Tv9 Impact: ಅಕ್ರಮ ಮದ್ಯ ಮಾರಾಟ ತಡೆಯುವ ಭರವಸೆ ನೀಡಿದ ಅಧಿಕಾರಿಗಳು, ರಾಜೀನಾಮೆ ಹಿಂಪಡೆದ ಗ್ರಾ.ಪಂ ಸದಸ್ಯ
ಚಿಕ್ಕಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವಿ.ಕೆ.ವಾಸುದೇವ್, ಗೌರಿಬಿದನೂರು ಪೊಲೀಸ್ ವೃತ್ತ ನಿರೀಕ್ಷಕ ಶಶಿಧರ್ ಹಾಗೂ ಅಬಕಾರಿ ಅಧಿಕಾರಿಗಳು, ವೆಂಕಟೇಶ್ಗೆ ಕರೆ ಮಾಡಿ ಇನ್ನು ಮುಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸರಬರಾಜು ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಚಿಕ್ಕಬಳ್ಳಾಫುರ: ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ವೇಳೆ ಗ್ರಾಮದಲ್ಲಿರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದಾಗಿ ಹೇಳಿ ಜನರಿಂದ ಮತ ಪಡೆದು ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ವೆಂಕಟೇಶ್ ರಾಜೀನಾಮೆ ನೀಡಿದ್ದರು. ಅಕ್ರಮ ಮದ್ಯ ತಡೆಗಟ್ಟಲು ಆಗ್ತಿಲ್ಲ ಇನ್ನೂ ಪಂಚಾಯಿತಿ ಸದಸ್ಯನಾಗಿ ಪ್ರಯೋಜನವೇನು ಅಂತ ಬೇಸರ ಹೊರ ಹಾಕಿದ್ದರು.
ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪ ನಿವಾಸಿ ಹಾಗೂ ಮೀನಕನಗುರ್ಕಿ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ವೆಂಕಟೇಶ್ ನಿನ್ನೆ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕುರಿತು ಟಿವಿ9 ಕನ್ನಡ ಡಿಜಿಟಲ್ನಲ್ಲಿ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಸ್ಥಳೀಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ.ಕೆ.ಸುಧಾಕರ್ ರವರ ಸೂಚನೆ ಮೇರೆಗೆ ಅವರ ಆಪ್ತ ಸಹಾಯಕ, ವೆಂಕಟೇಶ್ಗೆ ಕರೆ ಮಾಡಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದ್ದಾರೆ.
ಮತ್ತೊಂದೆಡೆ ವರದಿ ಗಮನಿಸಿದ ಚಿಕ್ಕಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವಿ.ಕೆ.ವಾಸುದೇವ್, ಗೌರಿಬಿದನೂರು ಪೊಲೀಸ್ ವೃತ್ತ ನಿರೀಕ್ಷಕ ಶಶಿಧರ್ ಹಾಗೂ ಅಬಕಾರಿ ಅಧಿಕಾರಿಗಳು, ವೆಂಕಟೇಶ್ಗೆ ಕರೆ ಮಾಡಿ ಇನ್ನು ಮುಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸರಬರಾಜು ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಈಗ ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ. ಇನ್ನು ಕುಗ್ರಾಮ ಕನಗಾನಕೊಪ್ಪ ಗ್ರಾಮಕ್ಕೆ ಆಗಮಿಸಿ ವರದಿ ಪ್ರಕಟ ಮಾಡಿದ್ದಕ್ಕೆ ಟಿವಿ9 ಕನ್ನಡ ಡಿಜಿಟಲ್ಗೆ ಧನ್ಯವಾದ ತಿಳಿಸಿದರು.
ಇದನ್ನೂ ಓದಿ: ಅಕ್ರಮ ಮದ್ಯ ಮಾರಾಟ: ದೂರು ಕೊಟ್ಟ ಗ್ರಾ.ಪಂ. ಸದಸ್ಯನನ್ನೇ ಬೈದು ಕಳಿಸಿದ ಪೊಲೀಸ್, ರಾಜೀನಾಮೆ ನೀಡಿದ ಸದಸ್ಯ
Published On - 12:49 pm, Fri, 24 September 21