ಅಧಿಕ ಮಾಸದ ಎಫೆಕ್ಟ್: ಶುಭ ಸಮಾರಂಭಗಳಿಗೆ ಬ್ರೇಕ್; ಚಿಕ್ಕಬಳ್ಳಾಪುರದಲ್ಲಿ ತರಕಾರಿ ಬೆಲೆ ದಿಢೀರ್ ಕುಸಿತ

ಅಧಿಕ ಮಾಸದ ಕಾರಣ ಶುಭ ಸಮಾರಂಭಗಳು ಕಡಿಮೆಯಾದ್ದರಿಂದ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಬೇಡಿಕೆ ಕುಸಿದಿದೆ. ಸೌತೆಕಾಯಿ, ಟೊಮ್ಯಾಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ಬೆಲೆ ಗಣನೀಯವಾಗಿ ಇಳಿದಿದೆ. ಇದು ಗ್ರಾಹಕರಿಗೆ ಖುಷಿ ನೀಡಿದರೆ, ರೈತರು ತಮ್ಮ ಬೆಳೆ ವೆಚ್ಚವನ್ನು ಭರಿಸಲು ಹೆಣಗಾಡುತ್ತಿದ್ದಾರೆ.

ಅಧಿಕ ಮಾಸದ ಎಫೆಕ್ಟ್: ಶುಭ ಸಮಾರಂಭಗಳಿಗೆ ಬ್ರೇಕ್; ಚಿಕ್ಕಬಳ್ಳಾಪುರದಲ್ಲಿ ತರಕಾರಿ ಬೆಲೆ ದಿಢೀರ್ ಕುಸಿತ
ಎಪಿಎಂಸಿ ತರಕಾರಿ ಮಾರುಕಟ್ಟೆ
Image Credit source: tv9 kannada
Edited By:

Updated on: May 22, 2026 | 10:44 PM

ಚಿಕ್ಕಬಳ್ಳಾಪುರ, ಮೇ 22: ಅಧಿಕ ಮಾಸ (adhika masa) ಹಿನ್ನೆಲೆ ಮದುವೆ, ಮುಂಜಿ ಸೇರಿದಂತೆ ಶುಭ ಸಮಾರಂಭಗಳು ಕಡಿಮೆಯಾಗಿವೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರದ (chikkaballapur) ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ (Vegetable Prices Down). ಯಾಕಾದರೂ ಈ ಅಧಿಕ ಮಾಸ ಬಂತೋ ಎಂದು ರೈತರು ಕಣ್ಣೀರಿಡುವಂತಾಗಿದೆ.

ಮುಖ್ಯಾಂಶಗಳು

  • ಅಧಿಕ ಮಾಸದ ಪರಿಣಾಮ ಚಿಕ್ಕಬಳ್ಳಾಪುರ ಮಾರುಕಟ್ಟೆ ಮೇಲೆ ಪ್ರಭಾವ
  • ತರಕಾರಿ ಬೆಲೆ ಕುಸಿತ: ರೈತರಿಗೆ ಭಾರೀ ನಷ್ಟ
  • ಗ್ರಾಹಕರಿಗೆ ಸಂತಸ, ರೈತರಿಗೆ ಕಣ್ಣೀರು

ಅಧಿಕ ಮಾಸ ಹಿನ್ನೆಲೆ ರಾಜ್ಯದ ಹಲವೆಡೆ ಮದುವೆ, ಗೃಹಪ್ರವೇಶ, ಮುಂಜಿ ಸೇರಿದಂತೆ ಶುಭ ಸಮಾರಂಭಗಳು ಸ್ಥಗಿತಗೊಂಡಿವೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಚಿಕ್ಕಬಳ್ಳಾಪುರದಿಂದ ರಾಜ್ಯ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಿಗೆ ಪ್ರತಿದಿನ ತರಕಾರಿಗಳ ರವಾನೆ ಆಗುತ್ತಿತ್ತು. ಆದರೆ ಇದೀಗ ಬೇಡಿಕೆ ಕಡಿಮೆಯಾದ ಕಾರಣ ತರಕಾರಿಗಳ ಬೆಲೆ ಇಳಿಕೆಯಾಗಿದೆ.

ತರಕಾರಿಗಳ ಇಂದಿನ ದರ ಸರಣಿ (ಕುಸಿತದ ವಿವರ)

  • ಸೌತೆಕಾಯಿ: ವಾರದ ಹಿಂದೆ ಒಂದು ಮೂಟೆಗೆ 600 ಇದ್ದ ಬೆಲೆ, ಈಗ ನೇರವಾಗಿ 300 ರೂ ಕ್ಕೆ ಕುಸಿದಿದೆ.
  • ಟೊಮ್ಯಾಟೊ: 14 ಕೆಜಿಯ ಒಂದು ಬಾಕ್ಸ್ ಬೆಲೆ 600 ರಿಂದ 500 ರೂ.ಕ್ಕೆ ಇಳಿಕೆಯಾಗಿದೆ.
  • ಉರುಳಿಕಾಯಿ (ಬೀನ್ಸ್): ಕೆಜಿಗೆ 120 ರಷ್ಟಿದ್ದ ಬಂಗಾರದಂತಹ ಬೆಲೆ, ಈಗ ದಿಢೀರನೆ 70 ರೂ. ಕ್ಕೆ ಇಳಿದಿದೆ.
  • ಕ್ಯಾರೆಟ್: ಪ್ರತಿ ಕೆಜಿಗೆ 30 ರಿಂದ 25 ರೂ. ಕ್ಕೆ ಕುಸಿತ ಕಂಡಿದೆ.
  • ಬೀಟ್‌ರೂಟ್: ಕೆಜಿಗೆ 25 ರಷ್ಟಿದ್ದ ಬೆಲೆ, ಸದ್ಯ 17 ರೂ.ಕ್ಕೆ ತಲುಪಿದೆ.

ಗ್ರಾಹಕರಿಗೆ ಖುಷಿ: ರೈತರಿಗೆ ಕಣ್ಣೀರು

ತರಕಾರಿ ಬೆಲೆ ಕುಸಿತದಿಂದ ಗ್ರಾಹಕರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. ಆದರೆ ರೈತರಿಗೆ ಮಾತ್ರ ಸಂಕಷ್ಟ ಎದುರಾಗಿದೆ. ಬೆಳೆ ಬೆಳೆಸಲು ಮಾಡಿದ ಖರ್ಚು ಕೂಡ ವಾಪಸ್ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸಾಗಾಟ ವೆಚ್ಚ, ಕೂಲಿ ಕಾರ್ಮಿಕರ ಖರ್ಚು ವೆಚ್ಚ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ

ಒಟ್ಟಾರೆ ಅಧಿಕ ಮಾಸದ ಪರಿಣಾಮ ಇದೀಗ ತರಕಾರಿ ಮಾರುಕಟ್ಟೆಯ ಮೇಲೂ ಬೀರಿದೆ. ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿರುವ ಕಾರಣ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us