ಮಾಂಗಲ್ಯ ಸರಕ್ಕಾಗಿ ಸ್ನೇಹಿತೆಯನ್ನೇ ಕೊಂದ ಆಪ್ತ ಮಿತ್ರರು
ಬೆಂಗಳೂರಿನ ಆಟೊ ಚಾಲಕನೊರ್ವ ತನ್ನ ಮೂವರು ಗೆಳತಿಯರಿಗೆ ಪ್ರವಾಸಿ ತಾಣಗಳ ದರ್ಶನ ಮಾಡಿಸುವ ನೇಪದಲ್ಲಿ ದಿನವಿಡಿ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಸಂಜೆಯಾಗುತ್ತಿದ್ದಂತೆ ಓರ್ವ ಗೆಳತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ, ಇನ್ನಿಬ್ಬರ ಗೆಳತಿಯರ ಸಹಾಯದಿಂದ ಶವ ಬಿಸಾಡಿ ಪರಾರಿಯಾಗಿದ್ದಾನೆ. ಇಲ್ಲಿದೆ ವಿವರ

ಚಿಕ್ಕಬಳ್ಳಾಪುರ, ಆಗಸ್ಟ್ 24: ಮಾಂಗಲ್ಯ ಸರಕ್ಕಾಗಿ ಸ್ನೇಹಿತೆಯನ್ನೇ ಕೊಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದ ಬಳಿ ಘಟನೆ ನಡೆದಿದೆ. ಅರ್ಚನಾ (27) ಕೊಲೆಯಾದವರು. ಸ್ನೇಹಿತರಾದ ರಾಕೇಶ್, ನವೀನ್, ನಿಹಾರಿಕಾ ಮತ್ತು ಅಂಜಲಿ ಕೊಲೆ ಮಾಡಿದ ಆರೋಪಿಗಳು.
ಆಂಧ್ರದ ಸತ್ಯಸಾಯಿ ಜಿಲ್ಲೆಯ ಹಿಂದೂಪುರ ನಿವಾಸಿಯಾದ ಅರ್ಚನಾ ಬಿಡುವಿನ ವೇಳೆಯಲ್ಲಿ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದರು. ಅರ್ಚನಾಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಅರ್ಚನಾ ಆಗಸ್ಟ್ 14 ರಂದು ಸ್ನೇಹಿತರ ಜೊತೆ ಚಿಕ್ಕಬಳ್ಳಾಪುರದ ಈಶಾ ಪೌಂಡೇಷನ್ಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಬಂದವರು, ವಾಪಸ್ ಹೋಗಿಲ್ಲ.
ಆಗಸ್ಟ್ 17 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದ ಬಳಿ ಅರ್ಚನಾ ಶವ ಪತ್ತೆಯಾಗಿತ್ತು. ಮಂಚೇನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡಿದ್ದ ಚಾಲಕ ರಾಕೇಶ್ ಹಾಗೂ ಈತನ ಗರ್ಲ್ ಫ್ರೆಂಡ್ ಅಂಜಲಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಭಯಾನಕ ರಹಸ್ಯ ಬಯಲಾಗಿದೆ.
ಆಟೋ ಚಾಲಕ ರಾಕೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿರುಪಸಂದ್ರ ನಿವಾಸಿಯಾಗಿದ್ದಾನೆ. ರಾಕೇಶ್ ಆಟೋ ಚಾಲಕನಾಗುವುದಕ್ಕೂ ಮುನ್ನ, ಗೌರಿಬಿದನೂರು ಹಿಂದೂಪುರದಲ್ಲಿ ಮದುವೆ ಮನೆಗಳಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ಆಗ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸಕ್ಕೆ ಬರುತ್ತಿದ್ದ ಅರ್ಚನಾ ಪರಿಚಯವಾಗಿದ್ದಾರೆ. ಇಬ್ಬರ ಮಧ್ಯೆ ಅಣ್ಣ-ತಂಗಿಯ ಬಾಂಧವ್ಯ ಇತ್ತಂತೆ. ಇತ್ತಿಚಿಗೆ ಅರ್ಚನಾ, ರಾಕೇಶ್ಗೆ ವಿಡಿಯೊ ಕಾಲ್ ಮಾಡಿ ಕಷ್ಟ ಸುಖ ವಿಚಾರಿಸಿದ್ದಾರೆ.
