ಸುಂದರಕಾಂಡ ಅಲ್ಲ.. ಕಾಫಿನಾಡಿನ ಸುಂದರ ಕಾನನದಲ್ಲಿ ನಡೆದಿರುವ ಅರಣ್ಯ ಇಲಾಖೆಯ ಕರ್ಮಕಾಂಡ ಇದು!

ಅನೇಕ ಸಮೀಕ್ಷೆಗಳು, ಅರಣ್ಯಕ್ಕೆ ಮಾನವನ ಅತಿಕ್ರಮಣ, ಅಭಿವೃದ್ಧಿ ಹೆಸರಲ್ಲಿ ಕಾಡನ್ನ ನಾಶಮಾಡಿರೋದೇ ಭೂಕುಸಿತ, ಗುಡ್ಡ ಕುಸಿತಕ್ಕೆ ಕಾರಣ ಅಂತಾ ಬೊಟ್ಟು ಮಾಡಿ ತೋರಿಸಿದವು. ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದ್ದ ಅರಣ್ಯ ಇಲಾಖೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಿತ್ತು. ವಿಪರ್ಯಾಸ ಅಂದ್ರೆ ಸ್ವತಃ ಅರಣ್ಯ ಇಲಾಖೆಯೇ ಕಾಡು ನಾಶಕ್ಕೆ ಮುಂದಾಗಿದೆ.

ಸುಂದರಕಾಂಡ ಅಲ್ಲ.. ಕಾಫಿನಾಡಿನ ಸುಂದರ ಕಾನನದಲ್ಲಿ ನಡೆದಿರುವ ಅರಣ್ಯ ಇಲಾಖೆಯ ಕರ್ಮಕಾಂಡ ಇದು!
ಸುಂದರ ಕಾನನದ ನಡುವೆ ಅರಣ್ಯ ಇಲಾಖೆಯ ಎಡವಟ್ಟು
Edited By:

Updated on: Dec 04, 2020 | 12:24 PM

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದ ಎರಡು ವರ್ಷದಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರ, ಅನಾಹುತ ಅಷ್ಟಿಷ್ಟಲ್ಲ. ಈ ಹಿಂದೆ, ಎಂತೆಂಥ ಮಳೆಗೂ ಅಲುಗಾಡದ ಪ್ರದೇಶಗಳು ಕಳೆದ ಬಾರಿ ಸುರಿದ ಕುಂಭದ್ರೋಣ ಮಳೆಗೆ ಅಲ್ಲೋಲ ಕಲ್ಲೋಲವಾಗಿರೋದನ್ನ ಕಂಡು ಮಲೆನಾಡಿಗರೇ ಬೆಚ್ಚಿ ಬಿದ್ದಿದ್ರು. ಕೊನೆಗೆ ನಡೆದ ಅನೇಕ ಸಮೀಕ್ಷೆಗಳು, ಅರಣ್ಯಕ್ಕೆ ಮಾನವನ ಅತಿಕ್ರಮಣ, ಅಭಿವೃದ್ಧಿ ಹೆಸರಲ್ಲಿ ಕಾಡನ್ನ ನಾಶ ಮಾಡಿರೋದೇ ಭೂಕುಸಿತ, ಗುಡ್ಡ ಕುಸಿತಕ್ಕೆ ಕಾರಣ ಅಂತಾ ಬೊಟ್ಟು ಮಾಡಿ ತೋರಿಸಿದವು. ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದ್ದ ಅರಣ್ಯ ಇಲಾಖೆ ಜನಸಾಮಾನ್ಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕಿತ್ತು. ವಿಪರ್ಯಾಸ ಅಂದ್ರೆ ಸ್ವತಃ ಅರಣ್ಯ ಇಲಾಖೆಯೇ ಕಾಡು ನಾಶಕ್ಕೆ ಮುಂದಾಗಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಬರೀ ಅವಾಂತರ ಅಲ್ಲ.. ಮಹಾಗಂಡಾಂತರ ಅನ್ನುತ್ತಾರೆ ಸ್ಥಳೀಯರು
ಸುಂದರವಾದ ಹಸಿರಸಿರಿಯ ಅರಣ್ಯದಲ್ಲಿ ಲೆಕ್ಕವಿಲ್ಲದಷ್ಟು ಮರಗಳು. ಅದೇ ಅರಣ್ಯದಲ್ಲಿ ರಂಗೋಲಿ ಬಿಡಿಸಿದಂತೆ ಚಿತ್ತಾರ. ಇದೇನಿದು ಕಾಡಿನ ನಡುವೆ ಇಷ್ಟೊಂದು ದಾರಿಗಳಾ ಅನ್ನೋ ಪ್ರಶ್ನೆ ಮೂಡುತ್ತದೆ. ಅಥವಾ ಇದು ಭೂಕುಸಿತನಾ? ಇಲ್ಲಾ ಗುಡ್ಡ ಕುಸಿತನಾ? ಅಂತಾ ಸಹ ಅನ್ನಿಸಬಹುದು . ಆದ್ರೆ, ಇದು ಭೂಕುಸಿತವೂ ಅಲ್ಲ, ಗುಡ್ಡ ಕುಸಿತವೂ ಅಲ್ಲ. ಇಳಿಜಾರಿನ ಈ ಗುಡ್ಡ ಪ್ರದೇಶದಲ್ಲಿ ಅರಣ್ಯ ಇಲಾಖೆಯೇ ಮಾಡಿರೋ ದೊಡ್ಡ ಗಾಯ. ಅಂದ ಹಾಗೆ, ಇದು ಜಿಲ್ಲೆಯ ಕೊಪ್ಪ ತಾಲೂಕಿನ ಕಳಸಾಪುರದ ಸರ್ವೇ ನಂಬರ್ 1ನಲ್ಲಿ ಅರಣ್ಯ ಇಲಾಖೆ ಮಾಡಿರೋ ಅವಾಂತರ. ಇದು ಬರೀ ಅವಾಂತರ ಮಾತ್ರ ಅಲ್ಲ, ಬದಲಾಗಿ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ನಾಂದಿ ಹಾಡುವ ಸಾಧ್ಯತೆ ಸಹ ಉಂಟುಮಾಡಿದೆ.

