
ಚಿಕ್ಕಬಳ್ಳಾಪುರ, ಏಪ್ರಿಲ್ 29: ಕಳೆದ ವರ್ಷ ನವೆಂಬರ್ 23 ರಂದು 6640 ಮೊಬೈಲ್ಗಳನ್ನು (Moblie) ಹೊತ್ತು ಟ್ರಕ್ವೊಂದು ಉತ್ತರಪ್ರದೇಶದ (Uttar Pradesh) ನೊಯ್ಡಾದಿಂದ ಬೆಂಗಳೂರಿಗೆ (Bengaluru) ರಾಷ್ಟ್ರೀಯ ಹೆದ್ದಾರಿ 44 ರ ಮೂಲಕ ಬರುತ್ತಿತ್ತು. ಇನ್ನೇನು, ಕೇವಲ 50 ಕಿಮೀ ಸಾಗಿದರೆ ಬೆಂಗಳೂರು ತಲುಪಬೇಕಿತ್ತು. ಆದರೆ, ದಿನ ಕಳೆದರೂ ಟ್ರಕ್ ಬೆಂಗಳೂರು ತಲುಪಲೇ ಇಲ್ಲ. ಹೀಗಾಗಿ ಕಂಪನಿಯವರು ಜಿಪಿಎಸ್ ಆಧರಿಸಿ ಚೆಕ್ ಮಾಡಿದಾಗ ಟ್ರಕ್ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಲ್ಲಿಸಲಾಗಿತ್ತು.
ಸ್ಥಳಕ್ಕೆ ಹೋಗಿ ನೋಡಿದಾಗ ಟ್ರಕ್ ಇದೆ, ಆದರೆ, ಚಾಲಕ ಇರಲಿಲ್ಲ. ಟ್ರಕ್ ಚಾಲಕನ ಕ್ಯಾಬಿನ್ ನಿಂದ ರಂದ್ರ ಕೊರೆಯಲಾಗಿತ್ತು. ಮೊಬೈಲ್ಗಳನ್ನು ಮತ್ತೊಂದು ಟ್ರಕ್ಗೆ ತುಂಬಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು. 6640 ಮೊಬೈಲ್ಗಳ ಪೈಕಿ 5140 ಮೊಬೈಲ್ಗಳನ್ನು ಕಳವು ಮಾಡಲಾಗಿತ್ತು. ಉಳಿದ ಮೊಬೈಲ್ಗಳು ಟ್ರಕ್ನಲ್ಲಿ ಉಳಿದುಕೊಂಡಿದ್ದವು.
ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ತಾನ್, ಹಿಮಾಚಲ ಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ತನಿಖೆ ನಡೆಸಿ ಉತ್ತರ ಭಾರತದ ಕುಖ್ಯಾತ ಏಳು ಜನ ದರೋಡೆಕೊರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮಹಮದ್ ಮುಸ್ತಾಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ, ಹಾಗೂ ಯೂಸುಫ್ ಖಾನ್ನನ್ನ ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಿದ್ದ ಟ್ರಕ್ ಸೇರಿದಂತೆ ಕಳವು ಮಾಡಿದ್ದ 5140 ಮೊಬೈಲ್ಗಳ ಪೈಕಿ 56 ಮೊಬೈಲ್ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು, ಕಳವು ಮಾಡಿದ ಎಲ್ಲಾ ಮೊಬೈಲ್ಗಳನ್ನು ಕಳ್ಳರು ದೆಹಲಿಯಲ್ಲಿ ಮಾರಾಟ ಮಾಡಿದ್ದಾರೆ.
ಅಲ್ಲಿಂದ ಮೊಬೈಲ್ಗಳು ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಆಗಿವೆ. ಸರಿ ಸುಮಾರು ನಾಲ್ಕೂವರೆ ಕೋಟಿ ಮೌಲ್ಯದ ಮೊಬೈಲ್ಗಳನ್ನ ಕಳ್ಳರು ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ಖಾತೆಯಲ್ಲಿದ್ದ 20 ಲಕ್ಷ ಹಣವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಹರಿಯಾಣದ ಪಲ್ವಾಲಾ ಜಿಲ್ಲೆಯ ಆಲಿಮಿಯೋ ಗ್ರಾಮದವರಾಗಿರುವ ಕಳ್ಳರನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ಆಟ್ಯಾಕ್ ಮಾಡಿದ್ದರು. ಸಾಕಷ್ಟು ಹರಸಹಾಸ ಪಟ್ಟು ಕಳ್ಳರನ್ನ ಬಂಧಿಸಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂಎಲ್ಸಿಯ ಸಂಬಂಧಿಯಿಂದ ಫೈರಿಂಗ್
ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ 2 ವರ್ಷಗಳ ಹಿಂದೆ ನಡೆದಿರುವ 9 ಕೋಟಿಯ ಐಪೋನ್ ಮೊಬೈಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರಿಂದ ಪಶ್ಚಿಮ ಬಂಗಾಳದ ಪೊಲೀಸರು ಬಾಡಿ ವಾರೆಂಟ್ ಮೇಲೆ ಪಡೆದುಕೊಂಡಿದ್ದಾರೆ. ಕರ್ನಾಟಕದ ಪೊಲೀಸರಿಗೆ ದೇಶಾದ್ಯಂತ ಪ್ರಶಂಸೆಯ ಸುರಿಮಳೆಗೈಯಲಾಗುತ್ತಿದೆ.