ಚಿಕ್ಕಬಳ್ಳಾಪುರ: ಸಹಾಯ ಮಾಡಿ ಬ್ರದರ್, ಬಹಳ ಬೇಕಾಗಿರುವವರು; ಸಚಿವ ಜಮೀರ್ ಮತ್ತು ಪಿಎಸ್‍ಐ ಸಂಭಾಷಣೆಯ ಆಡಿಯೋ ವೈರಲ್
ಚಿಕ್ಕಬಳ್ಳಾಪುರದಲ್ಲಿ ಪಾಪ್‌ಕಾರ್ನ್ ವ್ಯಾಪಾರಿ ವಂಚನೆಗೊಳಗಾಗಿದ್ದು, ತೆಲಂಗಾಣ ವ್ಯಾಪಾರಿಗಳು ಕೋಟಿಗಟ್ಟಲೆ ಹಣ ಪಾವತಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದಾಗ, ಸಚಿವ ಜಮೀರ್ ಅಹ್ಮದ್ ಖಾನ್ ಪಿಎಸ್‌ಐ ಜಗದೀಶ್ ರೆಡ್ಡಿ ಅವರಿಗೆ ಕರೆ ಮಾಡಿ ಆರೋಪಿಗೆ ಸಹಾಯ ಮಾಡುವಂತೆ ಪ್ರಭಾವ ಬೀರಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ. ಇದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕಬಳ್ಳಾಪುರ, ಅಕ್ಟೋಬರ್ 25: ರಾಜ್ಯದ ಪಾಪ್‍ಕಾರ್ನ್ ವ್ಯಾಪಾರಿಯೋರ್ವ, ತೆಲಂಗಾಣದ ವ್ಯಾಪಾರಿಯೋರ್ವನಿಗೆ ಕೋಟ್ಯಂತರ ರೂ. ಮೌಲ್ಯದ ಪಾಪ್‍ಕಾರ್ನ್ ಸರಬರಾಜು ಮಾಡಿದ್ದು, ವ್ಯಾಪಾರದ ಹಣವನ್ನು ಆ ವ್ಯಾಪಾರಿ ನೀಡಿಲ್ಲ. ಇದರಿಂದ ರಾಜ್ಯದ ವ್ಯಾಪಾರಿ ನ್ಯಾಯ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ಆರೋಪಿಗೆ ಸಹಾಯ ಮಾಡುವಂತೆ ಪೊಲೀಸರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ (Audio) ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಗೂರು ನಿವಾಸಿ ಡಿ.ಎನ್.ರಾಮಕೃಷ್ಣ ಎನ್ನುವ ಪಾಪ್‍ಕಾರ್ನ್ ಉದ್ಯಮಿ, ನೆರೆಯ ತೆಲಂಗಾಣದ ಹೈದರಾಬಾದ್ ಮೂಲದ ಹೆಚ್‍ಕೆಜಿಎನ್ ಮುಸ್ಕಾನ್ ಪಾಪ್‍ಕಾರ್ನ್ ಟ್ರೇಡರ್ಸ್ ಮಾಲೀಕ ಸೈಯದ್ ಅಬ್ದುಲ್ ರಜಾಕ್, ಸೈಯದ್ ಅಬ್ದುಲ್ ಅಕ್ಬರ್‍ಪಾಷ, ನಾಸಿರ್ ಅಹಮದ್ ಎನ್ನುವ ಸಹೋದರರಿಗೆ ಒಂದು ಕೋಟಿ ಎಂಬತ್ತೊಂಬತ್ತು ಲಕ್ಷ ರೂ. ಮೌಲ್ಯದ ಪಾಪ್‍ಕಾರ್ನ್ ಜೋಳವನ್ನು ಸರಬರಾಜು ಮಾಡಿದ್ದರಂತೆ. ಆದರೆ ಹೈದರಾಬಾದ್‍ನ ವ್ಯಾಪಾರಿಗಳು, ಖರೀದಿ ಮಾಡಿರುವ ಜೋಳದ ಹಣವನ್ನು ರಾಮಕೃಷ್ಣನಿಗೆ ಕೊಟ್ಟಿಲ್ಲವಂತೆ. ಇದರಿಂದ ರಾಮಕೃಷ್ಣ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ವಂಚನೆಯ ದೂರನ್ನು ದಾಖಲು ಮಾಡಿ, ನ್ಯಾಯಕ್ಕಾಗಿ ಮನವಿ ಮಾಡಿದ್ದರು.
