ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ, ಸಿಕ್ಕಸಿಕ್ಕವರ ಮೇಲೆ ದಾಳಿ

ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದಲ್ಲಿ ಹುಚ್ಚು ನಾಯಿಯೊಂದು 10ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿರುವಂತಹ ಘಟನೆ ನಡೆದಿದೆ. ಮಕ್ಕಳು, ವೃದ್ಧರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಹುಚ್ಚು ನಾಯಿಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ, ಸಿಕ್ಕಸಿಕ್ಕವರ ಮೇಲೆ ದಾಳಿ
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ, ಸಿಕ್ಕಸಿಕ್ಕವರ ಮೇಲೆ ದಾಳಿ
Edited By:

Updated on: Feb 21, 2025 | 9:42 PM

ಚಿಕ್ಕಬಳ್ಳಾಪುರ, ಫೆಬ್ರವರಿ 21: ಆ ಗ್ರಾಮದಲ್ಲಿ ಮೊದಲೇ ನಾಯಿಗಳ (dog) ಹಾವಳಿ ಹೆಚ್ಚು. ನಾಯಿಗಳ ಹಿಂಡು ಕಂಡು ಮಕ್ಕಳು, ಮಹಿಳೆಯರು ಹೊರಬರುವುದೇ ಕಷ್ಟ. ಇಂತಹದ್ದರಲ್ಲಿ ಸಾಕಿದ ನಾಯಿಯೊಂದು ಹುಚ್ಚು ನಾಯಿಯಂತಾಗಿದ್ದು, ಸಿಕ್ಕಸಿಕ್ಕವರ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿದರೆ, ಇನ್ನೊಂದಡೆ ಸಕಾಲಕ್ಕೆ ಚಿಕಿತ್ಸೆ ನೀಡಲು ವೈದ್ಯರು ಇರಲೇ ಇಲ್ಲವೆಂದು ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಚ್ಚು ನಾಯಿ ಕಾಟ: ವೈದ್ಯರ ವಿರುದ್ದ ಆಕ್ರೋಶ

ಕೈ, ಕಾಲು, ಮುಖ, ಮೂತಿ, ಮಕ್ಕಳು, ವೃದ್ದರು, ಮಹಿಳೆಯರು ಎನ್ನದೇ ವಿಕೃತವಾಗಿ ಹುಚ್ಚು ನಾಯಿಯೊಂದು ಸಿಕ್ಕಸಿಕ್ಕವರನ್ನು ಗಾಯಗೊಳಿಸಿರುವುದು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ. ಗ್ರಾಮದ ಮಹಿಳೆಯೊಬ್ಬರು ನಾಯಿಗಳನ್ನು ಸಾಕಿಕೊಂಡಿದ್ದರು. ಅದರಲ್ಲಿ ಒಂದು ನಾಯಿಗೆ ಹುಚ್ಚು ಹಿಡಿದಿದ್ದು, ಕಳೆದ 2 ದಿನಗಳಿಂದ ಕಣ್ಣಿಗೆ ಕಾಣಿಸಿದವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಇನ್ನು ಗಾಯಾಳುಗಳು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿ ವೈದ್ಯರಿಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಸಿಲಿನ ಹೊಡೆತಕ್ಕೆ ಬೆಂಗಳೂರಿನಲ್ಲಿ ಮನೆಯೊಳಗೆ ಬರುತ್ತಿವೆ ವಿಷಕಾರಿ ಹಾವುಗಳು

ಇನ್ನು ಕಳೆದ 2 ದಿನಗಳಿಂದ ಪೆರೇಸಂದ್ರ ಗ್ರಾಮದ 5 ವರ್ಷದ ಚಂದುಶ್ರೀ, 2 ವರ್ಷದ ಮಿತುನ್, 39 ವರ್ಷದ ರಾಮು, 45 ವರ್ಷದ ರಾಮಚಂದ್ರ ಗಂಭೀರ ಗಾಯಗೊಂಡಿದ್ದರೆ, ಇತ್ತ ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ನುಗ್ಗಿದ ನಾಯಿ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಜೊಯಬ್, ಸಿಬ್ಬಂದಿ ನಾಗಮಣಿ, ರಬ್ಸಲ್ ಎನ್ನುವವರಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದ ಗಾಯಾಳು ಚಂದುಶ್ರೀ ತಾಯಿ ಉಮಾ ಅವರು ಕಾಲೇಜಿನಲ್ಲಿ ನಾಯಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ

ಹುಚ್ಚು ನಾಯಿ ಹಾವಳಿಯಿಂದ ಬೆಚ್ಚಿಬಿದ್ದ ಪೆರೇಸಂದ್ರ ಗ್ರಾಮಪಂಚಾಯ್ತಿ ಅಧಿಕಾರಿಗಳು, ಹುಚ್ಚುನಾಯಿ ಹಿಡಿಯುವ ಆಪರೇಷನ್ ಆರಂಭಿಸಿದ್ದಾರೆ. ಆದರೆ ಹುಚ್ಚುನಾಯಿ ಮಾತ್ರ ಕಣ್ಣಿಗೆ ಕಾಣಿಸದೇ ಮರೆಮಾಚಿಕೊಂಡಿದೆ. ಆದರೂ ಸಿಕ್ಕಸಿಕ್ಕ ನಾಯಿಗಳನ್ನು ಹಿಡಿವು ಆಸ್ತ್ರಾ ಸಂಸ್ಥೆಯ ಸಿಬ್ಬಂದಿಗಳು ವ್ಯಾಕ್ಸಿನೇಷನ್ ಆರಂಭಿಸಿದ್ದಾರೆ. ಮತ್ತೊಂದಡೆ ಎಲ್ಲಿ ಮತ್ತೆ ನಾಯಿ ದಾಳಿ ಮಾಡುತ್ತದೋ ಎಂದು ಜನರು ಭಯಭೀತರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.