ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್: 14 ಲಕ್ಷ ರೂ ವಂಚನೆ
ನಿತ್ಯ ಒಂದಿಲ್ಲೊಂದು ಸೈಬರ್ ವಂಚನೆ ಪ್ರಕರಣಗಳು ವರದಿ ಆಗುತ್ತಿವೆ. ಈ ಸೈಬರ್ ವಂಚನೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನ ಸಾಮಾನ್ಯರಿಂದ ಹಿಡಿದು ಸ್ಟಾರ್ ನಟ-ನಟಿಯರು ಸೇರಿದಂತೆ ರಾಜಕಾರಣಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಬಿಜೆಪಿ ಸಂಸದರ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂ ಹಣ ದೋಚಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 22: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪತ್ನಿಗೆ (k sudhakar wife) ಡಿಜಿಟಲ್ ಅರೆಸ್ಟ್ (Digital arrest) ಮಾಡಿ ವಂಚಕರು ಬರೋಬ್ಬರಿ 14 ಲಕ್ಷ ರೂ ಹಣ ದೋಚಿರುವಂತಹ ಘಟನೆ ಬೆಳಕಿಗೆ ಬಂದಿದೆ. ಆ.26ರಂದೇ ಪಶ್ಚಿಮ ಸೈಬರ್ ಠಾಣೆಗೆ ಡಾ.ಪ್ರಿಯಾ ದೂರು ನೀಡಿದ್ದರು. ಗೋಲ್ಡನ್ ಅವರ್ನಲ್ಲಿ ದೂರು ನೀಡಿದ್ದರಿಂದ 14 ಲಕ್ಷ ರೂ ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್ ವಂಚಕರ ಜಾಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪತ್ನಿ ಡಾ.ಪ್ರಿಯಾ ಅವರಿಗೆ ಆಗಸ್ಟ್ 26ರಂದು ಸೈಬರ್ ವಂಚಕರಿಂದ ಫೋನ್ ಕಾಲ್ ಬಂದಿದೆ. ನಾವು ಮುಂಬೈ ಸೈಬರ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಎಂದು ಹೇಳಿಕೊಂಡು ವಂಚಿಸಿದ್ದಾರೆ.
ವಂಚಿಸಿದ್ದು ಹೇಗೆ
ಅಪರಿಚಿತ ವ್ಯಕ್ತಿಯೊಬ್ಬ ನಿಮ್ಮ ದಾಖಲೆಗಳನ್ನು ಬಳಸಿಕೊಂಡಿದ್ದಾರೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾನೆ ಎಂದು ಸೈಬರ್ ವಂಚಕರು ಕಥೆ ಕಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹಬ್ಬದ ಸಂದರ್ಭದಲ್ಲಿ ಆ್ಯಕ್ಟೀವ್ ಆದ ಸೈಬರ್ ವಂಚಕರು: ಬ್ಯಾಂಕ್ ಆಫರ್ ಹೆಸರಿನಲ್ಲಿ ವಂಚನೆ
ಇನ್ನು ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ನಲ್ಲಿ ಡಾ. ಪ್ರಿಯಾ ದೂರು ದಾಖಲಿಸಿದ್ದರು. ಇದರಿಂದ ತಕ್ಷಣ ಹಣ ವರ್ಗಾವಣೆಯಾಗಿದ್ದ ಅಕೌಂಟ್ ಫ್ರೀಜ್ ಆಗಿದೆ. ಬಳಿಕ ಹಣ ವಾಪಸ್ಗೆ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಹಿರಿಯ ಐಎಎಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಸೈಬರ್ ಪೊಲೀಸರ ಮೊರೆ ಹೋದ ಮಣಿವಣ್ಣನ್!
ಸೆ.3ರಂದು ಹಣ ವಾಪಸ್ ಮಾಡಲು ಸಂಬಂಧಪಟ್ಟ ಬ್ಯಾಂಕ್ಗೆ ಕೋರ್ಟ್ ಆದೇಶಿಸಿದೆ. ಇದರಿಂದ ಸಂಪೂರ್ಣ 14 ಲಕ್ಷ ರೂ. ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್ ವಂಚಕರ ಜಾಲ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಐಎಎಸ್ ಅಧಿಕಾರಿ ಹೆಸರಲ್ಲೂ ವಂಚನೆ
ಇನ್ನು ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ಗೆ ಸೈಬರ್ ವಂಚಕರು ವಂಚಿಸಿದ್ದರು. ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಫರ್ನಿಚರ್ ಮಾರಾಟದ ಹೆಸರಿನಲ್ಲಿ ಅವರ ಆಪ್ತರಿಗೆ ವಂಚಿಸಲಾಗಿತ್ತು. ಬಳಿಕ ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೇಟ್ ಮಾಡುವಂತೆ ಪೊಲೀಸರಲ್ಲಿ ಮಣಿವಣ್ಣನ್ ಮನವಿ ಮಾಡಿಕೊಂಡಿದ್ದರು.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:59 pm, Mon, 22 September 25
