ಮುಳ್ಳಯ್ಯನಗಿರಿ ಸೇರಿ ಚಿಕ್ಕಮಗಳೂರಿನ ಈ ಸ್ಥಳಗಳಿಗೆ ಪ್ರವಾಸ ಹೋಗೋ ಯೋಜನೆ ಇದೆಯಾ? ಹೊಸ ನಿಯಮಗಳ ಬಗ್ಗೆ ತಿಳಿದಿರಿ
ಕೊನೆಗೂ ಚಿಕ್ಕಮಗಳೂರು ಜಿಲ್ಲಾಡಳಿತ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿದ್ದ ವರದಿಯ ಅನುಷ್ಠಾನಕ್ಕೆ ಮುಂದಾಗಿದೆ. ಡೇಂಜರ್ ಪಟ್ಟಿಯಲ್ಲಿದ್ದ ಕರ್ನಾಟಕದ ಅತಿ ಎತ್ತರದ ಶಿಖರದಲ್ಲಿ ವಾಹನ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಹೊಸ ನಿಮಯ ಜಾರಿಗೊಳಿಸಿದೆ. ಸೆಪ್ಟೆಂಬರ್ 1 ರಿಂದ ಮುಳ್ಳಯ್ಯನಗಿರಿ ಶಿಖರಕ್ಕೆ ಬರುವ ಯೋಜನೆ ಮಾಡಿದ್ದರೆ ಇಲ್ಲಿ ನೀಡಿರುವ ವಿವರ ತಿಳಿದುಕೊಳ್ಳಿ.

ಚಿಕ್ಕಮಗಳೂರು, ಆಗಸ್ಟ್ 31: ಕಾಫಿನಾಡು ಚಿಕ್ಕಮಗಳೂರು (Chikmagalur) ಈಗ ಮಳೆಯ ನಾಡಾಗಿ ಪರಿವರ್ತನೆಯಾಗಿದೆ. ಪಶ್ಚಿಮ ಘಟ್ಟಗಳ ಸಾಲುಗಳು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿ ಸೇರಿದಂತೆ ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಹೊನ್ನಮ್ಮನ ಹಳ್ಳಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಚಂದ್ರದ್ರೋಣ ಪರ್ವತದ ಸಾಲಿಗೆ ಮೂರು ತಿಂಗಳಲ್ಲಿ ಮೂರು ಲಕ್ಷದಷ್ಟು ಪ್ರವಾಸಿಗರ ವಾಹನಗಳು ಬಂದಿದ್ದು, ನಿತ್ಯವೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತಕ್ಕೆ ಆತಂಕ ತರಿಸಿದೆ. ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿರುವುದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿ.
ಹೌದು, ಚಂದ್ರದ್ರೋಣ ಪರ್ವತದ ಸಾಲಿನ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವಿಜ್ಞಾನಿಗಳು ಸ್ಥಳ ಪರೀಕ್ಷೆ ನಡೆಸಿ ಭೂಕುಸಿತಕ್ಕೆ ನಿಖರ ಕಾರಣ ನೀಡಿ ಒಂದು ವರ್ಷದ ಹಿಂದೆಯೇ ವರದಿ ನೀಡಿದ್ದರು. ಪ್ರಮುಖವಾಗಿ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರವಾಸಿಗರ ವಾಹನದ ಸಂಚಾರದಿಂದ ಮುಳ್ಳಯ್ಯನಗಿರಿಗೆ ಅಪಾಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಮುಂದೆಯೂ ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿತ್ತು. ಮುಂದಿನ ಮಳೆಗಾಲದೊಳಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಆದರೆ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದೀಗ ಒಂದು ಕಡೆ ಭೂ ಕುಸಿತದ ಆತಂಕ, ಮತ್ತೊಂದು ಕಡೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಹೊಸ ನಿಯಮಗಳನ್ನು ಸೆಪ್ಟೆಂಬರ್ 1 ರಿಂದ ಜಾರಿ ಮಾಡುತ್ತಿದೆ.
ಚಂದ್ರದ್ರೋಣ ಪರ್ವತ ಸಾಲಿನ ಸ್ಥಳಗಳ ಪ್ರವಾಸ: ಹೊಸ ನಿಯಮಗಳೇನು?
