ಲಂಚ: ಚಿಕ್ಕಬಳ್ಳಾಪುರದಲ್ಲಿ ಪಿ.ಡಿ.ಓ. ಶ್ರೀನಿವಾಸ್ ಮತ್ತು ಕೋಲಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಮೇಲೆ ಎಸಿಬಿ ದಾಳಿ

| Updated By: ಸಾಧು ಶ್ರೀನಾಥ್​

Updated on: Mar 11, 2022 | 9:48 PM

ಕೋಲಾರದಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಭಾಕರನ್‌ ಮತ್ತು ಜನಾರ್ದನ ಗೌಡ ಹಾಗೂ ಅವರಿಗೆ ನೆರವಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಗುತ್ತಿಗೆ ನೌಕರ ಮನೋಜ್‌ ರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಜಿಲ್ಲಾಡಳಿತ ಭವನದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಎಡಿಸಿ ಸ್ನೇಹಾ ಹೆಸರನ್ನೂ ಹೇಳಿದ್ದರಿಂದ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಲಂಚ: ಚಿಕ್ಕಬಳ್ಳಾಪುರದಲ್ಲಿ ಪಿ.ಡಿ.ಓ. ಶ್ರೀನಿವಾಸ್ ಮತ್ತು ಕೋಲಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಮೇಲೆ ಎಸಿಬಿ ದಾಳಿ
ಕೋಲಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹಾ ಮೇಲೆ, ಚಿಕ್ಕಬಳ್ಳಾಪುರದಲ್ಲಿ ಪಿ.ಡಿ.ಓ. ಮೇಲೆ ಎಸಿಬಿ ದಾಳಿ!
Follow us on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ 4,500 ರೂ ಲಂಚದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸೋಮೇನಹಳ್ಳಿ ಗ್ರಾಮದ ಚಿಂತಕಾಯಲಪಲ್ಲಿ ವೆಂಕಟೇಶ್ ರಿಂದ ಹಣ ಪಡೆಯುತ್ತಿದ್ದ ವೇಳೆ ಪಿಡಿಒ ಶ್ರೀನಿವಾಸ್ ಮೇಲೆ ದಾಳಿ ನಡೆದಿದೆ. ಮೂರು ಇ- ಖಾತೆಗಳನ್ನು ಮಾಡಿಕೊಡಲು 6 ಸಾವಿರ ರೂ ಹಣ ನೀಡುವಂತೆ ಪಿಡಿಒ ಶ್ರೀನಿವಾಸ್ ಬೇಡಿಕೆ ಇಟ್ಟಿದ್ದರು. ದೂರು ದಾಖಲಿಸಿಕೊಂಡು ದಾಳಿ ನಡೆಸಿದ ಚಿಕ್ಕಬಳ್ಳಾಪುರ ಎಸಿಬಿ ಅಧಿಕಾರಿಗಳು ಪಿಡಿಓ ಶ್ರೀನಿವಾಸ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇಷ್ಟಕ್ಕೂ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು ಏಕೆ ಗೊತ್ತಾ?
ಜಮೀನು ಭೂ ಪರಿವರ್ತನೆಯ ಆದೇಶದ ನಕಲು ಪ್ರತಿ ನೀಡಲು ಲಂಚ ಪಡೆಯುತ್ತಿದ ವೇಳೆ ಕೋಲಾರ ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆಯ ಉಪ ತಹಶೀಲ್ದಾರ್‌ ಎಂ.ಪ್ರಭಾಕರನ್‌ ಸೇರಿದಂತೆ 3 ಜನರನ್ನ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಕೋಲಾರ ಹೊರ ವಲಯದ ಟಮಕ ಬಳಿ ಇರುವ ಜಿಲ್ಲಾಡಳಿತ ಭವನದಲ್ಲಿ ಎಡಿಸಿ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ ವ್ಯಕ್ತಿಯೊಬ್ಬರು ಜಿಲ್ಲೆಯ ಕೋಲಾರ ಹಾಗೂ ಮಾಲೂರು ತಾಲ್ಲೂಕು ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳಲ್ಲಿನ ಜಮೀನುಗಳ ಭೂ ಪರಿವರ್ತನೆ ಆದೇಶದ ನಕಲು ಪ್ರತಿ ಕೋರಿ ಫೆಬ್ರವರಿ 4 ಮತ್ತು 22ರಂದು ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆಗೆ 56 ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳಿಗೆ ಸಂಬಂಧಿಸಿದ ದಾಖಲಾತಿ ನೀಡಲು ಪ್ರತಿ ಅರ್ಜಿಗೆ ತಲಾ ₹ 5 ಸಾವಿರದಂತೆ ಒಟ್ಟಾರೆ ₹ 2.80 ಲಂಚ ಕೊಡುವಂತೆ ಕೇಳಿದ್ದ ಪ್ರಭಾಕರನ್‌, ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಜನಾರ್ದನ ಗೌಡ ಅವರು ಮುಂಗಡವಾಗಿ ಅರ್ಜಿದಾರರಿಂದ ₹ 10 ಸಾವಿರ ಪಡೆದಿದ್ದರು. ಈ ಸಂಬಂಧ ಅರ್ಜಿದಾರರು ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟಿದ್ದರು.

