‘ನನಗೆ ನ್ಯಾಯ ಬೇಕು’: ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ಶಿಕ್ಷಕನಿಗೆ ಶಾಕ್ ಕೊಟ್ಟ ಯುವತಿ
ಚಿಕ್ಕಮಗಳೂರಿನಲ್ಲಿ ಶಿಕ್ಷಕ ಶರತ್ ತನ್ನ ಲಿವಿಂಗ್ ರಿಲೇಷನ್‌ಶಿಪ್ ಪಾರ್ಟ್‌ನರ್ ಅಶ್ವಿನಿಗೆ ಮೋಸ ಮಾಡಿ, ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನದ ಬಳಿಕ ಅಶ್ವಿನಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಶರತ್, 4 ವರ್ಷಗಳ ಸಹಬಾಳ್ವೆಯ ನಂತರ ಕೈಕೊಟ್ಟಿದ್ದಾನೆ. ನ್ಯಾಯಕ್ಕಾಗಿ ಅಶ್ವಿನಿ ಪ್ರತಿಭಟನೆ ನಡೆಸಿ, ಪೊಲೀಸ್ ದೂರು ದಾಖಲಿಸಲಾಗಿದೆ.

ಚಿಕ್ಕಮಗಳೂರು, ಡಿ.13: ರಾಜ್ಯದಲ್ಲಿ ಅಕ್ರಮ ಸಂಬಂಧ, ಗುಟ್ಟಾಗಿ ಎರಡನೇ ಮದುವೆ ಆಗುತ್ತಿರುವ ಘಟನೆಗಳು ಹೆಚ್ಚಾಗಿದೆ. ಇದರ ಜತೆಗೆ ಪ್ರೀತಿಸಿ, ದೈಹಿಕ ಸಂಪರ್ಕವನ್ನು ನಡೆಸಿ, ಮೋಸ ಮಾಡುತ್ತಿರುವ ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಚಿಕ್ಕಮಗಳೂರಿನ (Chikkamagaluru) ಕಲ್ಯಾಣನಗರದಲ್ಲಿ ಶಿಕ್ಷಕನೊಬ್ಬ ಮದುವೆ ಆಗ್ತೇನೆ ಎಂದು ಹೇಳಿ ನಂಬಿಸಿ ಕೈಕೊಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಕಾಲೇಜು ಮುಗಿದ ನಂತರವೂ ಇಬ್ಬರು ಸಂಪರ್ಕದಲ್ಲಿದ್ದರು. ಈ ವೇಳೆ ಶರತ್ ಮದುವೆ ಆಗಿ, ಪತ್ನಿಯಿಂದ ವಿಚ್ಛೇಧನ ಪಡೆದಿದ್ದ. ಇದರ ನಡುವೆ ಅಶ್ವಿನಿ ಜತೆಗೆ ಪ್ರೀತಿ ನಿವೇದನೆ ಮಾಡಿಕೊಂಡು ಮದುವೆ ಆಗುವೆ ಎಂದು ಭರವಸೆ ನೀಡಿದ್ದಾನೆ. ಇಬ್ಬರು 4 ವರ್ಷದಿಂದ ಪರಸ್ವರ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು. ಇದೀಗ ಅಶ್ವಿನಿಗೂ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ.
