ಕೆ.ಆರ್. ಮಾರ್ಕೆಟ್‌ನಲ್ಲಿ ಹೆಚ್ಚಿದ ಕಳ್ಳತನ: ಎಐ ಆಧಾರಿತ ‘ಫೇಸ್ ರೆಕಗ್ನಿಷನ್’ ಕ್ಯಾಮೆರಾ ಅಳವಡಿಕೆಗೆ ಕಮಿಷನರ್ ಸೂಚನೆ!
ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬದ ವೇಳೆ 50ಕ್ಕೂ ಹೆಚ್ಚು ಮೊಬೈಲ್ ಕಳ್ಳತನವಾದ ಹಿನ್ನೆಲೆಯಲ್ಲಿ, ಸೀಮಂತ್ ಕುಮಾರ್ ಸಿಂಗ್ ಎಐ ಆಧಾರಿತ ಫೇಸ್ ರೆಕಗ್ನಿಷನ್ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದಾರೆ. ಮುಂಬರುವ ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ವೇಳೆಗೆ ಕಳ್ಳತನ ತಡೆಯಲು ಹಾಗೂ ಹಳೆಯ ಅಪರಾಧಿಗಳನ್ನು ತಕ್ಷಣ ಪತ್ತೆಹಚ್ಚಲು ಈ ಹೊಸ ತಂತ್ರಜ್ಞಾನ ನೆರವಾಗಲಿದೆ.

ಮುಖ್ಯಾಂಶಗಳು
- ಕೆ.ಆರ್. ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬದಂದು 50ಕ್ಕೂ ಹೆಚ್ಚು ಮೊಬೈಲ್‌ಗಳು ಕಳ್ಳತನ.
- ಕಳ್ಳತನ ತಡೆಯಲು ಎಐ ಆಧಾರಿತ 'ಫೇಸ್ ರೆಕಗ್ನಿಷನ್' ಕ್ಯಾಮೆರಾ ಅಳವಡಿಕೆಗೆ ಸೂಚನೆ.
- ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ಹಿನ್ನೆಲೆಯಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ.
ಬೆಂಗಳೂರು, ಆಗಸ್ಟ್ 23: ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಕೆ.ಆರ್. ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬದ ವೇಳೆ ಭಾರಿ ಪ್ರಮಾಣದಲ್ಲಿ ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವ ಘಟನೆಗಳು ಬೆಳಕಿಗೆ ಬಂದಿವೆ. ಹಬ್ಬದ ಖರೀದಿಯ ಸಂಭ್ರಮದಲ್ಲಿದ್ದ ಸಾರ್ವಜನಿಕರಿಗೆ ಕಳ್ಳರು ಶಾಕ್ ನೀಡಿದ್ದು, ಹೂವು-ಹಣ್ಣು ಖರೀದಿಸಿ ಡಿಜಿಟಲ್ ಪಾವತಿ ಮಾಡಲು ಹೊರಟಾಗ ಅಥವಾ ಮನೆಗೆ ಕರೆ ಮಾಡಲು ಹೋದಾಗ ಮೊಬೈಲ್ ಮಾಯವಾಗಿರುವುದು ತಿಳಿದುಬಂದಿದೆ. ಸುಮಾರು 50ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಸಂತ್ರಸ್ತರು ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆ ಹಾಗೂ ‘ಇ-ಲಾಸ್ಟ್’ (e-Lost) ಆಪ್ ಮೂಲಕ ಸಾಲು ಸಾಲು ದೂರುಗಳನ್ನು ದಾಖಲಿಸಿದ್ದಾರೆ.
ಫೇಸ್ ರೆಕಗ್ನಿಷನ್ ಎಐ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ
ಈ ಸರಣಿ ಕಳ್ಳತನಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆ.ಆರ್. ಮಾರ್ಕೆಟ್ ಪ್ರದೇಶದಲ್ಲಿ ಅತ್ಯಾಧುನಿಕ ಫೇಸ್ ರೆಕಗ್ನಿಷನ್ (Face Recognition) ಎಐ ಕ್ಯಾಮೆರಾಗಳನ್ನು ಅಳವಡಿಸಲು ನಗರದ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಾದ ಗೌರಿ-ಗಣೇಶ, ದಸರಾ ಹಾಗೂ ದೀಪಾವಳಿ ಬರಲಿರುವುದರಿಂದ ಮಾರ್ಕೆಟ್‌ಗೆ ಲಕ್ಷಾಂತರ ಜನರು ಆಗಮಿಸುವ ಸಾಧ್ಯತೆಯಿದೆ. ಈ ವೇಳೆ ಸಾರ್ವಜನಿಕರ ಸುರಕ್ಷತೆ ಮತ್ತು ಕಳ್ಳತನ ತಡೆಯಲು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಹೇಗೆ ಕೆಲಸ ಮಾಡಲಿದೆ ಎಐ ತಂತ್ರಜ್ಞಾನ?
ಈ ಫೇಸ್ ರೆಕಗ್ನಿಷನ್ ಕ್ಯಾಮೆರಾಗಳು ಮಾರ್ಕೆಟ್‌ಗೆ ಬರುವ ವ್ಯಕ್ತಿಗಳ ಮುಖವನ್ನು ಗುರುತಿಸಿ, ಪೊಲೀಸರ ಬಳಿ ಇರುವ ಹಳೆಯ ಅಪರಾಧಿಗಳ ಡೇಟಾಬೇಸ್‌ನೊಂದಿಗೆ ತಕ್ಷಣವೇ ಹೋಲಿಕೆ ಮಾಡುತ್ತವೆ. ಮುಖ ಹೊಂದಾಣಿಕೆಯಾದ ತಕ್ಷಣವೇ ಸ್ಥಳದಲ್ಲಿ ಕರ್ತವ್ಯದಲ್ಲಿರುವ ಪೊಲೀಸರ ಮೊಬೈಲ್ ಫೋನ್‌ಗೆ ಅಲರ್ಟ್ ಸಂದೇಶ ರವಾನೆಯಾಗುತ್ತದೆ. ಇದರಿಂದಾಗಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಂಕಿತ ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲು ಸಾಧ್ಯವಾಗಲಿದೆ. ಈ ತಂತ್ರಜ್ಞಾನದ ಬಳಕೆಯಿಂದ ಮುಂಬರುವ ಹಬ್ಬದ ದಿನಗಳಲ್ಲಿ ಸಾರ್ವಜನಿಕರು ಭಯವಿಲ್ಲದೆ ಖರೀದಿ ನಡೆಸಲು ಸಹಕಾರಿಯಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




