವಲಯ ವ್ಯಾಪ್ತಿಯಲ್ಲಿ 3 ವರ್ಷ ವಯಸ್ಸಿನ ಗಂಡು ಹುಲಿ (Tiger) ಮೃತಪಟ್ಟಿತ್ತು. ಇದು ಮಾಸುವ ಮುನ್ನವೇ, ಚಾಮರಾಜನಗರ (Chamrajnagar) ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿವೆ. ಸ್ಥಳಕ್ಕೆ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯ (BRT) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಮೇಲೂರು ಸರ್ವೇ ನಂಬರ್ 107 ರ ಕರಿಕಲ್ಲು ಕ್ವಾರಿಯಿಂದ 15 ಮೀಟರ್​ ದೂರದಲ್ಲಿ ಹುಲಿಗಳು ಮೃತಪಟ್ಟಿವೆ. ಹುಲಿ ಸಾವಿನ ಸುದ್ದಿ ಅಧಿಕಾರಿಗಳಿಗೆ ನಿನ್ನೆ (ಡಿ.07) ರ ಸಂಜೆಯೇ ತಿಳಿದಿತ್ತು. ಆದರೂ ಕೂಡ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಹುಲಿ ಮೃತದೇಹ ಚಿತ್ರೀಕರಣ ಮಾಡಲು ಅಧಿಕಾರಿಗಳು ಬಿಡದೆ, ಮರಣೋತ್ತರ ಪರೀಕ್ಷೆ ನಂತರ ಮಾಹಿತಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.

ಹುಲಿಗಳ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇಲ್ಲವೇ ಪರಸ್ಪರ ಕಾದಾಡಿ ಮೃತಪಟ್ಟಿರುವ ಶಂಕೆ ಮೂಡಿದೆ. 15 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಗಂಡು ಹುಲಿ ಸಾವು; ಅರಣ್ಯ ಸಂರಕ್ಷಣಾಧಿಕಾರಿಯೇ ಕಾರಣ ಎಂದ ಪರಿಸರವಾದಿ ಜೋಸೆಫ್ ಹೂವರ್

ವನ್ಯ ಮೃಗಗಳನ್ನ ಬೇಟೆಯಾಡಲು ಹೊಂಚು ಹಾಕಿದ್ದ ಕಾಡುಗಳ್ಳರ ಬಂಧನ

ದಿನ ಕಳೆದಂತೆ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ವನ್ಯ ಮೃಗಗಳನ್ನು ಬೇಟೆಯಾಡಲು ಹೊಂಚು ಹಾಕಿದ್ದ ಇಬ್ಬರು ಕಾಡುಗಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ದಡಬಂಡಿ ಮಾದಯ್ಯ, ನಾಗ ತಂಬಡಿ ಬಂಧಿತರು.

ಆರೋಪಿಗಳು ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ದೇವರ ಮಡು ಅರಣ್ಯದಲ್ಲಿ ಉರುಳುಗಳನ್ನು ಹಾಕಿ ಕಡವೆ, ಜಿಂಕೆಯ ಶಿಕಾರಿಗಾಗಿ ಹೊಂಚು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಗಳಾದ ದಡಬಂಡಿ ಮಾದಯ್ಯ, ನಾಗ ತಂಬಡಿಯನನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಬಂಧಿತರಿಂದ ಮಚ್ಚು, ಟಾರ್ಚ್ ಲೈಟ್ ಮತ್ತು ಹಗ್ಗವನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Fri, 8 December 23

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us