ಶರತ್ ನಾಳೆ ಅದ್ದೂರಿಯಾಗಿ (ಡಿ.14) ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾನೆ. ಮನೆಯ ಮುಂದೆ ಚಪ್ಪರ ಹಾಕಿಕೊಂಡು ಸಂಭ್ರಮದಲ್ಲಿದ್ದ ಶರತ್ಗೆ ಅಶ್ವಿನಿ ಇದೀಗ ಬಿಗ್ ಶಾಕ್ ನೀಡಿದ್ದಾಳೆ. ತನ್ನ ಪರ ವಕೀಲರನ್ನು ಶರತ್ ಮನೆ ಬಳಿ ಕರೆದುಕೊಂಡು ಬಂದು ಶರತ್ಗೆ ಚಳಿಬಿಡಿಸಲು ಮುಂದಾಗಿದ್ದಾಳೆ. ಆದರೆ ಅಶ್ವಿನಿ ಮನೆ ಬಳಿ ಬರುತ್ತಿದ್ದಂತೆ ಶರತ್ ಮನೆಯಿಂದ ಪರಾರಿಯಾಗಿದ್ದಾನೆ. ತನಗೆ ನ್ಯಾಯ ಸಿಗುವವರೆಗೆ ಇಲ್ಲಿಂದ ಹೋಗಲ್ಲ ಎಂದು ಹಠ ಹಿಡಿದು ಮನೆ ಮುಂದೆ ಪ್ರತಿಭಟನೆ ಮಾಡಿದ್ದಾಳೆ. ಅಶ್ವಿನಿ, ಶರತ್ ವಿರುದ್ಧ 8 ತಿಂಗಳ ಹಿಂದೆ ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾಳೆ. ಮೂಲತಃ ಹಾಸನ ಜಿಲ್ಲೆಯ ಬೇಲೂರಿನವಳಾಗಿದ್ದು ಖಾಸಗಿ ಶಾಲೆಯ ಶಿಕ್ಷಕಿಯಾಗಿ ವೃತ್ತಿ ಮಾಡುತ್ತಿದ್ದಾಳೆ. ಶರತ್ ಮಾಡಿದ ಮೋಸದ ಬಗ್ಗೆ ತಮ್ಮ ಸ್ನೇಹಿತರ ಮುಂದೆಯೂ ಹೇಳಿಕೊಂಡಿದ್ದಳು. ಶರತ್ ಬೇರೊಂದು ಯುವತಿಯನ್ನು ಮದುವೆ ಆಗುತ್ತಿದ್ದಾನೆ ಎಂಬ ಸುದ್ದಿ ಕೇಳಿ ಅವನ ಮನೆ ಮುಂದೆ ಬಂದು ಪ್ರತಿಭಟನೆ ಮಾಡಿದ್ದಾಳೆ. ಇದೀಗ ಶರತ್ ಮೇಲೆ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಮಾಜಿ ಬಿಗ್ ಬಾಸ್ ಸ್ಪರ್ಧಿ, ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್
ಇನ್ನು ಈ ಬಗ್ಗೆ ಅಶ್ವಿನಿ ಟಿವಿ9 ಮುಂದೆ ಮಾತನಾಡಿದ್ದಾಳೆ. “ನನ್ನ ಪ್ರೇಮಿ ಬೇರೊಂದು ಮದುವೆ ಆಗುತ್ತಿದ್ದಾನೆ ಎಂಬ ವಿಷಯ ತಿಳಿದು ಅವನ ಮನೆ ಮುಂದೆ ಹೋಗಿದ್ದೇನೆ. ಆದರೆ ಇದೀಗ ಅವನು ಮನೆಯಲ್ಲಿ ಇಲ್ಲ. ನಾಳೆ ನಡೆಯುವ ಮದುವೆ ನಿಲ್ಲಿಸುವಂತೆ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ದೂರು ನೀಡಿದ್ದೇನೆ. ಮೂರು ವರ್ಷಗಳ ಹಿಂದೆ ಮೊದಲ ಹೆಂಡತಿಗೆ ವಿಚ್ಛೇದನದ ಬಳಿಕ ನನ್ನನ್ನು ಪ್ರೀತಿಸುತ್ತಿದ್ದೇನೆ. ಮದುವೆಯೂ ಆಗುತ್ತೇನೆ ಎಂದು ಹೇಳಿದ್ದಾನೆ. ಇದನ್ನು ನಂಬಿ ತುಂಬಾ ಹತ್ತಿರವಾಗಿದ್ದೆ, ದೈಹಿಕ ಸಂಪರ್ಕ ಕೂಡ ನಡೆಸಿದ್ದೇನೆ. ನನಗೆ ನ್ಯಾಯ ಬೇಕು, ನನ್ನೊಂದಿಗೆ ಶರತ್ ಮದುವೆಯಾಗಬೇಕು” ಎಂದು ಹೇಳಿದ್ದಾಳೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




