ಚಿಕ್ಕಮಗಳೂರು: ಕರ್ನಾಟಕದ ಶೇ 99ರಷ್ಟು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲಿಸಿದ್ದಾರೆ. ಸರ್ಕಾರದ ಸಮವಸ್ತ್ರ ನೀತಿ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ. ಶೇ 1ರಷ್ಟು ಜನರು ವಿಷಯವನ್ನು ಜೀವಂತವಾಗಿ ಇರಿಸಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗಂಭೀರ ಆರೋಪ ಮಾಡಿದರು. ಕ್ಯಾಮೆರಾಗಳು ಅವರ ಕಡೆಗೆ ತಿರುಗಬೇಕು ಎನ್ನುವ ಕಾರಣಕ್ಕೆ ಇಂಥ ನಾಟಕ ಆಡುತ್ತಿದ್ದಾರೆ. ಅವರನ್ನು ಕೆಲವರು ಹೀರೊ, ಹೀಯೊಯಿನ್ ರೀತಿ ಬಿಂಬಿಸುತ್ತಿದ್ದಾರೆ. ಪರೀಕ್ಷೆಗಿಂತ, ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎನ್ನುವ ಇಂಥ ಮಾನಸಿಕತೆ ಇರುವವರಿಗೆ ಮುಂದೆ ದೇಶ ದೊಡ್ಡದೋ? ಹಿಜಾಬ್ ದೊಡ್ದದೋ ಎಂಬ ಪ್ರಶ್ನೆ ಎದುರಾದರೆ ಆಗ ಇವರು ಹಿಜಾಬ್ ದೊಡ್ಡದು ಎಂದು ದೇಶ ಬಿಟ್ಟುಬಿಡುತ್ತಾರೆ ಎಂದು ಆರೋಪ ಮಾಡಿದರು.
1983ರಿಂದ ಇಲ್ಲದ ಚಳವಳಿ ಈಗ ಏಕೆ ಶುರುವಾಗುತ್ತೆ ಎಂದು ಪ್ರಶ್ನಿಸಿದ ಅವರು, ಇಂಥವರು ನಾಳೆ ಸಂವಿಧಾನ ಬೇಡ, ಷರಿಯತ್ ಬೇಕು ಎನ್ನುತ್ತಾರೆ. ಆ ಮಾನಸಿಕತೆಗೆ ನೀರು, ಗೊಬ್ಬರ ಹಾಕುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಇಂಥ ಮಾನಸಿಕತೆಯೇ ಖಿಲಾಫತ್ ಚಳವಳಿಗೆ ಕಾರಣವಾಗಿತ್ತು. ಖಿಲಾಫತ್ ಚಳವಳಿಗೆ ಗೊಬ್ಬರ, ನೀರು ಹಾಕಿ ದೇಶ ವಿಭಜಿಸಿತ್ತು. ಹಿಜಾಬ್ ವಿಚಾರದಲ್ಲಿಯೂ ಕಾಂಗ್ರೆಸ್ ಇದೇ ರೀತಿ ಪ್ರೋತ್ಸಾಹಿಸುವುದನ್ನು ಮುಂದುವರಿಸಿದರೆ ಮತ್ತೊಂದು ವಿಭಜನೆಯಂಥ ಸನ್ನಿವೇಶ ಎದುರಾಗಬಹುದು ಎಂದು ಎಚ್ಚರಿಸಿದರು.
ಮತಾಂಧತೆಯ ಮೂಲಕ ದೇಶ ಒಡೆಯುವುದೇ ಅವರ ಸಂಚು. ಭಾರತದ ವಿಭಜನೆಗೂ ಇದೇ ಮತಾಂಧತೆ ಕಾರಣ ಎಂದು ವಿಷಾದಿಸಿದರು.
ಉಗ್ರರಿಗೆ ಬಿರಿಯಾನಿ ತಿನ್ನಿಸೋ ಕಾಲವಿತ್ತು: ಸಿಟಿ ರವಿ
ದೇಶದಲ್ಲಿ ಉಗ್ರರಿಗೆ ಬಿರಿಯಾನಿ ತಿನಿಸುವ ಕಾಲವೂ ಒಂದು ಇತ್ತು. ಆದರೆ ಈಗ ಹಾಗಿಲ್ಲ. ಪರಿಸ್ಥಿತಿ ಬದಲಾಗಿದೆ. ಈಗ ಯಾರಾದ್ರೂ ಬಾಲ ಬಿಚ್ಚಿದ್ರೇ ಅವರ ಮನೆ ಎದುರು ಸೀದಾ ಜೆಸಿಬಿ, ಬುಲ್ಡೋಜರ್ಗಳು ಹೋಗುತ್ವೆ ಎಂದು ವಿಜಯಪುರದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಭಯೋತ್ಪಾದನೆ ಮಾಡುವವರಿಗೆ ಈಗ ಬಿರಿಯಾನಿ ತಿನಿಸಲ್ಲ. ಬಂದೂಕಿನಿಂದ ದಾಳಿ ಮಾಡಿದರೆ ನಮ್ಮ ರಕ್ಷಣಾ ಪಡೆಗಳು ಬಂದೂಕಿನಿಂದಲೇ ಉತ್ತರ ಕೊಡುತ್ತವೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡುತ್ತವೆ ಎಂದರು.
ಇದನ್ನೂ ಓದಿ: ಡಾ.ಸುಧಾಕರ್ ಕೋಟಿಗಟ್ಟಲೆ ಅವ್ಯವಹಾರದಲ್ಲಿ ಭಾಗಿ; ಸಿಟಿ ರವಿ ಸಹಿತ ಐದಾರು ಸಚಿವರ ವಿರುದ್ಧ ನೇರ ಆರೋಪ ಮಾಡಿದ ಎಂ ಲಕ್ಷ್ಮಣ್
ಇದನ್ನೂ ಓದಿ: ಪ್ರಚೋದನಕಾರಿ ಹೇಳಿಕೆ ಆರೋಪ; ಆರಗ ಜ್ಞಾನೇಂದ್ರ, ಸಿಟಿ ರವಿ ವಿರುದ್ಧ ಕಾಂಗ್ರೆಸ್ನಿಂದ ದೂರು ದಾಖಲು