ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರದಿದ್ದ ರಕ್ಷಿತಾ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ 8 ಲಕ್ಷದ ಪರಿಹಾರದ ಚೆಕ್ ವಿತರಿಸಿದ್ದಾರೆ. ಸರ್ಕಾರದಿಂದ 5 ಲಕ್ಷ, ಭೈರತಿ ಬಸವರಾಜ್ ವೈಯಕ್ತಿಕವಾಗಿ 2 ಲಕ್ಷ, ತಾಂಡಾ ನಿಗಮದಿಂದ 1 ಲಕ್ಷ ಚೆಕ್ ವಿತರಿಸಲಾಗಿದೆ.
ಘಟನೆ ಹಿನ್ನೆಲೆ
ಸೆಪ್ಟೆಂಬರ್ 21 ರಂದು ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ರಕ್ಷಿತಾ ಸಾವನ್ನಪ್ಪಿದ್ದಳು. ರಕ್ಷಿತಾ ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಸೆಪ್ಟೆಂಬರ್ 21 ರಂದು ಬಸ್ನಿಂದ ಕೆಳಗೆ ಬಿದ್ದು ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಹೀಗಾಗಿ ಮಗಳ ಅಂಗಾಂಗ ದಾನಕ್ಕೆ ಪೋಷಕರಾದ ತಾಯಿ ಲಕ್ಷ್ಮಿ ಬಾಯಿ, ತಂದೆ ಸುರೇಶ್ ನಾಯಕ್ ಒಪ್ಪಿಗೆ ನೀಡಿದ್ದರು.
ರಕ್ಷಿತಾಳ ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕಳುಹಿಸಿ 9 ವರ್ಷದ ಬಾಲಕನಿಗೆ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ಲಿವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಣ್ಣು, ಕಿಡ್ನಿಗಳನ್ನು ಮಣಿಪಾಲಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ರಕ್ಷಿತಾಳಿಗೆ ಕಾಲೇಜು ವಿದ್ಯಾರ್ಥಿನಿಯರಿಂದ ಭಾವಪೂರ್ಣ ವಿದಾಯ:
ರಕ್ಷಿತಾಳ ಸಾವಿನ ಸುದ್ದಿ ಕೇಳಿ ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ವಿದ್ಯಾರ್ಥಿನಿ ರಕ್ಷಿತಾಗೆ ಸ್ನೇಹಿತರು ಕಣ್ಣೀರಿನ ವಿದಾಯ ನೀಡಿದರು. ರಕ್ಷಿತಾಳ ಮೃತದೇಹ ನೋಡಿ ಶಿಕ್ಷಕರು, ಸಾರ್ವಜನಿಕರು ಕಣ್ಣೀರಿಟ್ಟರು.
ತಂಗಿಗಾಗಿ ಅಣ್ಣನ ಭಾವುಕ ಹಾಡು:
ಒಂದು ಮುತ್ತಿನ ಕಥೆಯ ಹೇಳಿತು ಈ ಗೊಂಬೆ ಎಂದು ತನ್ನ ತಂಗಿಗಾಗಿ ಕೊನೆಯದಾಗಿ ಅಣ್ಣ ಹಾಡು ಹೇಳಿದ್ದರು. ಅಣ್ಣನ ಈ ಒಂದು ಮಾತಿಗೆ ಇಡೀ ಕಾಲೇಜು ಭಾವುಕವಾಗಿತ್ತು. ಪುನೀತ್ ರಾಜಕುಮಾರ ಹಾಡನ್ನು ವಿದ್ಯಾರ್ಥಿನಿಯರು ಗುನುಗಿದ್ದು, ಕಣ್ಣೀರಿಡುತ್ತಲೇ ರಕ್ಷಿತಾಳನ್ನ ಕಳುಹಿಸಿಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Tue, 27 September 22