ತೆರಿಗೆ ವಂಚಿಸಿ ಗಣಿದಣಿಗಳ ಕಳ್ಳಾಟ: ಕಣ್ಣಿದ್ದು ಕುರುಡಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು!

ಕಲ್ಲುಕ್ವಾರಿ, ಸ್ಟೋನ್ ಕ್ರಷರ್, ಗ್ರಾನೈಟ್ ಗಣಿಗಾರಿಕೆಯಲ್ಲಿ ಆಗುತ್ತಿರುವ ರಾಜಧನ-ರಾಯಲ್ಟಿ ವಂಚನೆಯ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಸರಣಿ ವರದಿಗಳನ್ನು ಪ್ರಕಟ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಣ್ಣು ತೆರೆಸಿತ್ತು. ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಲ್ಲುಕ್ವಾರಿ, ಕ್ರಷರ್, ಟಿಪ್ಪರ್ ಮಾಫಿಯಾ ಕುಳಗಳು ಈಗ ತೆರಿಗೆ ವಂಚನೆಯ ಹಾದಿ ಹಿಡಿದಿದ್ದಾರೆ.

ತೆರಿಗೆ ವಂಚಿಸಿ ಗಣಿದಣಿಗಳ ಕಳ್ಳಾಟ: ಕಣ್ಣಿದ್ದು ಕುರುಡಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು!
ವಾಣಿಜ್ಯ ತೆರಿಗೆ ಇಲಾಖೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 18, 2023 | 6:07 PM

ಚಿಕ್ಕಬಳ್ಳಾಫುರ, ಅಕ್ಟೋಬರ್​​ 18: ಬಳ್ಳಾರಿಯ ಐರನ್‍ಒರ್ ಗಣಿಗಾರಿಕೆ (mining) ಯನ್ನೇ ಮೀರಿಸಿ ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಬೆಳೆದುನಿಂತಿದೆ. ಕಲ್ಲುಕ್ವಾರಿ, ಸ್ಟೋನ್ ಕ್ರಷರ್, ಗ್ರಾನೈಟ್ ಗಣಿಗಾರಿಕೆಯಲ್ಲಿ ಆಗುತ್ತಿರುವ ರಾಜಧನ-ರಾಯಲ್ಟಿ ವಂಚನೆಯ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಸರಣಿ ವರದಿಗಳನ್ನು ಪ್ರಕಟ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಣ್ಣು ತೆರೆಸಿತ್ತು. ವರದಿಯಿಂದ ಎಚ್ಚೆತ್ತಿದ್ದ ಅಧಿಕಾರಿಗಳು ರಾಜಧನ (ರಾಯಲ್ಟಿ-ಎಂಡಿಪಿ) ಸಂದಾಯಕ್ಕೆ ವಿನೂತನ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ರಾಜಧನ ಸೋರಿಕೆ ತಡೆಯಲು ಕ್ರಮಕೈಗೊಂಡಿದೆ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಲ್ಲುಕ್ವಾರಿ, ಕ್ರಷರ್, ಟಿಪ್ಪರ್ ಮಾಫಿಯಾ ಕುಳಗಳು ಈಗ ತೆರಿಗೆ ವಂಚನೆಯ ಹಾದಿ ಹಿಡಿದಿದ್ದಾರೆ.

