ಬೆಂಗಳೂರು, ಮಾ.19: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಡಿವಿ ಸದಾನಂದಗೌಡ (DV Sadananda Gowda) ಅವರು ನಾಳೆ ಬಿಜೆಪಿ ಮಾಸ್ಟರ್ ಸ್ಟ್ರೋಕ್ ಕೊಡುವ ಸಾಧ್ಯತೆ ಇದೆ. ಈ ನಡುವೆ ಸದಾನಂದಗೌಡರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದ ಬಿಜೆಪಿ ಹೈಕಮಾಂಡ್, ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಕ್ಷೇತ್ರದ ಟಿಕೆಟ್ ಆಫರ್ ಕೊಟ್ಟು ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದೆ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಬಗ್ಗೆ ಹೈಕಮಾಂಡ್ ಆಫರ್ ನೀಡಿದ್ದರೂ ಸದಾನಂದಗೌಡ ಅವರು ಸಹಮತ ಸೂಚಿಸಿಲ್ಲ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳುವ ಮುನ್ನ ಸದಾನಂದಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳು ಪ್ರಯತ್ನ ನಡೆಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ: ಟಿಕೆಟ್ ಘೋಷಣೆಗೂ ಮುನ್ನ ಕ್ಷೇತ್ರದ ಜನರಿಗೆ ಕೆ ಸುಧಾಕರ್ ಮನವಿ
ವರಿಷ್ಠರ ಜೊತೆ ಚರ್ಚೆ ನಡೆಸುವ ಬಗ್ಗೆ ಸದಾನಂದಗೌಡರಿಗೆ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಈ ಹಿಂದೆ ಆಪ್ತರನ್ನು ಕಳುಹಿಸಿ ಮನವೊಲಿಕೆ ಮಾಡುವ ಯತ್ನ ವಿಜಯೇಂದ್ರ ನಡೆಸಿದ್ದರು. ಒಂದು ಕಡೆ, ಬೆಳಗ್ಗೆ ವರಿಷ್ಠರ ಕರೆ ಹಿನ್ನೆಲೆ ಸದಾನಂದಗೌಡ ಅವರು ಸುದ್ದಿಗೋಷ್ಠಿ ಮುಂದೂಡಿದರೆ, ಇನ್ನೊಂದೆಡೆ, ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು ಸದಾನಂದಗೌಡರನ್ನು ಸಂಪರ್ಕಿಸುತ್ತಿದೆ. ಪಕ್ಷಕ್ಕೆ ಸೇಳೆಯುವ ಪ್ರಯತ್ನ ನಡೆಸುತ್ತಿದೆ.
ಕರಾವಳಿ ಭಾಗದಿಂದ ಚಿಕ್ಕಬಳ್ಳಾಪುರದ ಟಿಕೆಟ್ ಆಫರ್ ಪಡೆಯುತ್ತಿರುವ ಎರಡನೇ ರಾಜಕಾರಣಿ ಸದಾನಂದಗೌಡ ಅವರಾಗಿದ್ದಾರೆ. ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡನೇ ಬಾರಿ ಸೋಲು ಅನುಭವಿಸಿದ್ದರು. ಇದೀಗ ಮಂಗಳೂರು ಭಾಗದ ಸದಾನಂದ ಗೌಡ ಅವರಿಗೆ ಚಿಕ್ಕಬಳ್ಳಾಪುರದ ಟಿಕೆಟ್ ಆಫರ್ ಪಡೆದಿದ್ದಾರೆ. ಆದರೆ, ಇದಕ್ಕೆ ಗೌಡರು ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಮತ್ತು ವಿಶ್ವನಾಥ್ (ಪುತ್ರನಿಗೆ) ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಸದಾನಂದಗೌಡರಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ. ಉಡುಪಿ-ಚಿಕ್ಕಮಗಳುರು ಕ್ಷೇತ್ರದಲ್ಲಿ ಸಿಟಿ ರವಿ-ಶೋಭ ಕರಂದ್ಲಾಜೆ ನಡುವಿನ ಟಿಕೆಟ್ ಜಟಾಪಟಿ ಹಿನ್ನೆಲೆ ಟಿಕೆಟ್ ಕೋಟ ಶ್ರೀನಿವಾಸ್ ಪೂಜಾರಿ ಪಾಲಾಯಿತು. ಇದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್-ವಿಶ್ವನಾಥ್ ಹಗ್ಗಜಗ್ಗಾಟದಲ್ಲಿ ಸದಾನಂದಗೌಡರಿಗೆ ಟಿಕೆಟ್ ಸಿಗುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.
ಸದಾನಂದಗೌಡ ಅವರಿಗೆ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಫರ್ ನೀಡಿದೆಯಾದರೂ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಹೌದು, ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ನಡುವೆ ಪೈಪೋಟಿ ನಡೆಯುತ್ತಿದೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಸುಧಾಕರ್, ಟಿಕೆಟ್ ಘೋಷಣೆಗೂ ಮುನ್ನ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇತ್ತ, ವಿಶ್ವನಾಥ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದು, ಕ್ಷೇತ್ರದಲ್ಲಿ ರ್ಯಾಲಿಗಳ ಮೂಲಕ ಹವಾ ಸೃಷ್ಟಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Tue, 19 March 24