ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿ ಸೇರಿ ಸರ್ಕಾರದ ವತಿಯಿಂದ ಒಟ್ಟು 8 ಲಕ್ಷ ಪರಿಹಾರ ನೀಡಲಿದ್ದು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಪಿ.ರಾಜೀವ್ ಚೆಕ್ ಹಸ್ತಾಂತರ ಮಾಡಲಿದ್ದಾರೆ. ರಕ್ಷಿತಾ ಮೆದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬಸ್ಥರು ಆಕೆಯ 9 ಅಂಗಾಂಗಳನ್ನ ದಾನ ಮಾಡಿದ್ದರು. ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಯುವತಿ ರಕ್ಷಿತಾ ನಗರದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. 5 ದಿನದ ಹಿಂದೆ ಬಸ್ ಇಳಿಯುವಾಗ ಬಿದ್ದು ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಲಾಗಿತ್ತು.
ಬೆಂಗಳೂರು, ಮಂಗಳೂರು, ಮಣಿಪಾಲ್ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯರ ತಂಡದ ಸಹಕಾರದೊಂದಿಗೆ 6 ಗಂಟೆಗಳ ಚಿಕಿತ್ಸೆ ನಡೆಸಿ ರಕ್ಷಿತಾಳ ಹೃದಯವನ್ನು ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಯಿತು. ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಲಿವರ್ ಹಾಗೂ ಕಿಡ್ನಿಯನ್ನು ಮಣಿಪಾಲ್ನ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ಇನ್ನು ರಕ್ಷಿತಾಳ ಕಣ್ಣುಗಳನ್ನು ಮಾತ್ರ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದು, ಅಗತ್ಯವಿದ್ದವರಿಗೆ ಜೋಡಿಸಲು ತಿರ್ಮಾನಿಸಲಾಗಿದೆ.
ಯುವತಿ ರಕ್ಷಿತಾಗೆ ಕಣ್ಣೀರಿನ ವಿದಾಯ:
ಇನ್ನು ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಮೃತ ರಕ್ಷಿತಾ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಕ್ಷರಶಃ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅಂಗಾಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ವಿದ್ಯಾರ್ಥಿನಿ ರಕ್ಷಿತಾಗೆ ಸಾವಿರಾರು ವಿದ್ಯಾರ್ಥಿನಿಯರಿಂದ ಕಣ್ಣೀರಿನ ವಿದಾಯ ನೀಡಲಾಯಿತು. ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ಸ್ನೇಹಿತೆಯರು ಬಿಕ್ಕಳಿಸಿ ಬಿಕ್ಕಳಿಸಿ ಅಂತ್ತರು. ರಕ್ಷಿತಾಳ ಮೃತದೇಹ ನೋಡಿ ಶಿಕ್ಷಕರು ಮತ್ತು ಸಾರ್ವಜನಿಕರು ಕಣ್ಣೀರಿಟ್ಟರು. ಇನ್ನು ತಂಗಿಗಾಗಿ ಅಣ್ಣ ಒಂದು ಮುತ್ತಿನ ಕಥೆಯ ಹೇಳಿತು ಈ ಗೊಂಬೆ ಎಂದು ಹಾಡಿದ್ದು, ಕಲ್ಲು ಹೃದಯವು ಕರಗುವಂತಿತ್ತು.
ಹಿನ್ನೆಲೆ:
ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿಯಿಂದಾಗಿ ಯುವತಿ ರಕ್ಷಿತಾ ಬಲಿಯಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿರುವಂತಹ ಘಟನೆ ಸೆ. 21ರಂದು ನಡೆದಿದೆ. ತಾಲೂಕಿನ ಸೋಮನಹಳ್ಳಿ ತಾಂಡ್ಯದ ರಕ್ಷಿತಾ ಮೃತ ಯುವತಿ. ಬಸ್ನಿಂದ ಕೆಳಗೆ ಬಿದ್ದು ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ರಕ್ಷಿತಾ ವ್ಯಾಸಂಗ ಮಾಡುತ್ತಿದ್ದಳು. ಮಗಳ ಅಂಗಾಂಗ ದಾನಕ್ಕೆ ಪೋಷಕರಾದ ತಾಯಿ ಲಕ್ಷ್ಮಿ ಬಾಯಿ, ತಂದೆ ಸುರೇಶ್ ನಾಯಕ್ ಒಪ್ಪಿಗೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:07 pm, Fri, 23 September 22