
ಚಿಕ್ಕಬಳ್ಳಾಪುರ, ಜೂನ್ 16: ನಂದಿ ಬೆಟ್ಟದಲ್ಲಿ (Nandi Hills) ಸಚಿವ ಸಂಪುಟ ಸಭೆ (Cabinet Meeting) ನಡೆಯುವ ಹಿನ್ನೆಲೆಯಲ್ಲಿ ಐತಿಹಾಸಿಕ ಭೋಗನಂದೀಶ್ವರ ಮತ್ತು ಯೋಗನಂದೀಶ್ವರ ದೇಗುಲಗಳಿಗೆ ಸಾರ್ವಜನಿಕರ ಭೇಟಿಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಜೂನ್ 19ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಐತಿಹಾಸಿಕ ಐತಿಹಾಸಿಕ ಭೋಗನಂದೀಶ್ವರ ಮತ್ತು ಯೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ, ಎರಡೂ ದೇವಾಲಯಕ್ಕೆ ಸಾರ್ವಜನಿಕರ ಭೇಟಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ.ಪಿ.ಎನ್ ಆದೇಶ ಹೊರಡಿಸಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕೇಂದ್ರ ವಲಯ ಐ.ಜಿ.ಪಿ ಸೇರಿದಂತೆ ಸ್ಥಳಿಯ ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ನಂದಿ ಬೆಟ್ಟಕ್ಕೆ 5 ದಿನ ಪ್ರವಾಸಿಗರಿಗೆ ನಿರ್ಬಂಧ: ಯಾವಾಗಿನಿಂದ? ಇಲ್ಲಿದೆ ವಿವರ
ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ನಂದಿ ಬೆಟ್ಟದಲ್ಲಿ ಬರಪೂರ ಸಿದ್ದತೆ ಮಾಡಿಕೊಳ್ಳಲಾಗಿದೆ. ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕಟ್ಟಡಗಳ ನವೀಕರಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಎಂ.ಸಿ.ಸುಧಾಕರ್ ನಂದಿ ಬೆಟ್ಟಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆ ಕಾರ್ಯ ಪರಿಶೀಲನೆ ನಡೆಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಹ ನಂದಿ ಬೆಟ್ಟಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸಂಪುಟ ಸಭೆ ವರದಾನವಾಗಿದ್ದು, ವೈದ್ಯಕೀಯ ಕಾಲೇಜು, ಹೈಟೆಕ್ ಹೂವು ಮಾರುಕಟ್ಟೆ, ಜಕ್ಕಲಮಡಗು ಜಲಾಶಯ ಎತ್ತರ ಹೆಚ್ಚಿಸುವ ವಿಚಾರ, ನಂದಿ ಬೆಟ್ಟ ಹಾಗೂ ಭೋಗನಂದೀಶ್ವರ ದೇವಾಲಯ ಸಕ್ರ್ಯೂಟ್‍ನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು.
1986ರಲ್ಲಿ ನಂದಿ ಗಿರಿಧಾಮದಲ್ಲಿ ಎರಡನೇ ಸಾರ್ಕ್ ಶೃಂಗಸಭೆ ನಡೆದಿತ್ತು. ಇದೀಗ, ರಾಜ್ಯ ಸರ್ಕಾರ ನಂದಿ ಬೆಟ್ಟದಲ್ಲಿನ ಪ್ರಕೃತಿ ಸೊಬಗಿನತ್ತ ಚಿತ್ತಹರಿಸಿದ್ದು, ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಸೇರಿದಂತೆ ವಿಶ್ವದ ಖ್ಯಾತನಾಮರು ನಂದಿ ಬೆಟ್ಟದ ಪ್ರಕೃತಿ ಸೊಬಗಿಗೆ ಮನಸೋತಿದ್ದರು.
Published On - 6:38 pm, Mon, 16 June 25