ಇನ್ನು ಪೆರೇಸಂದ್ರ ಪೊಲೀಸ್ ಠಾಣೆಯ ಪಿಎಸ್‍ಐ ಜಗದೀಶ್ ರೆಡ್ಡಿ, ಸೈಯದ್ ಅಬ್ದುಲ್ ಅಕ್ಬರ್‍ಪಾಷರನ್ನು ಬಂಧಿಸಿ ವಿಚಾರಣೆ ಮಾಡುತ್ತಿರುವಾಗ, ಅಕ್ಟೋಬರ್ 13 ರಂದು ಸಚಿವ ಜಮೀರ್ ಅಹ್ಮದ್, ಪಿಎಸ್‍ಐ ಜಗದೀಶ್ ರೆಡ್ಡಿಗೆ ಕರೆ ಮಾಡಿ, ಆರೋಪಿಗೆ ಸಹಾಯ ಮಾಡುವಂತೆ ಹಾಗೂ ಹಣ ನೀಡಲು ಸಮಯ ಕೊಡುವಂತೆ ಪ್ರಭಾವ ಬೀರಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಅಸಲಿಗೆ ಸಚಿವ ಜಮೀರ್ ಅಹ್ಮದ್, ಪಿಎಸ್‍ಐ ಜಗದೀಶ್ ರೆಡ್ಡಿ ಜೊತೆ ಮಾತನಾಡಿದ ಆಡಿಯೋ ಸಂಭಾಷಣೆ ಇಲ್ಲಿದೆ. (ಪಿಎಸ್ಐ ಜಗದೀಶ್ ರೆಡ್ಡಿ ಹಾಗೂ ಸಚಿವ ಜಮೀರ್ ಅಹಮ್ಮದ್ ಮಧ್ಯೆ ನಡೆದ ಪೋನ್ ಸಂಭಾಷಣೆ ವಿವರ).
ಸರ್ ನಾನು ಲಕ್ಷ್ಮಿ ನಾರಾಯಣ ಅಂತ ಜಮೀರ್ ಅಹ್ಮದ್ ಸಾಯೇಬ್ರ ಸ್ಪೆಷಲ್ ಆಫೀಸರ್ ಮಾತನಾಡುತ್ತಿರುವುದು. ಸಾಯೇಬ್ರು ಮಾತನಾಡುತ್ತಾರಂತೆ ಕೊಡ್ತಿನಿ.
ಪಿಎಸ್ಐ ಜಗದೀಶ್ ರೆಡ್ಡಿ: ಓಕೆ ಕೊಡಿ.
ಲಕ್ಷ್ಮಿನಾರಾಯಣ: ಒಂದು ಕೇಸ್‍ಗೆ ಸಂಬಂಧಿಸಿದಂತೆ ಮಾತನಾಡಬೇಕು ಅಂತಿದ್ರು. ಸ್ವಲ್ಪ ಕೊಡ್ಲಾ?
ಪಿಎಸ್ಐ ಜಗದೀಶ್ ರೆಡ್ಡಿ: ಕೊಡಿ.
ಲಕ್ಷ್ಮಿನಾರಾಯಣ: ಸರ್, ಜಗದೀಶ್ ರೆಡ್ಡಿ ಪಿಎಸ್ಐ
ಸಚಿವ ಜಮೀರ್ ಅಹ್ಮದ್: ಹಲೋ…
ಪಿಎಸ್ಐ ಜಗದೀಶ್ ರೆಡ್ಡಿ: ಸರ್ ನಮಸ್ತೆ ಸರ್.
