Good News: ಪೋಷಕರ ಕಾನ್ವೆಂಟ್ ಮೋಹದಿಂದ ಮುಚ್ಚಿಹೋಗಿದ್ದ 84 ವರ್ಷಗಳ ಇತಿಹಾಸವಿರೋ ಶಾಲೆಗೆ ಮರುಜೀವ
ಈ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸದ್ಯ 15 ಮಕ್ಕಳು ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸೇರುವ ಸಾಧ್ಯತೆಯಿದೆ. ಮರೆಯಾಗುತ್ತಿರುವ ಕನ್ನಡ ಶಾಲೆಗಳ ನಡುವೆ ಮುಚ್ಚಿದ್ದ ಎಂ ಚೋಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪುನಾರಂಭಗೊಂಡು ರಾಜ್ಯಕ್ಕೆ ಮಾದರಿಯಾಗಿದೆ.
ಚಿಕ್ಕಮಗಳೂರು: ಅದು 84 ವರ್ಷಗಳ ಇತಿಹಾಸವಿದ್ದ ಸರ್ಕಾರಿ ಶಾಲೆ. ಆದ್ರೆ ಪೋಷಕರಿಗೆ ಕಾನ್ವೆಂಟ್ ಶಾಲೆಗಳ ಮೇಲಿನ ಪ್ರೀತಿಯಿಂದಾಗಿ ವಿದ್ಯಾರ್ಥಿಗಳಿಲ್ಲದೆ ಆ ಶಾಲೆಯ ಬಾಗಿಲನ್ನು ಅನಿವಾರ್ಯವಾಗಿ ಮುಚ್ಚಲಾಯಿತು. ಇನ್ನೇನು ಸರ್ಕಾರಿ ಶಾಲೆ ನಮ್ಮೂರಿನಿಂದ ಮಾಯವಾಯ್ತೆನೋ ಅಂದುಕೊಳ್ಳುತ್ತಿದ್ದ ವೇಳೆಯಲ್ಲಿ ಅದೊಂದು ಮ್ಯಾಜಿಕ್ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಬಾಗಿಲು ಮುಚ್ಚಿ ಮೌನ ಆವರಿಸಿದ್ದ ಸರ್ಕಾರಿ ಶಾಲೆಯಲ್ಲಿ ಇದೀಗ ಮಕ್ಕಳ ಕಲರವ ಮತ್ತೆ ಕೇಳಿಬಂದಿದೆ. ರಂಗು ರಂಗಾಗಿರೋ ನಮ್ಮ ಶಾಲೆಯನ್ನ ಬಿಟ್ಟು ನಾವು ಕಾನ್ವೆಂಟ್ಗೆ ಹೋಗಲ್ಲ ಎಂದಿರುವ ಚಿನ್ನರು ಎಂಟು ದಶಕಕ್ಕೂ ಹೆಚ್ಚು ಹಳೆಯದಾದ ಶಾಲೆಗೆ ಜೀವಕಳೆ ತುಂಬಿದ್ದಾರೆ.
ಮುಚ್ಚಿಹೋಗಿದ್ದ ಈ ಸರ್ಕಾರಿ ಶಾಲೆ ಇದೀಗ ಬಣ್ಣ ಬಣ್ಣಗಳಿಂದ ಕಂಗೊಳಿಸ್ತಿದೆ. ತರಗತಿಯಲ್ಲಿ ಕುಳಿತುಕೊಂಡು ಮಕ್ಕಳು ಖುಷಿ ಖುಷಿಯಿಂದ ಪಾಠ ಕೇಳ್ತಿದ್ದಾರೆ. ನಮ್ಮೂರ ಶಾಲೆಯೇ ನಮಗೆ ಹೆಮ್ಮೆ ಅಂತಿದ್ದಾರೆ ಪುಟಾಣಿಗಳು. ತಮ್ಮ ಗ್ರಾಮದಲ್ಲಿ ಮತ್ತೆ ಶಾಲೆ ಪುನಾರಂಭ ಆಗಿದ್ದನ್ನ ನೋಡಿ ಊರಿನ ಹಿರಿಯರು ಸಂತಸಗೊಂಡಿದ್ದಾರೆ. ಅಂದಹಾಗೆ ಇಂತಹ ಅಪರೂಪದ ಕ್ಷಣಗಳು ಮತ್ತೆ ಮರಕಳಿಸಿರುವುದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಎಂ ಚೋಮನಹಳ್ಳಿ ಗ್ರಾಮದಲ್ಲಿ.
