
ಚಿಕ್ಕಮಗಳೂರು, ಜುಲೈ 15: ಸಾಲ ಕೊಡಿಸುವ ಆಮಿಷವೊಡ್ಡಿ ಬಡವರು ಮತ್ತು ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆಘಾತಕಾರಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಫಿನಾಡಿನ ಇತಿಹಾಸದಲ್ಲೇ ಇಂತಹ ಬೃಹತ್ ಸೈಬರ್ ವಂಚನೆ ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಿಡಿಗೇಡಿಗಳು ದಿನಗೂಲಿ ಮಾಡುವ ಸಾಮಾನ್ಯ ಜನರಿಗೆ ಅಲ್ಪಸ್ವಲ್ಪ ಹಣದ ಆಸೆ ತೋರಿಸಿ, ಲೋನ್ ಕೊಡಿಸುವುದಾಗಿ ನಂಬಿಸಿ ಅವರ ಆಧಾರ್ ಮತ್ತು ಪ್ರಮುಖ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 5 ರಿಂದ 6 ಪ್ರಮುಖ ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿಯ ಸಹಕಾರದೊಂದಿಗೆ 2022-23ರ ಅವಧಿಯಲ್ಲಿ ನೂರಾರು ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಲಾಗಿದೆ. ಈ ಖಾತೆಗಳನ್ನು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ಗಳ ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ. ಕಮಿಷನ್ ಆಸೆಗೆ ಬಿದ್ದ ಕೆಲ ಸ್ಥಳೀಯ ಯುವಕರು ತಲಾ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದು, ಒಂದೊಂದು ಖಾತೆಯಲ್ಲೂ ಬರೋಬ್ಬರಿ 20 ರಿಂದ 30 ಲಕ್ಷ ರೂಪಾಯಿವರೆಗೆ ಅನುಮಾನಾಸ್ಪದ ವಹಿವಾಟು ನಡೆದಿರುವುದು ಖಾತೆದಾರರನ್ನು ಕಂಗಾಲಾಗಿಸಿದೆ.
ಈ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲೀಸರ ವಶದಲ್ಲಿರುವ ಆರೋಪಿಗಳು ಈ ಜಾಲದ ಹಿಂದೆ ಶಂಕರಪುರ ವಾರ್ಡ್‌ನ ನಗರಸಭೆ ಜೆಡಿಎಸ್ ಸದಸ್ಯ ಗೋಪಿ ಶಾಮೀಲಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಗೋಪಿ ಅವರೇ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದರು ಎಂಬ ಸ್ಫೋಟಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಈ ಹಗರಣದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ, ಇದರ ಹಿಂದೆ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಜಾಲ ಅಡಗಿದೆ. ದುಬೈನಿಂದಲೇ ಈ ಜಾಲವನ್ನು ನಿಯಂತ್ರಿಸಲಾಗುತ್ತಿದೆ. ಆದ್ದರಿಂದ ಪ್ರಕರಣದ ಆಳ-ಅಗಲವನ್ನು ಪರಿಗಣಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ED) ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಈಗಾಗಲೇ ಚಿಕ್ಕಮಗಳೂರಿನ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಪ್ರಭಾವಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಪೂರ್ಣ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