ಸಚಿವ ಜಮೀರ್ ಅಹ್ಮದ್: ಸರ್ ನಮಸ್ತೆ ಸರ್ ಬ್ರದರ್, ಏನಿಲ್ಲ? ನಮ್ಮ ಹೈದರಾಬಾದ್ ನಮ್ಮ ಅಕ್ಬರ್ ಬೀನ್ ತಬರ್ ನಮ್ಮ ರಿಲೇಷನ್, ಯಾವುದೊ ಒಂದು ದುಡ್ಡು ಕೊಡಬೇಕಾಗಿತ್ತಂತೆ ಯಾರಿಗೂ ಅಕ್ಬರ್ ಪಾಷಾ ಅಂತ ಏನೊ? ಹೈದರಾಬಾದ್ನಿಂದ ಕರೆದುಕೊಂಡು ಬಂದಿದ್ದರಂತೆ ಏನು?
ಇದನ್ನೂ ಓದಿ: ಜಮೀರ್ ಅಹಮ್ಮದ್ ಗೆ ಕೊಟ್ಟ ಸಾಲದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ KGF ಬಾಬು
ಪಿಎಸ್ಐ ಜಗದೀಶ್ ರೆಡ್ಡಿ: ಹೌದು ಸರ್, ಅದೊಂದು ಚೀಟಿಂಗ್ ಕೇಸ್ ಆಗಿದೆ ಇಲ್ಲಿ. ಎಫ್.ಐ.ಆರ್ ಆಗಿದೆ.
ಸಚಿವ ಜಮೀರ್ ಅಹ್ಮದ್: ಹೌದು! ಅವರು ತಗೊಂಡಿರುವುದು ನಿಜ, ಹೇಳುತ್ತಿರುವಷ್ಟು ತಗೊಂಡಿಲ್ಲ. ಒಂಚೂರು ಸಹಾಯ ಮಾಡಿ ಬ್ರದರ್, ಬಹಳ ಬೇಕಾಗಿರುವವರು.
ಪಿಎಸ್ಐ ಜಗದೀಶ್ ರೆಡ್ಡಿ: ಸರಿ ಸರ್, ಸರಿ ಸರ್.
ಸಚಿವ ಜಮೀರ್ ಅಹ್ಮದ್: ಏನು ಮಾಡುವುದಕ್ಕೆ ಸಾಧ್ಯತೆ ಇದೆ.
ಪಿಎಸ್ಐ ಜಗದೀಶ್ ರೆಡ್ಡಿ: ಈಗ ನಾವು ಅವರಿಗೆ ಛಾನ್ಸ್ ಕೊಟ್ಟಿದ್ದೀವಿ ಸರ್, ಸೆಟ್ಲ್ ಮಾಡಿಕೊಳ್ಳಿ, ಕ್ಲಿಯರ್ ಮಾಡಿಕೊಳ್ಳಿ, ಕೇಸ್ ಕ್ಲೋಸ್ ಮಾಡುತ್ತೇವೆ. ಹೈದರಾಬಾದ್ಗೂ ಹೋಗಿ ಅಲ್ಲಿನೂ ಕೊಟ್ವಿ, ಇಲ್ಲಿನೂ ಕರೆದು ಹೇಳಿದ್ವಿ, ಇಲ್ಲಿ ಕುಳಿತುಕೊಂಡು ಸೆಟ್ಲು ಮಾಡಿಕೊಳ್ಳಿ, ಬಟ್ ಅವರು ಒಪ್ಪುತ್ತಿಲ್ಲ ಇವರು ಒಪ್ಪುತ್ತಿಲ್ಲ.
ಸಚಿವ ಜಮೀರ್ ಅಹ್ಮದ್: ಒಂದು ಛಾನ್ಸ್ ಕೊಡಿ, ಸ್ವಲ್ಪ ದಿನ ಟೈಮ್ ಕೊಡಿ.