ತೆರಿಗೆ ವಂಚಿಸಿ ಗಣಿದಣಿಗಳ ಕಳ್ಳಾಟ

ಚಿಕ್ಕಬಳ್ಳಾಪುರದಲ್ಲಿ 203 ಕಲ್ಲುಕ್ವಾರಿಗಳು ಹಾಗೂ 77 ಸ್ಟೋನ್‍ಕ್ರಷರ್​ಗಳು ಹಾಗೂ ನಾಯಿಕೊಡೆಗಳಂತೆ ಗ್ರಾನೈಟ್ ಪ್ಯಾಕ್ಟರಿಗಳಿವೆ. ಚಿಕ್ಕಬಳ್ಳಾಪುರದ ಚಿನ್ನದಂತಹ ಕಲ್ಲಿನ ಉತ್ಪನ್ನಗಳಿಗೆ ರಾಜಧಾನಿ ಬೆಂಗಳೂರು ದೊಡ್ಡ ಮಾರುಕಟ್ಟೆಯಾಗಿದೆ. ಇದರಿಂದ ಸುಮಾರು 1600 ಟಿಪ್ಪರ್​ಗಳಲ್ಲಿ 24 ಗಂಟೆಗಳ ಕಾಲ ಜಲ್ಲಿ, ಎಂ.ಸ್ಯಾಂಡ್ ಸೇರಿದಂತೆ ಕಲ್ಲಿನ ಉತ್ಪನ್ನಗಳ ಸಾಗಾಟ ಎಗ್ಗಿಲ್ಲದೇ ಸಾಗಿದೆ. ಇದರ ಜೊತೆ ನೂರಾರು ಲಾರಿಗಳಲ್ಲಿ ಅಲಂಕಾರಿಕ ಶಿಲೆಯ ಗ್ರಾನೈಟ್ ದಿಮ್ಮಿಗಳು ಹಾಗೂ ಗ್ರಾನೈಟ್ ಸಾಗಾಟ ಸಾಗಿದೆ. ಹೀಗೆ ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ಕಲ್ಲಿನ ಉತ್ಪನ್ನಗಳ ಮಾರಾಟ, ಸಾಗಾಟ ನಡೆದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಣಿಧಣಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಪಿಎಸ್ ಮೊರೆ ಹೋದ ರಾಜ್ಯ ಸರ್ಕಾರ

ಬಹುತೇಕ ಕ್ವಾರಿ ಹಾಗೂ ಸ್ಟೋನ್ ಕ್ರಷರ್​ಗಳಲ್ಲಿ ಸೂಕ್ತ ಸ್ಟಾಕ್‍ಬುಕ್ ನಿರ್ವಹಣೆ ಮಾಡುತ್ತಿಲ್ಲ. ಮಾರಾಟ ಮಾಡುವ ಉತ್ಪನ್ನಗಳಿಗೆ ತೆರಿಗೆ ಕಟ್ಟುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಜಿಎಸ್‍ಟಿ ಸಂಖ್ಯೆ ನೊಂದಣಿ ಮಾಡಿಕೊಂಡಿದ್ದರೂ ಜಿ.ಎಸ್.ಟಿ ಕಟ್ಟದೆ ಕಳ್ಳ ಮಾರ್ಗದಲ್ಲಿ ತೆರಿಗೆ ವಂಚಿಸಿ ದಂಧೆ ಮಾಡುವುದು ಬಯಲಾಗಿದೆ.

ಗಣಿ ಇಲಾಖೆಗೆ ಎಂಡಿಪಿ (ರಾಯಲ್ಟಿ) ಕಟ್ಟಿ ಗಣಿ ಉತ್ಪನ್ನಗಳ ಸಾಗಾಟ ಮಾಡುತ್ತಿರುವ ಕಲ್ಲುಕ್ವಾರಿ, ಕ್ರಷರ್ ದಂಧೆಕೋರರು ಪರ್ಮಿಟ್ ಪಡೆದು, ಟಿಪ್ಪರ್ ಲಾರಿಗಳಲ್ಲಿ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದ್ದಾರೆ. ಆದರೆ ಗ್ರಾಹಕರಿಗೆ ಸರಬರಾಜು ಮಾಡುವ ಉತ್ಪನ್ನಗಳಿಗೆ ಸೂಕ್ತ ಜಿಎಸ್‍ಟಿ ಬಿಲ್ ಮಾಡುತ್ತಿಲ್ಲ. ಕೈಬರಹದ ಬಿಲ್, ವೈಬ್ರಿಡ್ಜ್ ದಾಖಲೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ.

