ಚಿಕ್ಕಬಳ್ಳಾಪುರ: ವಿಷಸೇವಿಸಿ ತಂದೆ, ತಾಯಿ ಹಾಗೂ ಮಗ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. ಶ್ರಿರಾಮಪ್ಪ(63), ಸರೋಜಮ್ಮ(60) ಮನೋಜ್(24) ಆತ್ಮಹತ್ಯೆ ಮಾಡಿಕೊಂಡವರು. ಪ್ರಿಯಕರನೊಂದಿಗೆ ಮಗಳು ಅರ್ಚನಾ ಪರಾರಿ ಆದ ಹಿನ್ನೆಲೆ ಮನನೊಂದ ಕುಟುಂಬಸ್ಥರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರ್ಚನಾ ನಾಪತ್ತೆಯಾಗಿದ್ದಾಗ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಹಂಡಿಗನಾಳ ಗ್ರಾಮದಲ್ಲಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಂಡಿಗನಾಳಲ್ಲಿ ಎಎಸ್ಪಿ ಕುಶಾಲ್ ಚೌಕ್ಸಿ ಪ್ರತಿಕ್ರಿಯೆ ನೀಡಿದ್ದಾರೆ. ಗ್ರಾಮದ ಅರ್ಚನಾ ಎಂಬುವರು ಕಾಣೆಯಾಗಿದ್ದ ಬಗ್ಗೆ ದೂರು ನೀಡಿದ್ದರು. ಸಿಡಿಆರ್ ಪಡೆದು ತನಿಖೆ ನಡೆಸಲು ನಾವು ಸನ್ನದ್ಧವಾಗಿದ್ದೆವು. ಆದ್ರೆ, ಇಂದು ಯುವತಿ ತಂದೆ, ತಾಯಿ, ಸೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರ್ಚನಾ ಗ್ರಾಮದ ಅನ್ಯ ಜಾತಿಯ ನಾರಾಯಣಸ್ವಾಮಿ ಜೊತೆ ಹೋಗಿರುವ ಶಂಕೆ ಇದೆ ಎಂದರು.
ಆತ್ಮಹತ್ಯೆಗೂ ಮುನ್ನ ಮೃತ ಶ್ರೀರಾಮಪ್ಪ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮನೆ ಬಿಟ್ಟು ಹೋಗಿರುವ ಮಗಳಿಗೆ ಆಸ್ತಿ ನೀಡದಂತೆ ಹಾಗೂ ತನ್ನ ಸಾವಿಗೆ ಆಕೆಯ ನಿರ್ಧಾರವೇ ಕಾರಣವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಶ್ರೀರಾಮಪ್ಪನ ದೊಡ್ಡ ಮಗ ರಂಜತ್ ಮನೆಯಲ್ಲಿ ಮಲಗಿದ್ದಾಗ ಹೊರಗೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ತಂಗಿಗೆ ತಮ್ಮನ ಮೆಸೇಜ್
ಆತ್ಮಹತ್ಯೆಗೂ ಮುನ್ನ ಓಡಿ ಹೋಗಿದ್ದ ತಂಗಿಗೆ ತಮ್ಮ ಮನೋಜ್ ಮೆಸೇಜ್ ಮಾಡಿದ್ದಾನೆ. ರಾತ್ರಿ 11 ಗಂಟೆಯೊಳಗೆ ಮನೆಗೆ ಬನ್ನಿ. ನಿನ್ನ ನಿರ್ಧಾರದಿಂದ ಮನನೊಂದಿದ್ದೇವೆ. 11 ಗಂಟೆ ಒಳಗೆ ಮನೆಗೆ ಬರದಿದ್ದರೆ ನಮ್ಮ ಪ್ರಾಣ ಹೋಗುತ್ತೆ. ಮನೆಯಲ್ಲಿ ರಂಜೀತ್ ಅಣ್ಣ ಕಾಳು ಮಾತ್ರೆ ತಂದು ಇಟ್ಟಿದ್ದಾರೆ. ನಾವೆಲ್ಲರೂ ಅದನ್ನು ತಿಂದು ರಾತ್ರಿ 11 ಗಂಟೆಯ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮೆಸೇಜ್ ಕಳಿಸಿದ್ದಾನೆ.
ಹಫ್ತಾ ಕೊಡದಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು: ಹಫ್ತಾ ಕೊಡದಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಖಾನ್ ಅಲಿಯಾಸ್ ಕೊಡಂಚ ಮುಬಾರಕ್, ಮೊಹ್ಮದ್ ಸಲೀಂ ಅಲಿಯಾಸ್ ಗ್ಯಾಲಕ್ಸಿ ಸಲೀಂ, ಅಬೂಬಕ್ಕರ್ ಸಿದ್ದಿಕಿ ಅಲಿಯಾಸ್ ಯೇಣ ಬಂಧಿತ ಆರೋಪಿಗಳು. ಸೆಪ್ಟೆಂಬರ್ 27ರಂದು ಬಾಪೂಜಿನಗರದಲ್ಲಿ ಶ್ವೇಬ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.
ಬೈಕ್ ನಲ್ಲಿ ಬಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆ ಪರಿಣಾಮ ಯುವಕ ಶ್ವೇಬ್ ಕೈಗಳು ಕಟ್ ಆಗಿ, ತಲೆ, ಬೆನ್ನಿನ ಭಾಗದಲ್ಲಿ ಗಾಯಾವಾಗಿತ್ತು. ಸ್ಥಳೀಯರು ಕೂಡಲೇ ಗಾಯಾಳು ಶ್ವೇಬ್ ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿತ್ತು. ದುಷ್ಕರ್ಮಿಗಳು ಹಲ್ಲೆಗೂ 10 ದಿನಗಳ ಹಿಂದೆ ಶ್ವೇಬ್ ಮನೆಗೆ ನುಗ್ಗಿ, ಕಿಟಕಿ ಗಾಜು ಪುಡಿ ಮಾಡಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳೆ ಭೀಕರ ಹತ್ಯೆ ಸಿಸಿ ಕ್ಯಾಮರಾದಲ್ಲಿ ಸೆರೆ
ಗದಗ ನಗರದಲ್ಲಿ ಹಾಡಹಗಲೇ ಮಹಿಳೆ ಭೀಕರ ಹತ್ಯೆ ನಡೆದಿದೆ. ಬೇಕರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಮಹಿಳೆ ಭೀಕರ ಹತ್ಯೆ ಸೆರೆಯಾಗಿದೆ. ಮುಳಗುಂದ ನಾಕಾ ಬಳಿ ಚಾಕುವಿನಿಂದ ಕತ್ತು ಕೊಯ್ದು ನಾಲ್ಕು ಜನ ಹಂತಕರು ಕೊಲೆ ಮಾಡಿದ್ದಾರೆ. ಭಯಾನಕ ಕೊಲೆ ನೋಡಿ ಸ್ಥಳದಲ್ಲಿದ್ದ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಬೇಕರಿಗೆ ತಿನಿಸು ಖರೀದಿ ಬರುವಾಗ ಮಹಿಳೆಯನ್ನು ಇರಿದು ಕೊಲೆ ಮಾಡಲಾಗಿದೆ. ಸದ್ಯ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪಿಗಳಾದ ಚೇತನಕುಮಾರ, ರೋಹನಕುಮಾರ ಬಂಧಿತರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:56 am, Tue, 4 October 22