ಚಿಕ್ಕಬಳ್ಳಾಪುರ: ಕೇರಳದ ವಯನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿದಂತೆ ನಮ್ಮದೇ ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನೆರೆ ಬಂದು ಊರುಗಳಿಗೆ ಊರೇ ಕೊಚ್ಚಿ ಹೋಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಬೆಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಇಂತಹ ದುಃಸ್ಥಿತಿಯಲ್ಲಿ ಅತ್ತ ಕರಾವಳಿ ಜಿಲ್ಲೆಗಳಲ್ಲಿ ನಿಲ್ಲೋ ನಿಲ್ಲೋ ಮಳೆರಾಯ ಎನ್ನುತ್ತಿದ್ದರೆ ಇತ್ತ ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆಗಾಗಿ ಕೋಳಿ ಕುರಿ ಬಲಿ ನೀಡಿ ಹುಯ್ಯೋ ಹುಯ್ಯೋ ಮಳೆರಾಯ ಅಂತಾ ಪ್ರಾರ್ಥನೆ ಮಾಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ.
ರಾಜ್ಯದ ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಅಬ್ಬರ ಜೋರಾಗಿ ಬೆಟ್ಟ ಗುಡ್ಡಗಳೇ ಕುಸಿದು ಸಾವು ನೋವು ಸಂಭವಿಸಿ ಜನ ನರಕ ಅನುಭವಿಸುತಿದ್ರೆ ಇತ್ತ ಮಳೆ ಬೆಳೆ ಇಲ್ಲದೆ ಬಯಲು ಸೀಮೆಯ ವಿಭಜಿತ ನೆರೆಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಮರ್ಪಕವಾಗಿ ಮಳೆಯೇ ಆಗ್ತಿಲ್ಲ.
ಇದ್ರಿಂದ ಹುಯ್ಯೋ ಹುಯ್ಯೋ ಮಳೆರಾಯ ಅಂತ ಜಾನಪದ ಶೈಲಿಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ಮಾಡಿದ್ದಾರೆ. ದೇವರಿಗೆ ಕುರಿ ಕೋಳಿ ಬಲಿ ನೀಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು.
19 ವರ್ಷಗಳ ನಂತರ ಗ್ರಾಮದಲ್ಲಿ ಅನಂತ ಪದ್ಮಸ್ವಾಮಿ, ಮುದಗಾನ ಕುಂಟೆ ಗಂಗಮ್ಮ, ಮುನೇಶ್ವರಸ್ವಾಮಿ, ಸಪ್ಪಲಮ್ಮ, ದುರ್ಗಾದೇವಿ ಮಹೇಶ್ವರಿ ಸೇರಿದಂತೆ ಒಂಬತ್ತು ಗ್ರಾಮ ದೇವತೆಗಳಿಗೆ ತಂಬಿಟ್ಟು ದೀಪ ಬೆಳಗಿದರು. ಗ್ರಾಮಸ್ಥರು ತಮ್ಮ ಬಂಧು ಬಳಗ ಸೇರಿ ಸಂಭ್ರಮದಿಂದ ದೀಪೋತ್ಸವ ಆಚರಣೆ ಮಾಡಿದ್ರು.
ಸಾವಿರಾರು ಮಹಿಳೆಯರು ಸಿಂಗಾರಗೊಂಡು ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಹೆಜ್ಜೆ ಹಾಕಿದ್ರು, ದೀಪ ಹೊತ್ತ ಮಹಿಳೆಯರ ಮುಂದೆ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಿ ಮಳೆ ಬೆಳೆ ಆಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಕಾಳು ಇದ್ದವರಿಗೆ ಹಲ್ಲಿಲ್ಲ – ಹಲ್ಲಿದ್ದವರಿಗೆ ಕಾಳು ಇಲ್ಲ ಎಂಬ ಹಾಗೆ ದೇಶ ರಾಜ್ಯ ಸೇರಿದಂತೆ ಹಲವೆಡೆ ಮಳೆಯಿಂದ ನೆರೆ ಉಂಟಾಗಿ ಜನರ ಬದುಕು ಬರ್ಬಾದ್ ಆಗಿದ್ರೆ ಇತ್ತ ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಬೆಳೆಗಾಗಿ ಕುರಿ ಕೋಳಿ ಬಲಿ ಕೊಡುವ ಮೂಲಕ ಮಳೆಗಾಗಿ ಪೂಜೆಗಳು ನಡೆದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 31 July 24