ಚಿಕ್ಕಮಗಳೂರಿನಲ್ಲಿ ಚಿನ್ನದ ನಿಕ್ಷೇಪ? ಶೋಧ ಕಾರ್ಯಕ್ಕೆ ಅನುಮತಿ ನೀಡಲು ಪರಿಸರ ಇಲಾಖೆ ಚಿಂತನೆ
ಚಿಕ್ಕಮಗಳೂರಿನ ತರಿಕೆರೆ ತಾಲ್ಲೂಕಿನಲ್ಲಿ ಚಿನ್ನದ ನಿಕ್ಷೇಪದ ಶೋಧನೆಗೆ ಅನುಮತಿ ಕೋರಿರುವ ಬಗ್ಗೆ ವರದಿಯಾಗಿದೆ. ಸುಮಾರು 10,000 ಎಕರೆ ಪ್ರದೇಶದಲ್ಲಿ ಈ ಶೋಧನೆ ನಡೆಯಲಿದ್ದು, ಅದರಲ್ಲಿ 5,600 ಎಕರೆ ಅರಣ್ಯ ಪ್ರದೇಶವೂ ಸೇರಿದೆ. ಪರಿಸರ ಮತ್ತು ವನ್ಯಜೀವಿಗಳ ಮೇಲೆ ಈ ಶೋಧನೆಯ ಪರಿಣಾಮಗಳ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ. ಹಾಗಾದರೆ, ಕಾಫಿ ನಾಡು ಇನ್ನುಮುಂದೆ ಚಿನ್ನದ ನಾಡಾಗುತ್ತದೆಯೇ? ವಿವರಗಳಿಗೆ ಮುಂದೆ ಓದಿ.

ಬೆಂಗಳೂರು, ಸೆಪ್ಟೆಂಬರ್ 8: ಚಿಕ್ಕಮಗಳೂರು (Chikmagalur) ಜಿಲ್ಲೆಯಲ್ಲಿಯೂ ಚಿನ್ನದ (Gold) ನಿಕ್ಷೇಪ ಇದೆಯೇ!? ಪಶ್ಚಿಮ ಘಟ್ಟ ಸಾಲು, ದಟ್ಟ ಅರಣ್ಯ ಸೇರಿದಂತೆ ಜೀವ ವೈವಿಧ್ಯ ಹೊಂದಿರುವ ಕಾಫಿ ನಾಡಿನಲ್ಲಿ ಚಿನ್ನದ ಖಜಾನೆ ಇದೆಯೇ ಎಂಬ ಕುರಿತು ಶೋಧ ನಡೆಯವುದು ಬಹುತೇಕ ಖಚಿತವಾಗಿದೆ. ಚಿಕ್ಕಮಗಳೂರಿನ ತರಿಕರೆಯ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆಯೇ ಎಂಬ ಕುರಿತು ಕೊಳವೆ ಕೊರೆದು ಶೋಧ ಕಾರ್ಯ ನಡೆಸಲು ಬೆಂಗಳೂರಿನ ಕಂಪನಿಯೊಂದು ಮಾಡಿರುವ ಮನವಿಗೆ ಅನುಮತಿ ನೀಡಲು ಪರಿಸರ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಶೋಧ ಕಾರ್ಯಕ್ಕೆ ಕಂಪನಿ ಮನವಿ ಮಾಡಿರುವ 10 ಸಾವಿರ ಎಕರೆ ಪ್ರದೇಶದ ಪೈಕಿ ಚಿರತೆಗಳು, ಕರಡಿಗಳು ಸೇರಿದಂತೆ ಇತರ ಪ್ರಾಣಿಗಳ ನೆಲೆಯಾಗಿರುವ 5,600 ಎಕರೆಯೂ ಒಳಗೊಂಡಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್‌ಗೆ 10,082 ಎಕರೆ ಭೂಮಿಯಲ್ಲಿ ಚಿನ್ನದ ನಿಕ್ಷೇಪ ಕುರಿತು ಶೋಧ ಕಾರ್ಯ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಪರವಾನಗಿ ನೀಡಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಅದರಲ್ಲಿ 5,600 ಎಕರೆ ಅರಣ್ಯ ಪ್ರದೇಶ ಮತ್ತು 3,600 ಎಕರೆ ಕೃಷಿ ಭೂಮಿ ಸೇರಿವೆ ಎಂದು ವರದಿ ತಿಳಿಸಿದೆ.
