AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಖಿಲ್ ಅಭ್ಯರ್ಥಿಯಾದರೂ ಬೆಂಬಲ ನೀಡುವೆ: ಹೆಚ್​ಡಿಕೆ ಬಳಿ ಇನ್ನೂ ಏನೇನಂದರು ಯೋಗೇಶ್ವರ್? ಇಲ್ಲಿದೆ ನೋಡಿ

ಚನ್ನಪಟ್ಟಣ ಉಪಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಆದರೆ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಕಣ ರಂಗೇರುತ್ತಿದೆ. ಕಾಂಗ್ರೆಸ್ ಈಗಾಗಲೇ ತಯಾರಿ ಆರಂಭಿಸಿದ್ದರೆ, ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ಕೂಡ ತಲೆಕೆಡಿಸಿಕೊಂಡಿದೆ. ಈ ವಿಚಾರವಾಗಿ ಬಿಜೆಪಿ ನಾಯಕ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಮಹತ್ವದ ಚರ್ಚೆ ನಡೆಸಿದ್ದಾರೆ.

ನಿಖಿಲ್ ಅಭ್ಯರ್ಥಿಯಾದರೂ ಬೆಂಬಲ ನೀಡುವೆ: ಹೆಚ್​ಡಿಕೆ ಬಳಿ ಇನ್ನೂ ಏನೇನಂದರು ಯೋಗೇಶ್ವರ್? ಇಲ್ಲಿದೆ ನೋಡಿ
ಸಿಪಿ ಯೋಗೇಶ್ವರ್, ಹೆಚ್​​ಡಿ ಕುಮಾರಸ್ವಾಮಿ
ಹರೀಶ್ ಜಿ.ಆರ್​.
| Updated By: Ganapathi Sharma|

Updated on: Jul 01, 2024 | 12:27 PM

Share

ನವದೆಹಲಿ, ಜುಲೈ 1: ಚನ್ನಪಟ್ಟಣ ಉಪಚುನಾವಣೆಯಲ್ಲಿ​​ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ‌ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​​ ಭಾನುವಾರ ರಾತ್ರಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ, ಅಭ್ಯರ್ಥಿ ಆಯ್ಕೆ ಸಂಬಂಧ 1 ವಾರದಲ್ಲಿ ಸ್ಪಷ್ಟತೆ ನೀಡುವಂತೆ ಕುಮಾರಸ್ವಾಮಿ ಬಳಿ ಯೋಗೇಶ್ವರ್ ಕೇಳಿಕೊಂಡಿದ್ದಾರೆ.

ನೀವು ಸಂಪೂರ್ಣವಾಗಿ ಒಪ್ಪಿದರೆ ನಾನೇ ಅಭ್ಯರ್ಥಿ ಆಗುತ್ತೇನೆ. ಇಲ್ಲವಾದಲ್ಲಿ ನಿಖಿಲ್ ಅಭ್ಯರ್ಥಿಯಾದರೂ ನಾನು ಬೆಂಬಲ ನೀಡುತ್ತೇನೆ. ನೀವೇ ಮುಂದೆ ನಿಂತು ಉಪಚುನಾವಣೆಯನ್ನು​ ನಡೆಸಬೇಕು ಎಂದು ಕುಮಾರಸ್ವಾಮಿ ಬಳಿ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಪಕ್ಷ ತಯಾರಿ ಆರಂಭಿಸಿದೆ. ಅಭ್ಯರ್ಥಿಯನ್ನು ಬೇಗ ಘೋಷಿಸಿದರೆ ನಾವು ಸಿದ್ಧತೆ ಆರಂಭಿಸಬಹುದು ಎಂದು ಯೋಗೇಶ್ವರ್ ಹೇಳಿದ್ದಾರೆ. ಇದೇ ವೇಳೆ, ಈ ವಾರ ಬೆಂಗಳೂರಿಗೆ ಬರುತ್ತೇನೆ. ಮತ್ತೊಮ್ಮೆ ಚರ್ಚಿಸಿ ನಿರ್ಧರಿಸೋಣ ಎಂದು ಕುಮಾರಸ್ವಾಮಿ ಉತ್ತರಿಸಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ, ಕುಮಾರಸ್ವಾಮಿ ಕರ್ಮಭೂಮಿಯಲ್ಲಿ ಸೋಲಿನ ರುಚಿ ತೋರಿಸಲು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಪಣ ತೊಟ್ಟಿದ್ದು, ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಹೀಗಾಗಿ ಡಿಕೆ ಸಹೋದರರ ವಿರುದ್ಧ ಚನ್ನಪಟ್ಟಣ ಮಿನಿ ಸಮರದಲ್ಲಿ ಗೆಲ್ಲಲು ಪುತ್ರ ನಿಖಿಲಗೆ ಕುಮಾರಸ್ವಾಮಿ ಜವಾಬ್ದಾರಿ ವಹಿಸಲಿದ್ದಾರೆ ಎನ್ನಲಾಗಿದೆ.

ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಬದಲು ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಎನ್​​ಡಿಎ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಲು ನಿಖಿಲ್ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರನ್ನ ಬದಲಾವಣೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ: ಅಹಿಂದ ಎಚ್ಚರಿಕೆ

ಡಿಕೆ ಶಿವಕುಮಾರ್ ಈಗಾಗಲೆ ಚನ್ನಪಟ್ಟಣ ಉಪ ಸಮರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ನಿರಂತರವಾಗಿ ಪ್ರವಾಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಭಾನುವಾರದಿಂದ ನಿಖಿಲ್ ಕೂಡ ಚನ್ನಪಟ್ಟಣ ಪ್ರವಾಸ ಆರಂಭಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ರಾಮನಗರ ಜಿಲ್ಲೆಯಲ್ಲಿ ಇದ್ದ ಒಂದು ಕ್ಷೇತ್ರವನ್ನ ಜೆಡಿಎಸ್ ಕಳೆದುಕೊಳ್ಳಬೇಕಾಗುತ್ತದೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದರೂ ಇಡೀ ಜಿಲ್ಲೆಯ ಹಿಡಿತ ಕಡೆದುಕೊಳ್ಳಬೇಕಾಗುತ್ತದೆ. ಕುಮಾರಸ್ವಾಮಿಯ ಕರ್ಮಭೂಮಿಯಲ್ಲಿ ಸೋಲಾದರೆ ಕಾರ್ಯಕರ್ತರು ಚದುರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲ್ಲುವ ಅನಿವಾರ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