
ಚಿಕ್ಕಮಗಳೂರು, ಆಗಸ್ಟ್ 23: ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಯುವತಿಯೊಬ್ಬಳಿಗೆ ಭಾರಿ ಚಿತ್ರಹಿಂಸೆ ನೀಡಿದ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಕೇಳಿಬಂದಿದೆ. ಸ್ಥಳೀಯವಾಗಿ ದೇವಾಲಯ ನಿರ್ಮಿಸಿಕೊಂಡಿರುವ ಸತೀಶ್ ಪಾತ್ರಿ ಎಂಬಾತ ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಯೊಬ್ಬಳಿಗೆ ಅಮಾನವೀಯವಾಗಿ ಕಿರುಕುಳ ನೀಡಿದ್ದಾನೆ ಎನ್ನಲಾದ ವಿಡಿಯೋ ಮತ್ತು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ಸತೀಶ್ ಪಾತ್ರಿ ಯುವತಿಯನ್ನು ಬಲವಂತವಾಗಿ ಹಿಡಿದುಕೊಂಡು ಹೆದರಿಸುತ್ತಿರುವುದು ಕಂಡುಬಂದಿದೆ. ಕೋಳಿಯನ್ನು ನೀಡಿ ಅದರ ರಕ್ತ ಕುಡಿಯುವಂತೆ ಒತ್ತಾಯಿಸುವುದು, ಒಂದು ವೇಳೆ ರಕ್ತಾಹಾರ ಸ್ವೀಕರಿಸದಿದ್ದರೆ ಬಾಯಿಯಲ್ಲಿ ಉರಿಯುವ ಕರ್ಪೂರ ಇಡುವುದಾಗಿ ಬೆದರಿಕೆ ಹಾಕುವುದು ಹಾಗೂ ಬಾಳೆ ಎಲೆಯ ಮೇಲಿಟ್ಟ ಅವಲಕ್ಕಿಯನ್ನು ಸಂಪೂರ್ಣವಾಗಿ ತಿನ್ನುವಂತೆ ವಾರ್ನಿಂಗ್ ನೀಡುವುದು ದೃಶ್ಯದಲ್ಲಿದೆ. ಇದರೊಂದಿಗೆ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಕೂಡ ಸಶಕ್ತವಾಗಿ ವೈರಲ್ ಆಗಿದೆ. ಕರಾವಳಿ ಭಾಗದ ಆಚರಣೆಗಳನ್ನು ಬಂಡವಾಳ ಮಾಡಿಕೊಂಡು ಸತೀಶ್ ಪಾತ್ರಿ ವಂಚನೆ ಎಸಗುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಹಾಗೂ ಮುಖಂಡ ತಮ್ಮಣ್ಣಶೆಟ್ಟಿ, ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದ ಸತೀಶ್ ಪಾತ್ರಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಇದು ಮೂರು ವರ್ಷಗಳಷ್ಟು ಹಳೆಯ ವಿಡಿಯೋ. ನಾನು ಕಳೆದ ಒಂದೂವರೆ ವರ್ಷದಿಂದ ದರ್ಶನ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ದೇವಾಲಯದ ಹಳೆಯ ಧರ್ಮದರ್ಶಿಯೇ ನನ್ನ ವಿರುದ್ಧ ಪಿತೂರಿ ನಡೆಸಿ, ಈ ಹಳೆಯ ವಿಡಿಯೋಗಳನ್ನು ಇಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ” ಎಂದು ಅವರು ಸಮಜಾಯಿಷಿ ನೀಡಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ದೇವಾಲಯದಲ್ಲಿ ದುರ್ಗಾಪರಮೇಶ್ವರಿ ಹಾಗೂ ಪಂಜುರ್ಲಿ (ಪಂಜರವಳ್ಳಿ) ಸೇರಿದಂತೆ ಕರಾವಳಿಯ ದೈವಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸದ್ಯ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Sun, 23 August 26