AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಚರ್ಚೆಗೆ ಬಂದ ಸಿಎಂ ಬದಲಾವಣೆ ಟ್ವೀಟ್: ಕಾಂಗ್ರೆಸ್ ಪಾದಯಾತ್ರೆಯಲ್ಲೂ ಸಿದ್ದರಾಮಯ್ಯ, ಡಿಕೆಶಿ ಅದೇ ಮಾತು

ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸುವ ಟ್ವೀಟ್ ಕುರಿತು ಪ್ರಸ್ತಾಪಿಸಿದರು. ಕರ್ನಾಟಕ ಕಾಂಗ್ರೆಸ್​ನ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಮತ್ತೆ ಚರ್ಚೆಗೆ ಬಂದ ಸಿಎಂ ಬದಲಾವಣೆ ಟ್ವೀಟ್: ಕಾಂಗ್ರೆಸ್ ಪಾದಯಾತ್ರೆಯಲ್ಲೂ ಸಿದ್ದರಾಮಯ್ಯ, ಡಿಕೆಶಿ ಅದೇ ಮಾತು
ಸಿದ್ದರಾಮಯ್ಯ
TV9 Web
| Edited By: |

Updated on:Aug 11, 2022 | 2:50 PM

Share

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕರ್ನಾಟಕ ಕಾಂಗ್ರೆಸ್​ ಮಾಡಿದ್ದ ಟ್ವೀಟ್​ ದೊಡ್ಡ ಸುದ್ದಿಯಾಗಿತ್ತು. ಹಲವು ಸಮರ್ಥನೆ, ಪರ-ವಿರೋಧದ ಚರ್ಚೆಯ ನಡುವೆಯೂ ವಿವಾದ ತಣ್ಣಗಾಗಿರಲಿಲ್ಲ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಸಹ ಈ ಕುರಿತು ಸ್ಪಷ್ಟನೆ ನೀಡಿ ವಿವಾದ ಶಮನಗೊಳಿಸಲು ಯತ್ನಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ‘ರೆಕ್ಕೆಪುಕ್ಕ ಇಲ್ಲದ ಇಂಥ ಸುದ್ದಿಗಳು ಏಕಾದರೂ ಹರಿದಾಡ್ತಾವೋ’ ಎಂದು ಬೇಸರ ವ್ಯಕ್ತಪಡಿಸಿದ್ದರು. ‘ನಾನಂತೂ ಟ್ವೀಟ್ ಮಾಡಿಲ್ಲ’ ಎಂದು ಸಿದ್ದರಾಮಯ್ಯ ವಿವಾದದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದರು. ಆದರೆ ಇಂದು ಮತ್ತೆ ಇದೇ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದು, ಸಿಎಂ ಬದಲಾವಣೆ ಕುರಿತ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆಗೆ ತೆರಳುವ ಮಾರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಎಂ ಬದಲಾವಣೆ ವಿಚಾರದ ಬಗ್ಗೆ ನಾನಂತೂ ಟ್ವೀಟ್ ಮಾಡಿಲ್ಲ. ಆದರೆ ಕಾಂಗ್ರೆಸ್ ಸರಿಯಾದ ಹೇಳಿಕೆಯನ್ನೇ ಪಿಕ್ ಮಾಡಿದೆ. ಸುರೇಶ್ ಗೌಡ ಯಾವ ಪಾರ್ಟಿಯವರು’ ಎಂದು ಪ್ರಶ್ನಿಸಿದರು. ‘ಯಾರೋ ಸಾಮಾನ್ಯ ವ್ಯಕ್ತಿ ಹೇಳಿದ್ದರೆ ಒಂದು ಲೆಕ್ಕ. ಆದರೆ ಆತ ಮಾಜಿ ಶಾಸಕ, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ. ಅಷ್ಟೇಕೆ ಬಸನಗೌಡ ಯತ್ನಾಳ್ ಕೂಡ ಹೇಳಿದ್ದರು ಅಲ್ಲವೇ’ ಎಂದು ಪ್ರಶ್ನಿಸಿದರು. ನಳಿನ್ ಕುಮಾರ್ ಕಟೀಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಿಸುವ ಕುರಿತು ಪ್ರಸ್ತಾಪಿಸಿದ ಅವರು, ಕಟೀಲ್ ಇದ್ರೂ ಅಷ್ಟೇ, ಇನ್ನೊಬ್ಬರೂ ಇದ್ರೂ ಅಷ್ಟೇ ಬಿಜೆಪಿ ಖಚಿತವಾಗಿ ಸೋಲುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.