ಉದಾಹರಣೆ: ದಿನಾಂಕ 18-10-2023 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ

  • ಚಿಕ್ಕಬಳ್ಳಾಪುರ ತಾಲ್ಲೂಕು ಯಲಗಲಹಳ್ಳಿ ಬಳಿ ಇರುವ ಬಾಲಾಜಿ ಸ್ಟೋನ್ ಕ್ರಷರ್ಸ್,  ಕೆಎ-53ಎಬಿ6669 ಟಿಪ್ಪರ್‍ನಲ್ಲಿ 25 ಟನ್ ಎಂ.ಸ್ಯಾಂಡ್ ಸಾಗಿಸುತ್ತಿದ್ದು, ಅದಕ್ಕೆ ಎಂಡಿಪಿ ಮಾತ್ರ ಸಂದಾಯ ಮಾಡಿ ಟ್ಯಾಕ್ಸ್ ಇನ್‍ವಾಯ್ಸ್ ಅಥವಾ ಸೂಕ್ತ ಜಿಎಸ್‍ಟಿ ಬಿಲ್ ಇಲ್ಲದೇ ತೆರಿಗೆ ವಂಚನೆ ಮಾಡಿ ಎಂ.ಸ್ಯಾಂಡ್‍ನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
  • ಚಿಕ್ಕಬಳ್ಳಾಪುರ ತಾಲ್ಲೂಕು ಯಲಗಲಹಳ್ಳಿ ಬಳಿ ಇರುವ ಮಂಜುನಾಥ ಸ್ಟೋನ್ ಕ್ರಷರ್ಸ್‍ನಿಂದ ಬೆಂಗಳೂರಿನ ವಿದ್ಯಾನಗರಕ್ಕೆ ಕೆಎ-50ಎ7507 ಟಿಪ್ಪರ್‍ನಲ್ಲಿ 26 ಟನ್ ಜಲ್ಲಿಗೆ ಎಂಡಿಪಿ ಮಾತ್ರ ಸಂದಾಯ ಮಾಡಿ, ಟ್ಯಾಕ್ಸ್ ಇನ್‍ವಾಯ್ಸ್ ಅಥವಾ ಸೂಕ್ತ ಜಿಎಸ್‍ಟಿ ಬಿಲ್ ಇಲ್ಲದೇ ತೆರಿಗೆ ವಂಚನೆ ಮಾಡಿ ಜಲ್ಲಿಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
  • ಚಿಕ್ಕಬಳ್ಳಾಪುರ ತಾಲ್ಲೂಕು ಯಲಗಲಹಳ್ಳಿ ಬಳಿ ಇರುವ ಮಂಜುನಾಥ ಸ್ಟೋನ್ ಕ್ರಷರ್ಸ್‍ನಿಂದ ಬೆಂಗಳೂರಿನ ಯಲಹಂಕಕ್ಕೆ ಕೆಎ-50ಎ7299 ಟಿಪ್ಪರ್‍ನಲ್ಲಿ 31 ಟನ್ ಎಂ-ಸ್ಯಾಂಡ್‍ಗೆ ಎಂಡಿಪಿ ಮಾತ್ರ ಸಂದಾಯ ಮಾಡಿ, ಟ್ಯಾಕ್ಸ್ ಇನ್‍ವಾಯ್ಸ್ ಅಥವಾ ಸೂಕ್ತ ಜಿಎಸ್‍ಟಿ ಬಿಲ್ ಇಲ್ಲದೇ ತೆರಿಗೆ ವಂಚನೆ ಮಾಡಿ ಎಂ-ಸ್ಯಾಂಡ್ ಮಾರಾಟ ಮಾಡಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಣಿ ಮಾಫಿಯಾದಿಂದ 1.48 ಕೋಟಿ ರೂ. ದಂಡ ವಸೂಲಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಹೀಗೆ ಪ್ರತಿದಿನ 1600ಕ್ಕೂ ಹೆಚ್ಚು ಟಿಪ್ಪರ್​ಗಳಲ್ಲಿ ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆ ಲಾರಿಗಳಲ್ಲಿ ಗ್ರಾನೈಟ್ ಹಾಗೂ ಗ್ರಾನೈಟ್ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದಾರೆ. ಬಹುತೇಕರು ಸೂಕ್ತ ಜಿ.ಎಸ್.ಟಿ. ಬಿಲ್ ಇಲ್ಲದೇ ತೆರಿಗೆ ವಂಚನೆ ಮಾಡಿ, ವ್ಯಾಪಾರ ವಹಿವಾಟು ಮಾಡುವುದು ಬಯಲಾಗಿದೆ.