ಸ್ಥಳೀಯರಲ್ಲಿ ಮನೆಮಾಡಿದ ಆತಂಕ
ಒತ್ತುವರಿ ಬಿಡಿಸೋ ಆತುರದಲ್ಲಿ ಅರಣ್ಯ ಇಲಾಖೆ ಗುಡ್ಡದ ಹಲವಾರು ಕಡೆ ಹಿಟಾಚಿ, JCBಗಳನ್ನ ಬಳಸಿ ಗುಂಡಿಕಂದಕಗಳನ್ನ ತೋಡಿ, ಟ್ರೆಂಚ್​ಗಳನ್ನ ನಿರ್ಮಿಸಿದ್ದಾರೆ. ಕಂದಾಯ ಇಲಾಖೆಗೆ ಒಳಪಟ್ಟ ಜಾಗದಲ್ಲಿ ಒತ್ತುವರಿ ತೆರವು ಕಾರ್ಯವನ್ನ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದಾರೆ. ಇದು ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದರೂ, ಅರಣ್ಯ ಇಲಾಖೆ ಒತ್ತುವರಿ ತೆರವು ಮಾಡಿದರ ಬಗ್ಗೆ ಸ್ಥಳೀಯರಿಗೆ ಅಸಮಾಧನವಿಲ್ಲ. ಆದ್ರೆ ಮನಸೋ ಇಚ್ಛೆ ಅರ್ಥ್ ಮೂವರ್​ಗಳನ್ನ ಬಳಸಿ ಗುಡ್ಡದ ತುದಿಭಾಗದಲ್ಲಿ ಗುಂಡಿ ತೋಡಿ, ಟ್ರೆಂಚ್ ನಿರ್ಮಿಸಿದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ, ಗುಡ್ಡದ ಕೆಳಭಾಗದಲ್ಲಿ ಇರುವ ಕಳಸಾಪುರ, ಹೇರಂಭಾಪುರ, ತುಳುವಿನಕೊಪ್ಪ ಸೇರಿದಂತೆ ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಗ್ರಾಮಸ್ಥರಿಗೆ ಜೀವಭಯ ಶುರುವಾಗಿದೆ.