ಈ ದೂರು ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಭಾಕರನ್‌ ಮತ್ತು ಜನಾರ್ದನ ಗೌಡ ಹಾಗೂ ಅವರಿಗೆ ನೆರವಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಗುತ್ತಿಗೆ ನೌಕರ ಮನೋಜ್‌ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಜಿಲ್ಲಾಡಳಿತ ಭವನದಲ್ಲಿ ಬಂಧಿಸಿದ್ದಾರೆ. ಇನ್ನು ಸಿಕ್ಕಿಬಿದ್ದ ಆರೋಪಿಗಳು ಎಡಿಸಿ ಡಾ. ಸ್ನೇಹಾ ಅವರ ಹೆಸರನ್ನೂ ಹೇಳಿದ್ದರ ಹಿನ್ನೆಲೆಯಲ್ಲಿ ಎಡಿಸಿ ಸ್ನೇಹಾ ಅವರನ್ನು ಎಸಿಬಿ ಅಧಿಕಾರಿಗಳು ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದ್ದಾರೆ.

ಎಂಎಲ್​ಸಿ ಸೂರಜ್ ರೇವಣ್ಣಗೆ ಹೈಕೋರ್ಟ್‌ನಿಂದ ಸಮನ್ಸ್ ಜಾರಿ
ಬೆಂಗಳೂರು: ಡಾ.ಸೂರಜ್ ರೇವಣ್ಣ(Suraj Reavanna) ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ, ಅವರ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಎಲ್. ಹನುಮೇಗೌಡ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಇಂದು (ಮಾರ್ಚ್​ 11, ಶುಕ್ರವಾರ) ನಡೆದಿದೆ. ಅಸಮರ್ಪಕ ಮಾಹಿತಿಯುಳ್ಳ ನಾಮಪತ್ರ ಸಲ್ಲಿಕೆ ಆರೋಪ ಮಾಡಿದ್ದು, ವಿಚಾರಣೆ ನಂತರ ಡಾ.ಸೂರಜ್ ರೇವಣ್ಣಗೆ ಹೈಕೋರ್ಟ್‌ನಿಂದ ಸಮನ್ಸ್ ಜಾರಿ ಮಾಡಲಾಗಿದೆ.

ತಮ್ಮ ವಿವಾಹದ ಮಾಹಿತಿ ಮುಚ್ಚಿಟ್ಟ ಆರೋಪ, ಪತ್ನಿಯ ಆಸ್ತಿ, ಆಭರಣದ ಮಾಹಿತಿ ನೀಡದ ಆರೋಪಗಳ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ (ಮೇಲ್ಮನೆ) ಆಯ್ಕೆಯಾಗಿದ್ದನ್ನು ಅಸಿಂಧು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ಕುರಿತು ಹೈಕೋರ್ಟ್‌ ವಿಚಾರಣೆ ನಡೆಸಿದ್ದು, ಸಮನ್ಸ್ ಜಾರಿ ಮಾಡಿದೆ.

ಇದನ್ನೂ ಓದಿ:
ರಾಜ್ಯದಲ್ಲಿ ಇಂದು ಘೋರ ಅಪಘಾತಗಳ ಸರಮಾಲೆ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಅಪ್ಪ, ಮಗಳು ಬಲಿ

ಇದನ್ನೂ ಓದಿ:
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ -ಸಿ.ಎಂ.ಇಬ್ರಾಹಿಂ

Published On - 9:19 pm, Fri, 11 March 22