AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ ಆತ್ಮಹತ್ಯೆಗೆ ಶರಣು

ಚಿಕ್ಕಮಗಳೂರಿನ ಕುದುರೆಮುಖದಲ್ಲಿ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದ ದಲಿತ ಯುವಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ, ಆತನ ವಾಹನವನ್ನು ವಶಪಡಿಸಿಕೊಂಡಿದ್ದರು. ಈ ಘಟನೆಯಿಂದ ಮನನೊಂದ ನಾಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಆದರೆ ಗ್ರಾಮಸ್ಥರು ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ಚಿಕ್ಕಮಗಳೂರು: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ ಆತ್ಮಹತ್ಯೆಗೆ ಶರಣು
ಪಿಸಿ ಸಿದ್ದೇಶ್​, ಮೃತ ನಾಗೇಶ್​
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ|

Updated on:Aug 13, 2025 | 6:31 PM

Share

ಚಿಕ್ಕಮಗಳೂರು, ಆಗಸ್ಟ್​ 13: ಪೊಲೀಸರಿಂದ (Police) ಹಲ್ಲೆಗೊಳಗಾಗಿದ್ದ ದಲಿತ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ್ (29) ಮೃತ ಯುವಕ. ಕುದುರೆಮುಖ (Kudremukh) ಠಾಣೆಯ ಪೊಲೀಸ್ ಪೇದೆ ಸಿದ್ದೇಶ್​ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಯುವಕ ನಾಗೇಶನಿಗೆ ಮನಸೋ ಇಚ್ಛೆ ಹೊಡೆದಿದ್ದನು. ಅಲ್ಲದೇ, ನಾಗೇಶ್​ ವಿರುದ್ಧ ಸುಳ್ಳು ಎಫ್​ಐಆರ್ ಕೂಡ ದಾಖಲಿಸಿದ್ದರು. ಜೊತೆಗೆ ಆತನ ಜೀಪ್ ಸಹ ಪೊಲೀಸರು ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಾಗೇಶ್​ ಇಂದು (ಆ.13) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾಗೇಶ್ ಕಳಸ ತಾಲೂಕಿನ ಬಸ್ತಿಗದ್ದೆ ನಿವಾಸಿಯಾಗಿದ್ದು, ಕಳಸ‌ ಸಮೀಪದ ಸಂಸೆ ಎಸ್ಟೇಟ್​ನಲ್ಲಿ ಜೀಪ್​ ಚಾಲಕನಾಗಿ ಕೆಲ ಮಾಡುತ್ತಿದ್ದರು. ಜುಲೈ 17 ರ ರಾತ್ರಿ ಕುದುರೆಮುಖ ಠಾಣೆಯ ಪೊಲೀಸ್ ಪೇದೆ ಸಿದ್ದೇಶ್​ ನಡುರಸ್ತೆಯಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದನು. ಈ ವೇಳೆ ಜೀಪಿನಲ್ಲಿ ಬಂದ ನಾಗೇಶ್​, ಪಕ್ಕಕ್ಕೆ ಸರಿಯುವಂತೆ ಹೇಳಿದ್ದಾರೆ. ಇಷ್ಟಕ್ಕೆನೇ, ಕುದುರೆಮುಖ ಠಾಣೆಯ ಪೊಲೀಸ್ ಪೇದೆ ಸಿದ್ದೇಶ್​ ಯುವಕ ನಾಗೇಶ್​ನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ, ಕರ್ತವ್ಯಕ್ಕೆ ಅಡ್ಡಿ, ಹಲ್ಲೆಗೆ ಯತ್ನಿಸಿದನೆಂದು ಎಂದು ಸುಳ್ಳು ಎಫ್​ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: ಜ್ವರಕ್ಕೆ ಒಂದೇ ಗ್ರಾಮದ 3 ಮಕ್ಕಳು ಸಾವು, 20ಕ್ಕೂ ಅಧಿಕ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ

ಕುದುರೆಮುಖ ಠಾಣೆಯ ಪೊಲೀಸ್ ಪೇದೆ ಸಿದ್ದೇಶ್​ನ ದೌರ್ಜನ್ಯದ ಬಗ್ಗೆ ಯುವಕ ನಾಗೇಶ್ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ​ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಮ್​ ಆಮ್ಟೆ ಕೊಪ್ಪ DYSP ನೇತೃತ್ವದಲ್ಲಿ ತಂಡ ರಚಿಸಿದ್ದರು. ಅತ್ತ ತನಿಖೆ ನಡೆಯುತ್ತಿದ್ದು, ಇತ್ತ ನಾಗೇಶ್​ ಬುಧಾವಾರ (ಆ.13) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ಪೊಲೀಸ್ ಪೇದೆ ಸಿದ್ದೇಶ್​ ನನ್ನು ಅಮಾನತ್ತು ಮಾಡಿದ್ದಾರೆ. ಆದರೆ, ಕುದುರೆಮುಖ ಠಾಣೆಯ ಪಿಎಸ್​ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Wed, 13 August 25