ಡಾ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ 3ನೇ ಭಾರತ ರತ್ನ; ದೇಶಕ್ಕೆ ಮೋದಿ, ರಾಜ್ಯಕ್ಕೆ ಸುಧಾಕರ್ -ಸಚಿವ ಮುನಿರತ್ನ ಬಣ್ಣನೆ
ಈ ಜಿಲ್ಲೆಯಾಗಿ 15 ವರ್ಷ ಕಳೆದಿವೆ. ಈ ಅವಧಿಯಲ್ಲಿ ಎಷ್ಟೋ ಮಂದಿ ರಾಜಕಾರಣಿಗಳು ಬಂದು ಹೋಗಿದ್ದಾರೆ. ಇವರಲ್ಲಿ ಸುಧಾಕರ್ ಈ ಕ್ಷೇತ್ರಕ್ಕೆ ದೇವರು ನೀಡಿದ ಕೊಡುಗೆ. ರಾಜಕಾರಣಿಗಳಿಗೆ ಕೆಲಸ ಮಾಡಬೇಕಾದ ಇಚ್ಛೆ ಇರಬೇಕು. ಅದನ್ನು ಹೊಂದಿರುವ ಏಕೈಕ ವ್ಯಕ್ತಿ ಸುಧಾಕರ್ - -ಸಚಿವ ಮುನಿರತ್ನ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಗೆ (Bharat Ratna) ಈಗಾಗಲೇ ಎರಡು ಭಾರತ ರತ್ನಗಳು ಬಂದಿದ್ದು, ಮತ್ತೊಂದು ಭಾರತ ರತ್ನ (Bharat Ratna) ನೀಡುವುದಾದರೆ ಅದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರಿಗೆ ನೀಡಬೇಕು ಎಂದು ತೋಟಗಾರಿಕಾ ಸಚಿವ ಮುನಿರತ್ನ ಬಣ್ಣಿಸಿದರು. ಅವರು ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಉತ್ಸವ (Chikkaballapur Utsava) ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು. ಚಿಕ್ಕಬಳ್ಳಾಪುರಕ್ಕೆ ಏನಾದರೂ ಕೊಡುಗೆ ನೀಡಲೇಬೇಕು ಎಂಬ ಆಶಯವನ್ನು ಸುಧಾಕರ್ ಹೊಂದಿದ್ದಾರೆ, ತಮ್ಮ ಹುದ್ದೆ ಮತ್ತು ತಾವು ಶಾಶ್ವತವಲ್ಲ. ಆದರೆ ತಾವಿಟ್ಟ ಹೆಜ್ಜೆಗುರುತು ಶಾಶ್ವತ ಇರಬೇಕು ಎಂದು ಭಾವಿಸಿದ್ದಾರೆ ಎಂದು ಶ್ಲಾಘಿಸಿದರು.
ದೇವರು ನೀಡಿದ ಕೊಡುಗೆ :
ಈ ಜಿಲ್ಲೆಯಾಗಿ 15 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಎಷ್ಟೋ ಮಂದಿ ರಾಜಕಾರಣಿಗಳು ಬಂದು ಹೋಗಿದ್ದಾರೆ. ಇವರಲ್ಲಿ ಸುಧಾಕರ್ ಅವರು ಈ ಕ್ಷೇತ್ರಕ್ಕೆ ದೇವರು ನೀಡಿದ ಕೊಡುಗೆ. ರಾಜಕಾರಣಿಗಳಿಗೆ ಕೆಲಸ ಮಾಡಬೇಕಾದ ಇಚ್ಛೆ ಇರಬೇಕು. ಅದನ್ನು ಹೊಂದಿರುವ ಏಕೈಕ ವ್ಯಕ್ತಿ ಸುಧಾಕರ್ ಎಂದು ಕೊಂಡಾಡಿದರು.
ಚಿಕ್ಕಬಳ್ಳಾಪುರಕ್ಕೆ ಹೆಚ್ಚಿನ ಕೊಡುಗೆ ನೀಡುವ ಶಕ್ತಿ ಸುಧಾಕರ್ ಅವರಿಗಿದೆ, ಚುನಾವಣೆ ವೇಳೆ ಕಾಣಿಸುವ ರಾಜಕಾರಣಿಗಳೇ ತುಂಬಿರುವ ಪ್ರಸ್ತುತ ರಾಜಕಾರಣದಲ್ಲಿ ದಿನದ 24 ಗಂಟೆಯೂ ಅಭಿವೃದ್ಧಿಯ ಬಗ್ಗೆ ಯೋಚಿಸುವ ಮನಸ್ಸಿರುವ ವ್ಯಕ್ತಿ ಸುಧಾಕರ್. ರಾಜ್ಯಕ್ಕೆ, ಜಿಲ್ಲೆಗೆ ಸೇವೆ ಮಾಡಬೇಕು ಎಂದು ಕನಸು ಕಾಣುತ್ತಿರುವ ವ್ಯಕ್ತಿಯಾಗಿದ್ದಾರೆ ಎಂದರು.
ದೇಶಕ್ಕೆ ಮೋದಿ, ರಾಜ್ಯಕ್ಕೆ ಸುಧಾಕರ್!
ತಮ್ಮದೇ ಆದ ಅಭಿವೃದ್ಧಿ ಕಾರ್ಯಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ವ್ಯಕ್ತಿ ಪ್ರಧಾನಿ ನರೇದ್ರ ಮೋದಿ. ಅದೇ ರೀತಿಯಲ್ಲಿ ತಮ್ಮ ಖಾತೆಯ ಯಶಸ್ವಿ ನಿರ್ವಹಣೆಯಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಕೆಲಸ ಮಾಡಿದ ವ್ಯಕ್ತಿ ಸುಧಾಕರ್. ದೇಶದಲ್ಲಿ ಯಾವುದೇ ಆರೋಗ್ಯ ಸಚಿವರೂ ಕಾಳಜಿ ವಹಿಸದ ರೀತಿಯಲ್ಲಿ ರಾಜ್ಯದ ಜನತೆಯನ್ನು ಕೋವಿಡ್ ಸಂದರ್ಭದಲ್ಲಿ ಕಾಪಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಮ್ಮ ಪ್ರತಿಭೆಯನ್ನು ನಮಗೂ ಹೇಳಿಕೊಡಿ:
ಇಂತಹ ಅದ್ದೂರಿ ಉತ್ಸವ ನಾನು ಜೀವನದಲ್ಲಿಯೇ ಕಂಡಿಲ್ಲ. ಅವರು ಶಿಕ್ಷಕರಂತೆ ಎಲ್ಲವನ್ನೂ ನಮಗೆ ಹೇಳಿಕೊಟ್ಟರೆ ನಮ್ಮ ಕ್ಷೇತ್ರಗಳಲ್ಲಿ ನಾವೂ ಇಂತಹ ಸಾಹಸಗಳನ್ನು ಮಾಡುವುದಾಗಿ ಸಚಿವ ಮುನಿರತ್ನ ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