84 ವರ್ಷಗಳ ಇತಿಹಾಸವಿದ್ದ ಈ ಶಾಲೆಗೆ ನಾಲ್ಕು ವರ್ಷಗಳಿಂದ ಶಾಶ್ವತವಾಗಿ ಬೀಗ ಬಿದ್ದಿತ್ತು. ಪೋಷಕರಿಗೆ ಇಂಗ್ಲೀಷ್ ಮೇಲಿನ ಪ್ರೀತಿಯಿಂದ ಕಾನ್ವೆಂಟ್ ಸ್ಕೂಲ್ಗಳ ಮೇಲೆ ಮೋಹ ಮೂಡಿತ್ತು. ಕ್ರಮೇಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ರು. ವಿದ್ಯಾರ್ಥಿಗಳ ಕೊರತೆ ಉಂಟಾದ ಹಿನ್ನೆಲೆ ಏನೂ ಮಾಡಲಾಗದೇ, ವಿಧಿಯಿಲ್ಲದೇ ಸರ್ಕಾರಿ ಶಾಲೆಯನ್ನ ಮುಚ್ಚಲೇಬೇಕಾದ ಪರಿಸ್ಥಿತಿ ಉಂಟಾಗಿತ್ತು. ಆ ಬಳಿಕ ಎಂ ಚೋಮನಹಳ್ಳಿ ಶಾಲೆ ವಿದ್ಯಾರ್ಥಿಗಳಿಲ್ಲದೇ ಪಾಳು ಬಿದ್ದು ಹೋಗಿತ್ತು. ಇನ್ನೇನು ಶಾಲೆ ಶಾಶ್ವತವಾಗಿ ಮುಚ್ಚಿತು ಎಂದುಕೊಳ್ಳುವಾಗ ಒಂದು ಮ್ಯಾಜಿಕ್ ನಡೆದು ಶಾಲೆಯ ಬಾಗಿಲು ಮತ್ತೆ ತೆಗೆದಿದೆ. ಯಾವ ಕಾನ್ವೆಂಟ್ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿದ್ರೋ ಅದೇ ಶಾಲೆಗಳಿಂದ ಪುಟಾಣಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಕಾನ್ವೆಂಟ್ಗಿಂತ ಚೆನ್ನಾಗಿ ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತು ಪುಟಾಣಿಗಳು ಪಾಠ ಕೇಳುತ್ತಿದ್ದಾರೆ. ತರಲೆ-ತುಂಟಾಟ ಮಾಡಿಕೊಂಡು ತಮ್ಮ ಸ್ನೇಹಿತರೊಂದಿಗೆ ನಲಿಯುತ್ತಿದ್ದಾರೆ. ಮಕ್ಕಳಿಲ್ಲದೇ ಮುಚ್ಚಿದ್ದ ಶಾಲೆ ಮತ್ತೆ ತೆರೆಯಲು ಎಂ ಚೋಮನಹಳ್ಳಿ ಗ್ರಾಮಸ್ಥರು, ಬಸವೇಶ್ವರ ಯುವಕ ಸಂಘ, ಸ್ನೇಹ ಸಿಂಚನ ಟ್ರಸ್ಟ್ ಎಲ್ಲರ ಸಾಂಘಿಕ ಶ್ರಮವಿದೆ ಎಂದು ಮುಖ್ಯಶಿಕ್ಷಕ ಶುಭಕರ್ ಟಿವಿ9ಗೆ ತಿಳಿಸಿದ್ದಾರೆ. ಮಾಯವಾಗಿದ್ದ ಮಕ್ಕಳ ಕಲರವ, ತುಂಟಾಟ, ಆಟಾಟೋಪ, ಎಲ್ಲವೂ ಎಂ ಚೋಮನಹಳ್ಳಿ ಶಾಲೆಯಲ್ಲಿ ಮತ್ತೆ ಕೇಳುತ್ತಿರುವುದರಿಂದ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ.