ಇದನ್ನೂ ಓದಿ: ಕಿಡ್ಯ್ನಾಪ್ ಆ್ಯಂಡ್ ಮರ್ಡರ್ ಕೇಸ್ ಭೇದಿಸಿದ ಪೊಲೀಸ್: 6 ವರ್ಷದ ನಂತ್ರ ಆರೋಪಿಗಳ ಬಂಧನ
ಆಗ ರಾಕೇಶ್, ಅರ್ಚನಾರ ಮೈಮೇಲೆ ಇದ್ದ ಚಿನ್ನದ ಮಾಂಗಲ್ಯ ಸರದ ಮೇಲೆ ಕಣ್ಣು ಹಾಕಿದ್ದಾನೆ. ಪೈನಾನ್ಸ್ನಲ್ಲಿ ಸಾಲ ಪಡೆದು ಆಟೋ ಖರೀದಿ ಮಾಡಿದ್ದ ರಾಕೇಶ್ ಕಳೆದ 3 ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ. ಇದರಿಂದ ಆಟೋ ಜಪ್ತಿ ಮಾಡುವ ಭಯದಲ್ಲಿ, ಅರ್ಚನಾರ ಚಿನ್ನಾಭರಣ ಕದಿಯುವ ಯೋಚನೆ ರಾಕೇಶ್ ಮಾಡಿದ್ದಾನೆ. ತನ್ನ ಈ ಯೋಚನೆಯನ್ನು ಬೆಂಗಳೂರಿನ ಮಾರುತ್ತಹಳ್ಳಿಯ ಪಿಜಿಯೊಂದರಲ್ಲಿ ವಾಸುತ್ತಿದ್ದ ತನ್ನ ಮತ್ತೋರ್ವ ಗರ್ಲ್ ಫ್ರೆಂಡ್ ನಿಹಾರಿಕಾಗೆ ತಿಳಿಸಿದ್ದಾನೆ. ಈ ವಿಚಾರವನ್ನು ನಿಹಾರಿಕಾ ಆಪ್ತ ಗೆಳತಿ ಅಂಜಲಿಗೆ ತಿಳಿಸಿದ್ದಾಳೆ. ಆಗ, ಅಂಜಲಿ ತನ್ನ ಇನ್ನೋರ್ವ ಸ್ನೇಹಿತ ನವೀನ್ಗೆ ತಿಳಿಸಿ, ರಾಕೇಶನ ಕೃತ್ಯಕ್ಕೆ ಸಾಥ್ ನೀಡಲು ಹೇಳಿದ್ದಾಳೆ.
ನಂತರ ರಾಕೇಶ್, ಅರ್ಚನಾರಿಗೆ ಕರೆ ಮಾಡಿ ಈಶಾ ಫೌಂಡೇಶನ್ಗೆ ಹೋಗೋಣ ಅಂತ ಹೇಳಿದ್ದಾನೆ. ರಾಕೇಶ್ ಮಾತಿಗೆ ಅರ್ಚನಾ ಒಪ್ಪಿದ್ದಾರೆ. ಬಳಿಕ, ನವೀನ್, ರಾಕೇಶ್, ಅಂಜಲಿ ಮೂವರು ಪಿಜಿ ಮಾಲೀಕರ ಕಾರನ್ನು ತೆಗೆದುಕೊಂಡು ಹಿಂದೂಪುರಕ್ಕೆ ಹೋಗಿ ಇಲ್ಲಿ ಅರ್ಚನಾರನ್ನು ಕರೆದುಕೊಂಡು ದಿನವಿಡಿ ಸುತ್ತಾಡಿದ್ದಾರೆ. ಸಂಜೆಯಾಗುತ್ತಿದ್ದಂತೆ ಕಾರಿನಲ್ಲಿ ಅರ್ಚನಾರ ಕತ್ತಿಗೆ ವೇಲ್ನಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ, ಅರ್ಚನಾ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಕದ್ದು, ಶವವನ್ನು ನಾಮಗೊಂಡ್ಲು ಗ್ರಾಮದ ಬಳಿ ಬಿಸಾಡಿ ಪರಾರಿಯಾಗಿದ್ದಾರೆ.
ಆಟೋ ಚಾಲಕ ರಾಕೇಶ್, ಬೆಂಗಳೂರಿನಲ್ಲಿ ಶೋಕಿಲಾಲನಾಗಿದ್ದ್ದು, ಮಾಡಿದ ಸಾಲದ ತಿರಿಸಲು ಹಾಗೂ ಆಟೊದ ಇಎಂಐ ಕಟ್ಟಲು ತಂಗಿಯಂತಿದ್ದ ಅರ್ಚನಾರನ್ನು ಕೊಲೆ ಮಾಡಿದ್ದಾನೆ. ಮಂಚೇನಹಳ್ಳಿ ಠಾಣೆ ಪೊಲೀಸರು ರಾಕೇಶ್ ಮತ್ತು ಅಂಜಲಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಿಹಾರಿಕಾ ಹಾಗೂ ನವೀನ್ಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:10 pm, Sun, 24 August 25