ಗಾಢನಿದ್ರಾವಸ್ಥೆಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ 203 ಕಲ್ಲು ಮತ್ತು ಗ್ರಾನೈಟ್ ಕ್ವಾರಿಗಳು ಹಾಗೂ 77 ಸ್ಟೋನ್ ಕ್ರಷರ್‍ ಗಳು, 20ಕ್ಕೂ ಹೆಚ್ಚು ಗ್ರಾನೈಟ್ ಪ್ಯಾಕ್ಟರಿಗಳಲ್ಲಿ ಉತ್ಪಾದನೆಯಾಗುವ ಕಲ್ಲಿನ ಉತ್ಪನ್ನಗಳ ಸಾಗಾಟ, ಮಾರಾಟದಲ್ಲಿ ನಿರಂತರವಾಗಿ ತೆರಿಗೆ ವಂಚನೆಯಾಗುತ್ತಿದೆ. ಆದರೆ ಸೂಕ್ತ ಕ್ರಮಕೈಗೊಳ್ಳಬೇಕಾದ ಚಿಕ್ಕಬಳ್ಳಾಪುರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಗಾಢನಿದ್ರಾವಸ್ಥೆಯಲ್ಲಿ ಇದ್ದಾರೆ. ಒಬ್ಬರಲ್ಲವೆಂದು ಇಬ್ಬರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಿದ್ದಾರೆ. ಬಂದಷ್ಟು ಬರಲಿ, ನನಗೇನು ನಷ್ಟ.. ಬಲಾಡ್ಯರನ್ನು ಮುಟ್ಟಿ ನಾನ್ಯಾಕೆ ತೊಂದರೆ ಅನುಭವಿಸುವುದೆಂದು ಪರೋಕ್ಷವಾಗಿ ಕರ್ತವ್ಯಕ್ಕೆ ವಂಚನೆ ಮಾಡುತ್ತಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ.

ಚಿಕ್ಕಬಳ್ಳಾಪುರದಲ್ಲಿಯೂ ವಾಣಿಜ್ಯ ತೆರಿಗೆ ಇಲಾಖೆ 

ಚಿಕ್ಕಬಳ್ಳಾಪುರದಲ್ಲಿ ಮೊದಲೇ ವಾಣಿಜ್ಯ ತೆರಿಗೆ ಇಲಾಖೆ ಇದ್ದು, ಅಷ್ಟೋ ಇಷ್ಟೋ ನೋಂದಣಿ ಹಾಗೂ ಪರಿಶೀಲನೆ ಕಾರ್ಯ ನಡೆಸಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗುತ್ತಿರುವ ತೆರಿಗೆ ವಂಚನೆ ತಡೆಯಲು ರಾಜ್ಯ ಸರ್ಕಾರ ಡಿಸೆಂಬರ್-2021 ರಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ವಿಭಾಗ ಆರಂಭಿಸಿದೆ. ಅದರಲ್ಲಿ ಸಹಾಯಕ ಆಯುಕ್ತರು ಹಾಗೂ ಇಬ್ಬರು ಸಿಬ್ಬಂದಿಗಳು ಬಿಟ್ಟರೆ ಇನ್ಯಾರು ಗತಿಯಿಲ್ಲ.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಹೇಳುವುದೇನು?

ಚಿಕ್ಕಬಳ್ಳಾಪುರದ ಹಳೇ ಆರ್.ಟಿ.ಒ ಕಟ್ಟಡದಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಕಛೇರಿ ಇದೆ. ಶೇಖರ್ ಎನ್ನುವ ಸಹಾಯಕ ಆಯುಕ್ತರು ಕರ್ತವ್ಯದಲ್ಲಿದ್ದಾರೆ. ಆದರೆ ಪ್ರತಿದಿನ ಪ್ರತಿಕ್ಷಣ ಆಗುತ್ತಿರುವ ತೆರಿಗೆ ವಂಚನೆಯ ಬಗ್ಗೆ ಗಮನಹರಿಸಿದಂತೆ ಕಾಣುತ್ತಿಲ್ಲ. ಇದರಿಂದ ತೆರಿಗೆ ವಂಚನೆ ಬಗ್ಗೆ ಹೇಳೋರು, ಕೇಳೋರು ಯಾರು ಇಲ್ಲದ ಕಾರಣ ಕಲ್ಲು ಕ್ವಾರಿ, ಕ್ರಷರ್ ದಂಧೆಕೋರರು ನಿರಂತರವಾಗಿ ವ್ಯಾಪಾರ ವಹಿವಾಟಿನಲ್ಲಿ ತೆರಿಗೆ ವಂಚನೆ ಮಾಡುತ್ತಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ. ಇನ್ನು ಮುಂದಾದರೂ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಲ್ಲವೇ ಇಲಾಖೆಯ ಐ.ಎ.ಎಸ್ ಆಯುಕ್ತರುಗಳು ಚಿಕ್ಕಬಳ್ಳಾಪುರದತ್ತ ಗಮನಹರಿಸಿದರೆ ಸರ್ಕಾರಕ್ಕೆ ಆಗುತ್ತಿರುವ ತೆರಿಗೆ ವಂಚನೆಯನ್ನು ತಡೆಯಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:51 pm, Wed, 18 October 23