ಪಿಎಸ್ಐ ಜಗದೀಶ್ ರೆಡ್ಡಿ: ಬಂದು ಸೆಟ್ಲ್ ಮಾಡಿಕೊಳ್ಳುವುದಕ್ಕೆ ಆಪರ್ಚುನಿಟಿ ಕೊಡ್ತಿದಿವಿ ಸರ್, ಮಾಡಿಕೊಳ್ಳಿ. ಅವರು ಕಳಿಸಿರೋದು ನಿಜಾನೆ, ದುಡ್ಡು ತಗೊಂಡಿರುವುದು ನಿಜ, ಅದು ಡಿಲೆ ಮಾಡುವುದಕ್ಕೆ ಡಾಕ್ಯೂಮೆಂಟ್ ಇಲ್ಲ.
ಸಚಿವ ಜಮೀರ್ ಅಹ್ಮದ್: ಹೌದು! ಹೌದು, ತೊಗೊಂಡಿರುವುದು ನಿಜ, ಕೊಟ್ಟಿರುವುದು ನಿಜ, ಆದರೆ ಅವರು ಹೇಳಿದಾಗೆ ಅಷ್ಟು ದುಡ್ಡು ಇಲ್ಲ.
ಪಿಎಸ್ಐ ಜಗದೀಶ್ ರೆಡ್ಡಿ: ಅದು ಬಂದು ನನ್ನ ಮುಂದೆ ಹೇಳಿದರೆ ನಾನ್ ಕ್ಲಿಯರ್ ಮಾಡ್ತಿದ್ದೆ ಸರ್, ಹೈದರಾಬಾದ್ ಸೈಬರ್ಬಾದ್ನಲ್ಲಿ ಆಪರ್ಚುನಿಟಿ ಕೊಟ್ವಿ ಸರ್,
ಸಚಿವ ಜಮೀರ್ ಅಹ್ಮದ್: ಈಗ ಇದೊಂದು ಅವಕಾಶ ಕೊಡಿ.
ಪಿಎಸ್ಐ ಜಗದೀಶ್ ರೆಡ್ಡಿ: ಬರಲಿ ಸರ್ ನಾನು ಸೆಟ್ಲ್ ಮಾಡಿ ಕ್ಲಿಯರ್ ಮಾಡಿಕೊಡ್ತಿನಿ ಸರ್.
ಸಚಿವ ಜಮೀರ್ ಅಹ್ಮದ್: ಪಿಎಸ್‍ಐ ಜಗದೀಶ್ ರೆಡ್ಡಿ ಓಕೆ ಓಕೆ.
ಇನ್ನು ನಮ್ಮದೇ ರಾಜ್ಯದ ಸಚಿವರು, ನಮ್ಮ ವ್ಯಾಪಾರಿಯ ಪರವಾಗಿ ನ್ಯಾಯ ಕೊಡಿಸುವುದರ ಬದಲು ತೆಲಂಗಾಣ ವ್ಯಾಪಾರಿಗಳ ಪರವಾಗಿ ಪೊಲೀಸರ ಮೇಲೆ ಪ್ರಭಾವ ಬೀರಿದ್ದಕ್ಕೆ ಡಿ.ಎನ್.ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯದ ಪರವಾಗಿ ನಿಲ್ಲಬೇಕಾದ ಸಚಿವ ಜಮೀರ್ ಅಹಮದ್, ಅನ್ಯಾಯ ಮಾಡಿದ ವ್ಯಾಪಾರಿಗಳ ಪರವಾಗಿ ಪೊಲೀಸರ ಮೇಲೆ ಪ್ರಭಾವ ಬೀರಿದ್ದು ಎಷ್ಟು ಸರಿ ಎನ್ನುವ ಅಸಮಾಧಾನ ರಾಜ್ಯಾದ್ಯಂತ ಭುಗಿಲೆದ್ದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




