ಚಿಕ್ಕಮಗಳೂರು: ಬಾಬಾ ಬುಡನ್ಸ್ವಾಮಿ ದರ್ಗಾ ಶಾಖಾದ್ರಿ ಗೌಸ್ ಮೊಹಿದ್ದೀನ್ ನಿವಾಸದಲ್ಲಿ ಜಿಂಕೆ, ಚಿರತೆ ಚರ್ಮ ಪತ್ತೆ
ಶಾಖಾದ್ರಿ ಅಣ್ಣನ ಮಗನ ಬಳಿಯಿದ್ದ ಬೀಗದ ಕೈ ಬಳಸಿ ನಿವಾಸದ ಬಾಗಿಲು ತೆರೆಯಲಾಯಿತು. ಆರ್ಎಫ್ಒ (ವಲಯ ಅರಣ್ಯಾಧಿಕಾರಿ) ಮೋಹನ್ ನೇತೃತ್ವದಲ್ಲಿ ಶಾಖಾದ್ರಿ ನಿವಾಸದಲ್ಲಿ ಶೋಧ ನಡೆಸಲಾಯಿತು. ಇದೇ ವೇಳೆ ಜಿಂಕೆ, ಚಿರತೆ ಚರ್ಮ ಪತ್ತೆಯಾಯಿತು.
ಚಿಕ್ಕಮಗಳೂರು, ಅಕ್ಟೋಬರ್ 27: ಬಾಬಾ ಬುಡನ್ಸ್ವಾಮಿ ದರ್ಗಾದ ಶಾಖಾದ್ರಿ ಗೌಸ್ ಮೊಹಿದ್ದೀನ್ (Shah Qadri Ghous Mohiuddin) ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಜಿಂಕೆ, ಚಿರತೆ ಚರ್ಮ (Deer, leopard skin) ಪತ್ತೆಯಾಗಿದೆ. ಸರ್ಚ್ ವಾರಂಟ್ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಚಿಕ್ಕಮಗಳೂರಿನ (Chikkamagaluru) ಮಹಾತ್ಮ ಗಾಂಧಿ ರಸ್ತೆ ಬಳಿಯಿರುವ ಶಾಖಾದ್ರಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ, ಈ ವೇಳೆ ಶಾಖಾದ್ರಿ ಅವರು ಮನೆಯಲ್ಲಿರಲಿಲ್ಲ. ರಾಯಚೂರಿಗೆ ತೆರಳಿದ್ದ ಶಾಖಾದ್ರಿ ಬರುವಿಕೆಗಾಗಿ ಕಾಯುತ್ತಿದ್ದ ಸಿಬ್ಬಂದಿ, ಸಂಜೆಯಾದರೂ ಶಾಖಾದ್ರಿ ಗೌಸ್ ಮೊಹಿದ್ದೀನ್ ಹಿಂದಿರುಗದ ಹಿನ್ನೆಲೆ ಶೋಧ ನಡೆಸಿದ್ದಾರೆ.
ಶಾಖಾದ್ರಿ ಅಣ್ಣನ ಮಗನ ಬಳಿಯಿದ್ದ ಬೀಗದ ಕೈ ಬಳಸಿ ನಿವಾಸದ ಬಾಗಿಲು ತೆರೆಯಲಾಯಿತು. ಆರ್ಎಫ್ಒ (ವಲಯ ಅರಣ್ಯಾಧಿಕಾರಿ) ಮೋಹನ್ ನೇತೃತ್ವದಲ್ಲಿ ಶಾಖಾದ್ರಿ ನಿವಾಸದಲ್ಲಿ ಶೋಧ ನಡೆಸಲಾಯಿತು. ಇದೇ ವೇಳೆ ಜಿಂಕೆ, ಚಿರತೆ ಚರ್ಮ ಪತ್ತೆಯಾಯಿತು.
ಜಿಂಕೆ, ಚಿರತೆ ಚರ್ಮ ವಶಕ್ಕೆ ಪಡೆದು ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದಾರೆ. ಶಾಖಾದ್ರಿ ನಿವಾಸದಲ್ಲಿ ಸುಮಾರು 1 ಗಂಟೆ ಕಾಲ ಪರಿಶೀಲನೆ ನಡೆಸಲಾಗಿತ್ತು.
ರಿಯಾಲಿಟಿ ಶೋದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ವಿಚಾರ ಬಹಳ ಸದ್ದು ಮಾಡಿದೆ. ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ಅದೇ ರೀತಿ ಹಲವು ರಾಜಕಾರಣಿಗಳು, ಉದ್ಯಮಿಗಳ ಮನೆಗಳ ಮೇಲೂ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದರು.
ಇದನ್ನೂ ಓದಿ: ಹುಲಿ ಚರ್ಮದ ಮೇಲೆ ಕುಳಿತ ಬಾಬಾ ಬುಡನ್ ದರ್ಗಾದ ಶಾಖಾದ್ರಿಗೆ ಅರಣ್ಯ ಇಲಾಖೆ ನೋಟಿಸ್, ಕ್ರಮಕ್ಕೆ ಹಿಂದೂ ಸಂಘಟನೆ ಒತ್ತಾಯ
ಈ ಮಧ್ಯೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನೇ ಗುರಿಯಾಗಿಸುತ್ತಿದೆ. ದರ್ಗಾಗಳಲ್ಲಿ ನವಿಲು ಗರಿ ಬಳಸುತ್ತಿಲ್ಲವೇ ಎಂದು ಕೆಲವು ಮಂದಿ ಬಿಜೆಪಿ ನಾಯಕರು ಪ್ರಶ್ನಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನೂ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪ ಕೇಳಿಬಂದಿತ್ತು. ಆದರೆ, ಅದು ನಕಲಿ ಎಂದು ಸಚಿವೆ ಸ್ಪಷ್ಟಪಡಿಸಿದ್ದರು. ವನ್ಯಜೀವಿ ಸಂರಕ್ಷಣೆ ಕಾನೂನಿನ ವಿಚಾರದಲ್ಲಿ ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ತಾರತಮ್ಯ ಎಸಗುತ್ತಿದೆ ಎಂದೂ ಪ್ರತಿಪಕ್ಷಗಳು ಆರೋಪಿಸಿದ್ದವು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಬಾಬಾ ಬುಡನ್ಸ್ವಾಮಿ ದರ್ಗಾದ ಶಾಖಾದ್ರಿ ಗೌಸ್ ಮೊಹಿದ್ದೀನ್ ನಿವಾಸದಲ್ಲಿ ಶೋಧಕಾರ್ಯ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 pm, Fri, 27 October 23