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ವರೆಗೂ 600 ವಾಹನ, 1 ಗಂಟೆಯ ಬಳಿಕ 600 ಪ್ರವಾಸಿ ವಾಹನಗಳಿಗೆ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಒಂದು ದಿನಕ್ಕೆ ಎರಡು ಪಾಳಿಯಲ್ಲಿ 100 ದ್ವಿಚಕ್ರ ವಾಹನ, ಆಟೋ, 100 ಹಳದಿ ಬಣ್ಣದ ಬೋರ್ಡ್ ಇರುವ ಟ್ಯಾಕ್ಸಿ, 50 ಟೆಂಪೋ ಟ್ರಾವೆಲರ್, ಟೂಫಾನ್ , 300 ಪ್ರವಾಸಿಗರ ಕಾರುಗಳಿಗೆ ಅವಕಾಶ ನೀಡಲಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವಿಜ್ಞಾನಿಗಳು ನೀಡಿದ ವರದಿ ಮುಂದಿಟ್ಟು ಚಂದ್ರದ್ರೋಣ ಪರ್ವತದ ಸಾಲಿಗೆ ಬರುವ ಪ್ರವಾಸಿಗರಿಗೆ ಹೊಸ ನಿಯಮ ಜಾರಿ ಮಾಡಲಾಗುತ್ತಿದ್ದು, ದಿನಕ್ಕೆ 1200 ಪ್ರವಾಸಿಗರ ವಾಹನಗಳು ಸಂಚಾರ ಮಾಡುವಂತೆ ನೋಡಿಕೊಲಳ್ಳಲಾಗುತ್ತದೆ.
ಆನ್ಲೈನ್ನಲ್ಲಿ ಮುಂಗಡ ಬುಕಿಂಗ್ಗೆ ಅವಕಾಶ
ಮುಂಗಡವಾಗಿ ಬುಕಿಂಗ್ ಮಾಡಲು ಆನ್ಲೈನ್ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಬೇರೆ ಪ್ರವಾಸಿತಾಣಗಳಿಗೆ ತೆರಳಲು ಪ್ರವಾಸಿಗರಿಗೆ ಸೂಚನೆ ನೀಡಲು ಕೈಮರ ಚೆಕ್ಪೋಸ್ಟ್ನಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಯೋಜನೆ ರೂಪಿಸಲಾಗಿದ್ದು, ಭಾರಿ ಗಾತ್ರದ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ದಿನಕ್ಕೆ 1200 ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದು ಆನ್ಲೈನ್ನಲ್ಲಿ ಬುಕಿಂಗ್ ಮಾಡಿದರೆ ಅನುಕೂಲ ಎಂದು ಜಿಲ್ಲಾಡಳಿತ ಹೇಳಿದೆ.
ಇದನ್ನೂ ಓದಿ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸವಾರರಿಗೆ ಹೊಸ ನಿಯಮ: ಇನ್ಮುಂದೆ ಬೇಕಾಬಿಟ್ಟಿ ಹೋಗೋ ಹಾಗಿಲ್ಲ!
ಒಂದು ವರ್ಷದ ಹಿಂದೆಯೇ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವಿಜ್ಞಾನಿಗಳು ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಪರೀಕ್ಷೆ ನಡೆಸಿ ವಾಹನ ದಟ್ಟಣೆಯನ್ನ ನಿಯಂತ್ರಿಸದೇ ಇದ್ದರೆ ಭಾರೀ ಭೂ ಕುಸಿತದ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿತ್ತು. ಅದಾದ ಒಂದು ವರ್ಷದ ಬಳಿಕ ಚಿಕ್ಕಮಗಳೂರು ಜಿಲ್ಲಾಡಳಿತ ಇದೀಗ ಎಚ್ಚೆತ್ತುಕೊಂಡಿದ್ದು, ಕ್ರಮಕ್ಕೆ ಮುಂದಾಗಿ ಸೆಪ್ಟೆಂಬರ್ 1 ರಿಂದ ಹೊಸ ನಿಯಮ ಜಾರಿಗೊಳಿಸುತ್ತಿದೆ.