ಹರ್​ಘರ್ ತಿರಂಗ ಅಭಿಯಾನದ ಬಗ್ಗೆ ವ್ಯಂಗ್ಯವಾಡಿದ ಅವರು, ತ್ರಿವರ್ಣ ಧ್ವಜಕ್ಕೆ ಇಷ್ಟು ದಿನ ಗೌರವ ಕೊಡದವರು ಈಗ ಮನೆಮನೆಯಲ್ಲಿ ಧ್ವಜ ಹಾರಿಸುತ್ತೇವೆ ಎಂದರೆ ನಂಬಲು ಆದೀತೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ನಮಗೆ ಏನೂ ಹೇಳಬೇಕಿಲ್ಲ: ಡಿಕೆಶಿ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯಾಗುತ್ತಿರುವುದು ನಿಜ. ಅವರು ನಮಗೆ ಏನೂ ಹೇಳಬೇಕಾಗಿಲ್ಲ. ಮಂತ್ರಿಗಳು, ಶಾಸಕರು ,ಮಾಜಿ ಶಾಸಕರು ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡೊದಕ್ಕೆ ಆಗುತ್ತಾ? ಬದಲಾವಣೆ ಮಾಡ್ತಾರೋ ಬಿಡ್ತಾರೋ ಅದು ಅವರಿಗೆ ಬಿಟ್ಟಿದ್ದು. ಅವರು ಗುಸುಗುಸು ಮಾತಾಡ್ತಿರೋದು ನಮ್ಮ ಕಿವಿಗೂ ಬಿದ್ದಿದೆ ಎಂದರು.

ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣ ಎನ್ನುವುದು ಸಾಧ್ಯತೆಗಳ ಕಲೆ. ಕರ್ನಾಟಕ ರಾಜ್ಯದಲ್ಲೂ ಏನು ಬೇಕಾದರೂ ಆಗಬಹುದು. ಶಿವಸೇನೆ ಜೊತೆ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು. ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಒಂದು ಲಕ್ಷ ಜನ ರಾಷ್ಟ್ರಧ್ವಜ ಹಿಡಿದು ಪಕ್ಷಾತೀತವಾಗಿ ಹೆಜ್ಜೆ ಹಾಕುತ್ತೇವೆ. ಅಂದು ಎಲ್ಲರೂ ಮೆಟ್ರೋ ಬಳಕೆ ಮಾಡಿ ಎಂದು ಮನವಿ ಮಾಡುತ್ತೇನೆ ಎಂದರು.

ಮಾಸ್ತಿ ಗ್ರಾಮದ ಮಹಿಳೆಯರು ಡಿ.ಕೆ.ಶಿವಕುಮಾರ್ ಅವರಿಗೆ ರಾಖಿ ಕಟ್ಟಿದರು. ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಹೆಲಿಕಾಪ್ಟರ್​ನಿಂದ ಕೆಳಗಿಳಿದ ತಕ್ಷಣ ಡಿ.ಕೆ.ಶಿವಕುಮಾರ್​ಗೆ ಮಹಿಳೆಯರು ರಾಖಿ ಕಟ್ಟಿದರು.

ಗೌರಿಬಿದನೂರು: ವಿದುರಾಶ್ವತ್ಥಕ್ಕೆ ಪಾದಯಾತ್ರೆ

ಕಾಂಗ್ರೆಸ್​ ಪಾದಯಾತ್ರೆಗೆ ನಿಗದಿತ ಸಮಯಕ್ಕೆ ಸಿದ್ದರಾಮಯ್ಯ ಬಾರದ ಹಿನ್ನೆಲೆಯಲ್ಲಿ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರ್ ರೆಡ್ಡಿ ಹಾಗೂ ಬೆಂಬಲಿಗರು ಪಾದಯಾತ್ರೆ ಆರಂಭಿಸಿದರು. ಗೌರಿಬಿದನೂರು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಪಾದಯಾತ್ರೆ ಬಂದಾಗ ಪಾಲ್ಗೊಂಡಿದ್ದವರಿಗೆ ಹಣ್ಣು ಹಂಪಲು, ಟೀ-ಬಿಸ್ಕತ್, ಸೌತೆಕಾಯಿ, ಕಡ್ಲೆಪುರಿ ಸೇರಿದಂತೆ ತಿಂಡಿ ತಿನಿಸುಗಳ ವಿತರಣೆ ನಡೆಯಿತು. ಪಾದಯಾತ್ರೆಯಲ್ಲಿ ಉಚಿತವಾಗಿ ಸಿಗುವ ಸೇಬು ಹಣ್ಣು ಪಡೆಯಲು ಕಾರ್ಯಕರ್ತರು ಮುಗಿಬಿದ್ದರ. ಮತ್ತೊಂದೆಡೆ ನಗರದ ಬಾರ್​ಗಳು ಭರ್ತಿಯಾಗಿದ್ದವು. ಕೆಲವರು ಮದ್ಯ ಸೇವಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ಗೌರಿಬಿದನೂರಿನ ಅಲ್ಕಾಪುರದಿಂದ ವಿದುರಾಶ್ವತ್ಥದ ವೀರಸೌಧದವರೆಗೂ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಧ್ವಜ ಸತ್ಯಾಗ್ರಾಹದ ವೇಳೆ ವಿದುರಾಶ್ವತ್ಥದಲ್ಲಿ ಬ್ರಿಟಿಷ್ ಆಡಳಿತದ ಪೊಲೀಸರು ಗುಂಡು ಹಾಕಿಸಿ ಜನರನ್ನು ಕೊಂದಿದ್ದರು. ಹೀಗಾಗಿ ಇದು ಕರ್ನಾಟಕದ ಜಲಿಯನ್ ವಾಲಾಬಾಗ್ ಎನಿಸಿಕೊಂಡಿದೆ.

Published On - 2:50 pm, Thu, 11 August 22