ಚಿಕ್ಕಮಗಳೂರು: ರಾತ್ರೋರಾತ್ರಿ ಕಾಡಾನೆಗಳಿಂದ ದಾಳಿ ಯತ್ನ, ಅಭಿಮನ್ಯು ನೇತೃತ್ವದ ತಂಡ ಶಿಫ್ಟ್
ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಭೀಮ ಆನೆ ಸೇರಿದಂತೆ 30 ಕಾಡಾನೆಗಳ (ಬೀಟಮ್ಮ ಗ್ಯಾಂಗ್) ಉಪಟಳ ಹೆಚ್ಚಾಗಿದೆ. ಈ ಬೀಟಮ್ಮ ಗ್ಯಾಂಗ್ ಅಭಿಮನ್ಯು ಮತ್ತು ಆತನ ತಂಡದ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯು ತಂಡವನ್ನು ಸ್ಥಳಾಂತರಿಸಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 02: ಚಿಕ್ಕಮಗಳೂರಿನಲ್ಲಿ (Chikkamagaluru) ಭೀಮ ಆನೆ ಸೇರಿದಂತೆ 30 ಕಾಡಾನೆಗಳ (ಬೀಟಮ್ಮ ಗ್ಯಾಂಗ್) ಉಪಟಳ ಹೆಚ್ಚಾಗಿದೆ. ಕಾಡಾನೆ (Elephant) ಸೆರೆ ಕಾರ್ಯಾಚರಣೆ ಸಂಬಂಧ ಅಭಿಮನ್ಯು (Abhimanyu) ಮತ್ತು ಆತನ ತಂಡ (ಕುಮ್ಕಿ) ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ (Forest Department) ವಸತಿ ಗೃಹದ ಬಳಿ ಕ್ಯಾಂಪ್ ಹಾಕಲಾಗಿದೆ. ಈ ಕ್ಯಾಂಪ್ಗೆ ಬೀಟಮ್ಮ ಗ್ಯಾಂಗ್ ರಾತ್ರೋರಾತ್ರಿ ದಾಳಿ ಮಾಡಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಕುಮ್ಕಿ ಆನೆಗಳ ಕ್ಯಾಂಪ್ ಶಿಫ್ಟ್ ಮಾಡಿದ್ದಾರೆ. ಬೀಟಮ್ಮ ಗ್ಯಾಂಗ್ ಆಲದಗುಡ್ಡೆ ಗ್ರಾಮದಿಂದ ಮತ್ತಾವರ ಗ್ರಮಾಕ್ಕೆ ಬಂದು ಬಂದು ನೆಲಸಿದೆ.
ಮತ್ತಾವರ ಗ್ರಾಮ ಸಮೀಪದ ಅರಣ್ಯದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ಕುಮ್ಕಿ ಕ್ಯಾಂಪ್ನಲ್ಲಿ ಅಭಿಮನ್ಯು, ಮಹೇಂದ್ರ, ಭೀಮ ಧನಂಜಯ, ಸುಗ್ರೀವ, ಹರ್ಷ ಅಶ್ವತ್ಥಾಮ ಪ್ರಶಾಂತ ಎಂಬ ಹೆಸರಿನ ಆನೆಗಳಿವೆ. ಅಭಿಮನ್ಯು ಟೀಮ್ ಕಾರ್ಯಚರಣೆಗಾಗಿ ನಾಗರಹೊಳೆಯಿಂದ ಮತ್ತಾವರ ಗ್ರಾಮಕ್ಕೆ ಬಂದಿವೆ.
ಕಾಡಾನೆ ದಾಳಿ, ಯುವಕ ಸಾವು
ರಾಮನಗರ: ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ಗೌಡಹಳ್ಳಿ ಬಳಿ ನಡೆದಿದೆ. ಕಾಡಾನೆ ದಾಳಿಗೆ ಗೌಡಹಳ್ಳಿಯ ರಾಜು (48) ಮೃತ ವ್ಯಕ್ತಿ. ಇದುವರೆಗೆ ಕಾಡಾನೆಗಳ ದಾಳಿಗೆ 10 ಜನರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಶಾಲಾ ಆವರಣದಿಂದ ಹೊರ ಬಂದ ಕಾಡಾನೆ ಹಿಂಡು; 9 ಕ್ಕೂ ಅಧಿಕ ಗ್ರಾಮಗಳಲ್ಲಿ ಹೆಚ್ಚಿದ ಆತಂಕ
ಗುರುವಾರ ಮಧ್ಯಾಹ್ನ ರಾಜು ಸೇರಿದಂತೆ ಇನ್ನೂ ಕೆಲವರು ಗೌಡಹಳ್ಳಿ ಸಮೀಪದ ಸಂಗಮಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಮೂರು ಜನ ಪೈಕಿ ರಾಜು ದಾರಿ ತಪ್ಪಿದ್ದಾನೆ. ಎಷ್ಟೇ ಹುಡುಕಿದರೂ ರಾಜು ಪತ್ತೆಯಾಗಿರಲಿಲ್ಲ. ಇಂದು (ಫೆ.02) ಬೆಳಿಗ್ಗೆ ಕಾಡಿನಲ್ಲಿ ರಾಜು ಮೃತದೇಹ ಪತ್ತೆಯಾಗಿದೆ.
ರೈತನ ಮೇಲೆ ಕಾಡು ಹಂದಿ ದಾಳಿ
ದಾವಣಗೆರೆ: ಜಮೀನಿಗೆ ಹೋದ ರೈತನ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹನಮಂತಪ್ಪ (63) ಕಾಡು ಹಂದಿಯ ದಾಳಿಗೆ ಒಳಗಾದ ರೈತ. ತೀವ್ರಗಾಯಗೊಂಡ ಹನಮಂತಪ್ಪನನ್ನು ದಾವಣಗೆರೆ ಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತ ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿದ್ದಾನೆ.
ರೈತ ಹನಮಂತಪ್ಪ ಇಂದು (ಫೆ.02) ಬೆಳಿಗ್ಗೆ ಆರು ಗಂಟೆಗೆ ಜಮೀನಿಗೆ ಹೋಗಿದ್ದನು. ಜಮೀನಿನಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಕಾಡು ಹಂದಿ ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಹನುಮಂತಪ್ಪನ ಚೀರಾಟ ಕೇಳಿದ ಅಕ್ಕ ಪಕ್ಕದ ಜಮೀನಿನ ರೈತರು, ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ. ಬಳಿಕ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಬಸವಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Fri, 2 February 24