ದಟ್ಟವಾದ ಕಾಡಿನ ಕಾರಣದಿಂದಾಗಿ ಆ ಪ್ರದೇಶದಲ್ಲಿನ ಶಿಲಾ ಪದರಗಳ ಅಧ್ಯಯನವು ಕಷ್ಟಕರವಾಗಿತ್ತು ಎಂಬುದಾಗಿ ಕಂಪನಿಯು ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಚಿಕ್ಕಮಗಳೂರಿನ ಎಲ್ಲೆಲ್ಲಿ ಚಿನ್ನದ ನಿಕ್ಷೇಪ?
ಕಳೆದ ವರ್ಷ ಗಣಿ ಇಲಾಖೆ ಆಹ್ವಾನಿಸಿದ್ದ ಟೆಂಡರ್ ಅನ್ನು ಔರಮ್ ಗೆದ್ದುಕೊಂಡಿತ್ತು. ಹಿಂದಿನ ಸಂಶೋಧನೆಗಳ ಪ್ರಕಾರ, ತರಿಕರೆಯ ಪ್ರದೇಶಗಳಲ್ಲಿ ಪ್ರತಿ ಟನ್‌ಗೆ 19 ಗ್ರಾಂ ನಿಂದ 80 ಗ್ರಾಂ ವರೆಗೆ ಚಿನ್ನವನ್ನು ಪಡೆಯಬಹುದು ಎಂದು ಹೇಳಲಾಗಿತ್ತು. ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿಯಲ್ಲಿ ಚಿನ್ನದ ನಿಕ್ಷೇಪ ಇವೆ ಎಂಬುದು ಈ ಹಿಂದಿನ ಶೋಧ ಕಾರ್ಯಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಉಲ್ಲೇಖವಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪರಿಸರಕ್ಕೆ ಹಾನಿಯಾಗದಂತೆ ಶೋಧ ಕಾರ್ಯ: ಕಂಪನಿ
ಏತನ್ಮಧ್ಯೆ, ಚಿನ್ನಕ್ಕಾಗಿ ಶೋಧ ನಡೆಸುವ ವೇಳೆ ಪರಿಸರಕ್ಕೆ ಹಾನಿಯಾಗದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಟ್ರೆಂಚ್ ಮತ್ತು ಡ್ರಿಲ್ಲಿಂಗ್ ಕಾರ್ಯಾಚರಣೆಗಳ ಸಮಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಶೋಧ ಕಾರ್ಯದ ನಂತರ ಎಲ್ಲಾ ಹೊಂಡಗಳು ಮತ್ತು ಕಂದಕಗಳನ್ನು ಸರಿಯಾಗಿ ಮುಚ್ಚಲಾಗುತ್ತದೆ. ಕೊಳವೆಗಳನ್ನು ಕಾಂಕ್ರೀಟ್ ಬಳಸಿ ಮುಚ್ಚಲಾಗುತ್ತದೆ. ಇಡೀ ಭೂಮಿಯನ್ನು ಅದರ ಮೂಲ ಸ್ಥಿತಿಗೆ ತರಲಾಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಇದನ್ನೂ ಓದಿ: ಮುಳ್ಳಯ್ಯನಗಿರಿ ಸೇರಿ ಚಿಕ್ಕಮಗಳೂರಿನ ಈ ಸ್ಥಳಗಳಿಗೆ ಪ್ರವಾಸ ಹೋಗೋ ಯೋಜನೆ ಇದೆಯಾ? ಹೊಸ ನಿಯಮಗಳ ಬಗ್ಗೆ ತಿಳಿದಿರಿ
ಈ ಪ್ರದೇಶದಲ್ಲಿ ಚಿನ್ನಕ್ಕಾಗಿ ಶೋಧ ನಡೆಸುವುದರಿಂದ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಚಿಕ್ಕಮಗಳೂರಿನ ವನ್ಯಜೀವಿ ತಜ್ಞ ವೀರೇಶ್ ಜಿ ಅಭಿಪ್ರಾಯಪಟ್ಟಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಭಾರೀ ಯಂತ್ರೋಪಕರಣಗಳ ಚಲನೆ ಮತ್ತು ಭೂಮಿಯ ಕೊರೆಯುವಿಕೆಯು ಖಂಡಿತವಾಗಿಯೂ ಪ್ರಾಣಿಗಳ ಮೇಲೆ ಪರಿಣಾಮ ಬೀರಲಿದೆ. ಹುಲಿತಿಮ್ಮಾಪುರ ಮತ್ತು ಶೋಧ ಕಾರ್ಯ ಪ್ರಸ್ತಾಪಿಸಲಾದ ಇತರ ಪ್ರದೇಶಗಳು ಲಕ್ಕವಳ್ಳಿ ಆನೆ ಕಾರಿಡಾರ್‌ನ ಭಾಗವಾಗಿದೆ. ಶೋಧ ಕಾರ್ಯದ ವೇಳೆ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.




