ಬೆಂಗಳೂರು: ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕಿನ ವಿರುದ್ಧ ನೀಡುವ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಂಕೇತಿಕ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಶಿವಾಜಿನಗರದ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಈ ಮಹತ್ವಪೂರ್ಣ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಚಅವರು 4 ಲಕ್ಷ ಲಸಿಕೆಗಳನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡುತ್ತೇವೆ. ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ 3 ಲಕ್ಷ ಲಸಿಕೆ ಬಂದಿದೆ. 1 ಲಕ್ಷ ಲಸಿಕೆ ನಮ್ಮಲ್ಲಿಯೇ ಸಂಗ್ರಹವಿದೆ. ಹೀಗಾಗಿ 4 ಲಕ್ಷ ಲಸಿಕೆ 18 ವರ್ಷ ಮೇಲ್ಪಟ್ಟವರಿಗೆ ನೀಡ್ತೇವೆ ಎಂದು ಸ್ಪಷ್ಟಪಡಿಸಿದರು.
ಇಂದಿನಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತೇವೆ. ಲಸಿಕೆ ನೀಡುವ ಅಭಿಯಾನ ನಿರಂತರವಾಗಿ ನಡೆಯುತ್ತದೆ. ಬಂದಿರುವ ಲಸಿಕೆಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ. ಹೀಗಾಗಿ ಲಸಿಕೆಯನ್ನು ನೀಡುವ ಕೆಲಸ ಮಾಡುತ್ತಿದ್ದೇವೆ, 45 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡುತ್ತೇವೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಭರವಸೆಯ ಮಾತುಗಳನ್ನಾಡಿದರು.
2 ಕೋಟಿ ಲಸಿಕೆ ಖರೀದಿಗೆ ನಾವು ಹಣವನ್ನು ಕೊಟ್ಟಿದ್ದೇವೆ. 3.56 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶವಿದೆ. ಲಸಿಕೆಗೆ ಸೇವಾ ಶುಲ್ಕ 100 ರೂ. ನಿಗದಿ ಮಾಡಿದ್ದೇವೆ. 100 ರೂ.ಗಿಂತ ಹೆಚ್ಚು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಫೇಸ್ಬುಕ್ ಮೂಲಕ ಸಿಎಂ ಯಡಿಯೂರಪ್ಪ ಮನವಿ:
ಕೊರೊನಾ ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚ. ಆದ್ಯತೆಯ ಮೇರೆಗೆ ಕೊವಿಡ್ ಲಸಿಕೆ ನೀಡಲಾಗುತ್ತಿದೆ. ಅರ್ಹರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಿ. ತಮ್ಮ ಸರದಿ ಬಂದಾಗ ತಪ್ಪದೆ ಲಸಿಕೆಯನ್ನು ಪಡೆಯಿರಿ. ಸರ್ಕಾರದೊಂದಿಗೆ ಸಹಕರಿಸಿ, ಸುರಕ್ಷತಾ ನಿಯಮ ಪಾಲಿಸಿ ಎಂದು ಫೇಸ್ಬುಕ್ ಸಂದೇಶದ ಮೂಲಕ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
(chief minister bs yediyurappa inaugurates Karnataka Vaccination Drive in bengaluru)
Published On - 11:49 am, Sat, 1 May 21