ಬೆಂಗಳೂರು, ಅಕ್ಟೋಬರ್ 21: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಇದೀಗ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಭೇಟಿಯಾಗಿದ್ದಾರೆಂಬ ಆರೋಪ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಅನವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಹೆಚ್ಡಿಕೆ ನನಗೆ ಟಿಕೆಟ್ ಕೊಡದಿದ್ದರೆ ಅವರ ಮಗನಿಗೇ ಕೊಡಲಿ. ಆದರೆ, ಕಾಂಗ್ರೆಸ್ಸಿಗರ ಭೇಟಿ ಮಾಡಿದ್ದೆ ಎಂಬ ಆರೋಪ ಮಾಡಬೇಡಿ ಎಂದರು.
ನಾನು ಈವರೆಗೆ ಕಾಂಗ್ರೆಸ್ನ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಕಾಂಗ್ರೆಸ್ ನಾಯಕರ ಭೇಟಿ ಮಾಡಿದರೂ ತಪ್ಪೇನಿಲ್ಲ. ಆದರೆ ಇಲ್ಲಿಯವರೆಗೆ ಕಾಂಗ್ರೆಸ್ನ ಯಾರನ್ನೂ ಭೇಟಿ ಮಾಡಿಲ್ಲ ಎಂದು ಯೋಗೇಶ್ವರ್ ಹೇಳಿದರು.
ಅವಕಾಶ ಕೊಟ್ಟರೆ ಎನ್ಡಿಎ ಅಭ್ಯರ್ಥಿ ಆಗುತ್ತೇನೆ, ಅವಕಾಶ ಸಿಗಬೇಕಷ್ಟೇ. ನಾನು, ನನ್ನ ಪಾರ್ಟನರ್ ಕುಮಾರಸ್ವಾಮಿ 3 ದಿನಗಳಿಂದ ಚರ್ಚೆ ಮಾಡುತ್ತಿದ್ದೇವೆ. ನಾನು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಿದರೆ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಎಂದು ಆಸೆ ಇದೆ. ಆದರೆ, ಕುಮಾರಸ್ವಾಮಿಗೆ ಮಗನಿಗೆ ಟಿಕೆಟ್ ಕೊಡಬೇಕೆಂಬ ಮನಸ್ಸಿದೆ. ಅವರ ಮನಸ್ಸಿನಲ್ಲಿ ಆ ರೀತಿ ಇದ್ದರೆ ಏನು ಮಾಡಲಾಗುತ್ತದೆ? ಜನರು ಸಹ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಬೇಡ ಎನ್ನುತ್ತಿದ್ದಾರೆ. ಮೊದಲೇ ನನ್ನನ್ನು ಪಕ್ಷಾಂತರಿ ಎಂದು ಕರೆಯುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲು ನಿರ್ಧರಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಎಂದು ಯೋಗೇಶ್ವರ್ ಅಳಲು ತೋಡಿಕೊಂಡರು.
ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂಬ ಯಡಿಯೂರಪ್ಪ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಯೋಗೇಶ್ವರ್, ಈ ಸಂದರ್ಭದಲ್ಲಿ ಯಡಿಯೂರಪ್ಪ ಆ ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ ಎಂದರು. ಅದು ಕುಮಾರಸ್ವಾಮಿ ಅವರ ಕ್ಷೇತ್ರವೇ, ಅವರೇ ತೀರ್ಮಾನ ಮಾಡಬೇಕು. ಆದರೆ ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸು ಇದ್ದಿದ್ದರೆ ಅನುಕೂಲ ಆಗುತ್ತಿತ್ತು ಎಂದರು.
ಇದನ್ನೂ ಓದಿ: ಚನ್ನಪಟ್ಟಣ ಬೈ ಎಲೆಕ್ಷನ್: ಜೆಡಿಎಸ್ನಿಂದಲೇ ಸ್ಪರ್ಧಿಸುವಂತೆ ಯೋಗೇಶ್ವರ್ಗೆ ಹೆಚ್ಡಿಕೆ ಆಫರ್
ಯಡಿಯೂರಪ್ಪ ಈಗ ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ. ಅವರು ಉದ್ದೇಶಪೂರ್ವಕ ಹೇಳಿಕೆ ಕೊಟ್ಟಿದ್ದಾರೆ. ಅವರ ಮೂಲಕ ಯಾರೋ ಈ ರೀತಿ ಹೇಳಿಕೆ ಕೊಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ದೂರುವುದರಲ್ಲಿ ಅರ್ಥ ಇಲ್ಲ. ಆದರೆ ಯಡಿಯೂರಪ್ಪ ಈಗ ಬಂದು ಹೇಳಿಕೆ ಕೊಡುವ ಅವಶ್ಯಕತೆ ಇರಲಿಲ್ಲ. ಅದು ಜೆಡಿಎಸ್ ಕ್ಷೇತ್ರ ಅಂತ ಗೊತ್ತಿದೆ. ಯಡಿಯೂರಪ್ಪ ಹೇಳಿಕೆ ಹಿಂದೆ ದುರದ್ದೇಶ ಇದೆ. ಅವರು ಯಾರು ಹೇಳಿಕೆ ಕೊಡುವುದಕ್ಕೆ? ಪಕ್ಷದ ರಾಜ್ಯಾಧ್ಯಕ್ಷರು ಹೇಳಿಕೆ ಕೊಟ್ಟಿದ್ದರೆ ನಡೆಯುತ್ತಿತ್ತು. ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಮೂಲಕ ಹೇಳಿಕೆ ಕೊಡಿಸಿದ್ದಾರೆ. ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನೋಡೋಣ ಮುಂದೆ ಎಂದು ಯೋಗೇಶ್ವರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