Adiyogi statue: ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆ, ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮುಂದುವರಿಸಿದ ಹೈಕೋರ್ಟ್
ಹೈಕೋರ್ಟ್ ಆದೇಶದಂತೆ ಜನವರಿ 15 ಭಾನುವಾರದಂದು ಇಶಾ ಫೌಂಡೇಶನ್ ವತಿಯಿಂದ ಆದಿಯೋಗಿ ಪ್ರತಿಮೆ ಅನಾವರಣ ಆಗಿತ್ತು. ವಿಚಾರಣೆ ವೇಳೆ ಉಳಿದಂತೆ ಕಾಮಗಾರಿ ನಡೆಸದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿತ್ತು. ಇದೀಗ ಮತ್ತೆ ಆ ಆದೇಶ ಮುಂದುವರಿದಿದೆ.
ಬೆಂಗಳೂರು/ ಚಿಕ್ಕಬಳ್ಳಾಪುರ: ನಂದಿ ಬೆಟ್ಟದ ಬಳಿ ಆದಿಯೋಗಿ ಪ್ರತಿಮೆ (Adiyogi statue) ಅನಾವರಣಕ್ಕೆ ಅನುಮತಿ ನೀಡಿದ್ದ ಹೈಕೋರ್ಟ್ (Karnataka High Court), ಉಳಿದಂತೆ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಇದೀಗ ಹೈಕೋರ್ಟ್ ಮತ್ತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮುಂದುವರಿಸಿದೆ. ಎಸ್.ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ, ಯಥಾಸ್ಥಿತಿ ಆದೇಶದ ತೆರವಿಗೆ ಇಶಾ ಪ್ರತಿಷ್ಠಾನ (Isha Foundation) ಮನವಿ ಮಾಡಿದರೆ, ಇತ್ತ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಪ್ರತಿಮೆ ಅನಾವರಣಗೊಳಿಸಿದ ದಿನದಂದು ಬೆಂಕಿ ಹಾಕಲಾಗಿದೆ. ಪಟಾಕಿ ಸಿಡಿಸಿ ಪರಿಸರಕ್ಕೆ ಹಾನಿಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಕೋರ್ಟ್, ಯಥಾಸ್ಥಿತಿ ಮುಂದುವರಿಸಿ ವಿಚಾರಣೆಯನ್ನು ಮತ್ತೆ ಮುಂದೂಡಿತು.
ಇಶಾ ಫೌಂಡೇಷನ್ ವತಿಯಿಂದ ನಿರ್ಮಾಣ ಮಾಡಲಾದ ಆದಿಯೋಗಿ ಪ್ರತಿಮೆ ಜನವರಿ 15ರಂದು ಕೋರ್ಟ್ ಆದೇಶದಂತೆ ಲೋಕಾರ್ಪಣೆಗೊಂಡಿತ್ತು. ಇದಕ್ಕೂ ಮುನ್ನ ಪ್ರತಿಮೆ ಸ್ಥಾಪನೆ ವಿರೋಧಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಜನವರಿ 11ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಅಲ್ಲದೆ, ಸರ್ಕಾರ ಮತ್ತು ಇಶಾ ಯೋಗ ಕೇಂದ್ರ ಸೇರಿ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಆದಿಯೋಗಿ ಪ್ರತಿಮೆ ಸ್ಥಾಪನೆ ಸ್ಥಳವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಇಶಾ ಫೌಂಡೇಷನ್ ಆದಿಯೋಗಿ ಪ್ರತಿಮೆ ನೋಡಲು ಅವಲಗುರ್ಕಿ ಗ್ರಾಮ ಪಂಚಾಯತಿಗೆ ಸುಂಕ ಕಟ್ಟಬೇಕಂತೆ! ಶಿವನ ಭಕ್ತರು ಕೆಂಡಾಮಂಡಲ
ಆದಿಯೋಗಿ ಪ್ರತಿಮೆ ಸ್ಥಾಪನೆಗಾಗಿ ಸರ್ಕಾರ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ಕೋರ್ಟ್, ಪರಿಸರದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಒಪ್ಪಬಹುದು ಎಂದು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಲು ಅವಕಾಶ ನೀಡಿ ಯಥಾಸ್ಥಿತಿಗೆ ಆದೇಶಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Thu, 2 February 23