ನಲ್ಲಿಯಲ್ಲಿ ಬರುತ್ತಿದೆ ಕೆಸರು ಮಿಶ್ರಿತ ನೀರು
ಕಳೆದ ವರ್ಷ ಕಾಫಿನಾಡಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಿಂದ ಅನೇಕ ಗ್ರಾಮಗಳೇ ಕೊಚ್ಚಿ ಹೋಗಿದ್ವು. ಮನೆಗಳ ಕುರುಹು ಕೂಡ ಕಾಣಸಿಗದಂತಾಗಿತ್ತು. ಸುಮಾರು ಮಂದಿ ಗುಡ್ಡ ಕುಸಿತದಿಂದ ಪ್ರಾಣ ಸಹ ಕಳೆದುಕೊಂಡಿದ್ರು. ಆ ಬಳಿಕ, ನಡೆದ ಅನೇಕ ಸಮೀಕ್ಷೆಯಲ್ಲಿ ಅರಣ್ಯದ ಮೇಲೆ ಮಾನವನ ಹಸ್ತಕ್ಷೇಪವೇ ಇದಕ್ಕೆ ಕಾರಣ ಅಂತಾ ವರದಿ ನೀಡಲಾಗಿತ್ತು.

ಹೀಗಾಗಿ, ಈ ಭಾಗದ ಜನರಿಗೆ ಜೀವಭಯ ಶುರುವಾಗಿದೆ. ಅರಣ್ಯ ಇಲಾಖೆ ಎಡವಟ್ಟಿನಿಂದ ಗುಡ್ಡ ಏನಾದ್ರೂ ಜಾರಿದ್ರೆ ನಮ್ಮ ಗತಿ ಏನು ಅನ್ನೋ ಆತಂಕ ಹೆಚ್ಚಾಗಿದೆ. ಇದಲ್ಲದೆ, ಇದೀಗ ಮಳೆ ಬಂದಾಗ, ಮನೆಗಳ ನಲ್ಲಿಯಲ್ಲಿ ಕೆಸರು ಮಿಶ್ರಿತ ನೀರು ಮಾತ್ರ ಲಭ್ಯವಾಗುತ್ತಿದೆ.

ಜನಸಾಮಾನ್ಯರಿಗೆ ಪರಿಸರ ನಾಶದಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕಾದ ಅರಣ್ಯ ಇಲಾಖೆಯೇ ಇಂಥ ಎಡವಟ್ಟು ಕೆಲಸ ಮಾಡಿದೆ. ಇದರಿಂದ, ಸ್ಥಳೀಯರು ಜಿಲ್ಲಾಧಿಕಾರಿಯಿಂದ ಹಿಡಿದು ಮುಖ್ಯಮಂತ್ರಿ ಮತ್ತು ಕೇಂದ್ರ ಅರಣ್ಯ ಇಲಾಖೆವರೆಗೂ ಪತ್ರ ಬರೆದು ಹೋರಾಟ ಮುಂದುವರೆಸಿದ್ದಾರೆ.

2018ರಲ್ಲಿ ಕೊಡಗಿನಲ್ಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಹೋಗಿದ್ವು. 2019ರಲ್ಲೂ ಇದೇ ರೀತಿ ಜಿಲ್ಲೆಯಲ್ಲಿ ಅದೇ ಪರಿಸ್ಥಿತಿ ಉಂಟಾಗಿ ಅನೇಕ ಗ್ರಾಮಗಳು ಕಣ್ಮರೆಯಾಗಿದ್ವು. ಹೀಗಿದ್ರೂ ಕೂಡ ಅರಣ್ಯ ಇಲಾಖೆ ಗುಡ್ಡ ಕಡಿದು, ಹತ್ತಾರು ಗ್ರಾಮಗಳ ಜನರಿಗೆ ಜೀವಭಯ ಉಂಟುಮಾಡಿರೋದು ನಿಜಕ್ಕೂ ವಿಪರ್ಯಾಸವೇ ಸರಿ.
-ಪ್ರಶಾಂತ್