
ಚಿಕ್ಕಬಳ್ಳಾಪುರ, ಮೇ 7: ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗಿ ಪೋಷಕರಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29), ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಎಂಬಾತನನ್ನು ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ಒಂದಾಗಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ರಕ್ಷಣೆ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಶಶಿಕಲಾ ಮತ್ತು ಪ್ರವೀಣ್ ಸಂಬಂಧಿಕರಾಗಿದ್ದು, ಶಶಿಕಲಾಳ ತಾಯಿಯ ತಂಗಿಯ ಮಗನೇ ಪ್ರವೀಣ್. ಅಂದರೆ, ವರಸೆಯಲ್ಲಿ ಇವರಿಬ್ಬರು ಅಕ್ಕ-ತಮ್ಮನಾಗಬೇಕು. ಇವರ ಪ್ರೀತಿಯ ವಿಷಯ ತಿಳಿದ ಪೋಷಕರು, ಈ ಸಂಬಂಧ ಸಮಾಜದಲ್ಲಿ ಒಪ್ಪಿತವಲ್ಲ ಎಂದು ವಿರೋಧಿಸಿದ್ದರು. ಅಲ್ಲದೆ, ಶಶಿಕಲಾಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಸಿ ಇದೇ ಮೇ 29ಕ್ಕೆ ಮದುವೆ ದಿನಾಂಕವನ್ನೂ ನಿಗದಿಪಡಿಸಿದ್ದರು. ಆದರೆ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಶಶಿಕಲಾ ಮನೆಯಿಂದ ಹೊರಬಂದು ಪ್ರವೀಣ್‌ನನ್ನು ಮದುವೆಯಾಗಿದ್ದಾಳೆ.
ಮದುವೆಯಾದ ಬಳಿಕ ಈ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ’ ಎಂದು ಶಶಿಕಲಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇತ್ತ ಪೋಷಕರು ‘ವರಸೆಯಲ್ಲಿ ತಮ್ಮನಾಗುವವನನ್ನೇ ಮದುವೆಯಾಗಿ ಇಡೀ ಕುಟುಂಬಕ್ಕೆ ಅವಮಾನ ತಂದಿದ್ದೀಯಾ’ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಿತ್ರ ಮದುವೆ ಪ್ರಕರಣ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಹೊಸಕೋಟೆ ಪೊಲೀಸರ ಭರ್ಜರಿ ಬೇಟೆ: 50 ಬೈಕ್ ಸಮೇತ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Thu, 7 May 26