ವಿಶೇಷ ಅಂದ್ರೆ ಸಿಬಿಎಸ್ಇ ಸಿಲಬಸ್ನಲ್ಲಿ ಕಲಿಯುತ್ತಿದ್ದ ಪುಟಾಣಿಗಳು ಕೂಡ ಇದೀಗ ಸರ್ಕಾರಿ ಶಾಲೆಗೆ ಸೇರಿ ನಾವು ಇಲ್ಲೇ ವಿದ್ಯಾಭ್ಯಾಸ ಮುಂದುವರಿಸ್ತೀವಿ ಅಂತಾ ಹೇಳುತ್ತಿದ್ದಾರೆ. ಈಗಿನ ಕಾಲದಲ್ಲಿ ಹೊಸದಾಗಿ ಸರ್ಕಾರಿ ಶಾಲೆಯನ್ನ ಊರಿಗೆ ಮಾಡಿಸಿಕೊಳ್ಳಬೇಕು ಅಂದ್ರೆ ಪಡಬೇಕಾದ ಪಡಿಪಾಟಲು ಅಷ್ಟಿಷ್ಟಲ್ಲ. ಅಂಥದ್ದರಲ್ಲಿ ಸುಮಾರು 8 ದಶಕಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಲೆ ಮುಚ್ಚುತ್ತೆ ಅಂದ್ರೆ ನಮ್ಮಂತಹ ಅವಿವೇಕಿಗಳು ಯಾರು ಇರಲಾರರು ಎಂದು ಎಚ್ಚೆತ್ತು ಗ್ರಾಮಸ್ಥರೇ ಮತ್ತೆ ಶಾಲೆ ಪುನಾರಂಭಕ್ಕೂ ಕಾರಣರಾಗಿದ್ದಾರೆ.
ಈ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸದ್ಯ 15 ಮಕ್ಕಳು ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸೇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಪುಟಾಣಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ. ಪುಟಾಣಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವಂತೆ ಶಾಲೆ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಚಿತ್ರ, ಪ್ರಾಣಿ-ಪಕ್ಷಿಗಳ ಚಿತ್ರ, ಅಕ್ಷರ ಮಾಲೆ, ಜ್ಞಾನಪೀಠ ಪುರಸ್ಕಾರ ಸಾಹಿತಿಗಳ ಚಿತ್ರ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬರೆಯಲಾಗಿದೆ. ರಾಜ್ಯದ ಬೇರೆ ಬೇರೆ ಕಡೆ ಇದೇ ರೀತಿ ಕಾನ್ವೆಂಟ್ ಮೋಹದಿಂದ ಮಕ್ಕಳ ಕೊರತೆ ಉಂಟಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕಣ್ಣ ಮುಂದೆಯೇ ಸರ್ಕಾರಿ ಶಾಲೆಗಳು ಬಾಗಿಲು ಹಾಕಿಕೊಳ್ಳುತ್ತಾ ಇದ್ದರೂ ಪೋಷಕರು, ಗ್ರಾಮಸ್ಥರು ಉಳಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತಿಲ್ಲ. ಈ ಮಧ್ಯೆ ಮರೆಯಾಗುತ್ತಿರುವ ಕನ್ನಡ ಶಾಲೆಗಳ ನಡುವೆ ಮುಚ್ಚಿದ್ದ ಎಂ ಚೋಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪುನಾರಂಭಗೊಂಡು ರಾಜ್ಯಕ್ಕೆ ಮಾದರಿಯಾಗಿದೆ.
ವರದಿ: ಪ್ರಶಾಂತ್, ಚಿಕ್ಕಮಗಳೂರು
ಇದನ್ನೂ ಓದಿ: 1 ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ಕುರಿತು ಮಹತ್ವದ ಸಭೆ: ಚರ್ಚೆಯಾಗಲಿರುವ ಪ್ರಮುಖ ಸಂಗತಿಗಳೇನು?
(84 year old Government Primary school restarted in Chikkamagaluru Good effort by Villagers to save Kannada School)
Published On - 9:39 am, Mon, 30 August 21