ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪತ್ತೆ; ಆರೋಗ್ಯ ಇಲಾಖೆಯಿಂದ ಮುಜಾಗೃತ ಕ್ರಮ
ಝಿಕಾ ವೈರಸ್ ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧಿಗಳನ್ನು ಸೇವಿಸಬೇಕು ಹಾಗೂ ರೋಗ ಲಕ್ಷಣಗಳು ಹೆಚ್ಚಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಝಿಕಾ ವೈರಸ್ ಸೋಂಕಿತರು ಬೇರೆಯವರಿಗೆ ರೋಗ ಹರಡದಂತೆ ತಡೆಯಲು ಸೊಳ್ಳೆ ಪರದಯನ್ನು ಬಳಸಬೇಕು.
ಚಿಕ್ಕಬಳ್ಳಾಪುರ, ನ.02: ಜಿಲ್ಲೆಯ ಶಿಡ್ಲಘಟ್ಟ(Sidlaghatta) ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಮಾರಕ ಝಿಕಾ ವೈರಸ್(Zika virus) ಪತ್ತೆಯಾಗಿತ್ತು. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ವಿಶೇಷ ಸಭೆ ನಡೆಸಿದ್ದರು. ಝಿಕಾ ಎಂಬುದು ಒಂದು ವೈರಸ್ ಸೋಂಕು, ಡೆಂಗ್ಯೂ, ಚಿಕೂನ್ ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳಿಂದಲೇ ಝಿಕಾ ವೈರಸ್ ಸೋಂಕು ಸಹ ಹರಡುತ್ತವೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸ್ವಚ್ಚ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ.
ಝಿಕಾ ವೈರಸ್ ಸೋಂಕಿನ ಲಕ್ಷಣಗಳು
ಮೊದಲು ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಧೆಗಳು (ದದ್ದುಗಳು), ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಬಹುತೇಕ ಝಿಕಾ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಹಾಗೂ ಸಾಧಾರಣ ಸ್ವರೂಪವಾಗಿದ್ದು, 2-7 ದಿನಗಳವರೆಗೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಝಿಕಾ ಸೋಂಕು ಕಾಣಿಸಿಕೊಂಡಲ್ಲಿ ಜನಿಸಿದ ಶಿಶುವಿನ ತಲೆಯ ಗಾತ್ರದಲ್ಲಿ ಕಡಿಮೆ (ಮೈಕ್ರೊಸೆಫಾಲಿ) ಬೆಳವಣಿಗೆ ದೋಷ ಕಂಡು ಬರಬಹುದು.
ಝಿಕಾ ವೈರಸ್ ಪತ್ತೆ ಹಚ್ಚುವ ವಿಧಾನ
ಈ ಮಾರಾಣಾಂತೀಕ ಝಿಕಾ ವೈರಸ್ನ್ನು ಪತ್ತೆ ಹಚ್ಚಲು, ರೋಗ ಲಕ್ಷಣಗಳು ಕಂಡು ಬಂದವರ ರಕ್ತದ ಮಾದರಿ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪತ್ತೆ ಹಚ್ಚಬಹುದು.
ಝಿಕಾ ವೈರಸ್ ಸೋಂಕು ದೃಢಪಟ್ಟಲ್ಲಿ ತೆಗೆದುಕೊಳ್ಳುವ ಕ್ರಮ
ಝಿಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿರುವುದಿಲ್ಲ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಇದಕ್ಕೆ ಸಾಕಷ್ಟು ವಿಶ್ರಾಂತಿಯ ಅವಶ್ಯಕತೆಯಿದ್ದು, ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ಬಳಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧಿಗಳನ್ನು ಸೇವಿಸಬೇಕು ಹಾಗೂ ರೋಗ ಲಕ್ಷಣಗಳು ಹೆಚ್ಚಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಝಿಕಾ ವೈರಸ್ ಸೋಂಕಿತರು ಬೇರೆಯವರಿಗೆ ರೋಗ ಹರಡದಂತೆ ತಡೆಯಲು ಸೊಳ್ಳೆ ಪರದಯನ್ನು ಬಳಸಬೇಕು.
ಮುಂಜಾಗ್ರತಾ ಕ್ರಮ
ಈಡಿಸ್ ಸೊಳ್ಳೆಗಳು ಕಚ್ಚುವಿಕೆಯಿಂದ ಪಾರಾಗಲು ಸೋಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಚವಾಗಿಡುವುದು, ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚುವುದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳವುದು ಮತ್ತು ನೀರು ನಿಲ್ಲದಂತೆ ಎಚ್ಚರವಹಿಸುವುದು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು, ಸೊಳ್ಳೆ ಪರದೆ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಬಹುದು. ಇನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