ಇಂದಿನಿಂದ 3 ದಿನಗಳ ಕಾಲ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರರವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಇಂದು ಸಾರ್ವಜನಿಕರ ಕುಂದು, ಕೊರತೆ, ವಿಚಾರಣೆ ಸಭೆ ನಡೆಸಿದರು. ಸಭೆಗೆ ಸರ್ಕಾರಿ ಮಹಿಳಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರು ಆಗಮಿಸಿ ತಮ್ಮ ಅಳಲು ತೋಡಿಕೊಂಡಿದ್ದು ಮನಮುಟ್ಟುವಂತಿತ್ತು. ಈ ಕುರಿತು ಒಂದು ವರದಿ…
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಸಭಾಂಗಣಕ್ಕೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರರವರು ಆಗಮಿಸಿ ಸಾರ್ವಜನಿಕರಿಂದ ಕುಂದು, ಕೊರತೆ ಆಲಿಸುತ್ತಿದ್ದಾರೆಂಬುದನ್ನು ಅರಿತ ಚಿಕ್ಕಬಳ್ಳಾಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಸಭೆಗೆ ಆಗಮಿಸಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಚಿಕ್ಕಬಳ್ಳಾಪುರ ನಗರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆಗಿ ದಶಕವೇ ಕಳೆದರೂ ಇದುವರೆಗೂ ಸೂಕ್ತ ಕಟ್ಟಡವಾಗಲೀ, ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ತಾಣ, ಲೈಬ್ರರಿ ಸೇರಿದಂತೆ ಯಾವೊಂದು ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ. ಉಪಲೋಕಾಯುಕ್ತರಾದ ತಾವಾದರೂ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ಅವಲತ್ತುಕೊಂಡರು.
ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಪ್ರಾರಂಭವಾದಾಗಿನಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ಕೊಠಡಿ ಹಾಗೂ ಪಾಳುಬಿದ್ದ ಸ್ಥಿತಿಯಲ್ಲಿರುವ ನಗರದ ಸಿಟಿಜನ್ ಕ್ಲಬ್‌ನಲ್ಲಿ ವಿದ್ಯಾರ್ಥಿನಿಯರಿಗೆ ಪಾಠ, ಪ್ರವಚನಗಳು ನಡೆಯುತ್ತಿವೆ. ನೂತನ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಅಮಾನಿ ಗೋಪಾಲಕೃಷ್ಣ ಕೆರೆಯ ಹಿನ್ನೀರಿನ ಅಂಗಳದಲ್ಲಿ ಕಾಲೇಜು ಕಾಮಗಾರಿ ನಡೆಯುತ್ತಿದೆ.
ಒಂದು ವರ್ಷದಲ್ಲಿ ಮುಗಿಯಬಹುದಾದ ಕಾಮಗಾರಿ 5-6 ವರ್ಷವಾದರೂ ಮುಗಿದಿಲ್ಲ. ಇದರಿಂದ ಬಡ ವಿದ್ಯಾರ್ಥಿನಿಯರು ಪಡಬಾರದ ಕಷ್ಟಪಡುತ್ತಿದ್ದಾರೆ. ವಿದ್ಯಾರ್ಥಿನಿಯರ ಸಮಸ್ಯೆಯನ್ನು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳ ಗಮನಕ್ಕೆ ತಂದು, ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರರವರು ಭರವಸೆ ನೀಡಿದರು. ಆದರೆ ವಿದ್ಯಾರ್ಥಿನಿಯರ ಸಮಸ್ಯೆ ಕೇಳಿದರೆ ಕರುಳು ಚುರುಕ್ ಎನ್ನುತ್ತೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡೇ ಇರುವ ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತವಾದ ಒಂದು ಸರ್ಕಾರಿ ಕಾಲೇಜು ಕಟ್ಟಡ ನಿರ್ಮಿಸಲು ಆಗಿಲ್ಲ. ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕೆಲವು ಸಂಸ್ಥೆಗಳ ಸಿ.ಎಸ್.ಆರ್. ಅನುದಾನವನ್ನು ಬಳಸಿಕೊಂಡು ಕಾಲೇಜು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಸಿ.ಎಸ್.ಆರ್. ಹಣ ನೀಡುವುದಾಗಿ ಭರವಸೆ ನೀಡಿದ್ದ ಕೆಲವು ಸಂಸ್ಥೆಗಳು ಹಣ ಬಿಡುಗಡೆ ಮಾಡದ ಕಾರಣ ಕಾಮಗಾರಿ ಕುಂಠಿತಗೊಂಡಿದೆ.
ಇನ್ನು ಕಾಮಗಾರಿ ನಿರ್ವಹಿಸುತ್ತಿರುವ ಕೆ.ಆರ್.ಡಿ.ಎಲ್. ಇಂಜನಿಯರ್‌ಗಳು ಅವೈಜ್ಞಾನಿಕವಾಗಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಕಾರಣ ವಿದ್ಯಾರ್ಥಿನಿಯರ ಕನಸು ನನಸಾಗುತ್ತಿಲ್ಲ. ಇನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ರಸ್ತೆಗೆ ಹೊಂದಿಕೊಂಡಿರುವ ಕಾಮಗಾರಿ ಕುಂಟುತ್ತಿದ್ದರೂ ದೊಡ್ಡದೊಡ್ಡ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿರುವ ಅಧಿಕಾರಿಗಳು ಸಹಾ ಕುರುಡರಾಗಿದ್ದಾರಾ ಎಂದು ವಿದ್ಯಾರ್ಥಿನಿಯರು ಪ್ರಶ್ನಿಸುತ್ತಿದ್ದಾರೆ.