ಕೊರೊನಾದಿಂದ ಪತಿಯನ್ನ ಕಳೆದುಕೊಂಡ ಪತ್ನಿಯ ಗೋಳಾಟ, ಅರ್ಧಕ್ಕೆ ನಿಂತಿದ್ದ ಮಗಳ ಶಿಕ್ಷಣಕ್ಕೆ ಆಸರೆಯಾದ ಸಮರ್ಪಣ
ಸಂಕಷ್ಟದಲ್ಲಿದ್ದ ಬಾಲಕಿಗೆ ಕೊಡಿಸುವ ಮಹತ್ತರ ಜವಾಬ್ದಾರಿ ಹೊತ್ತ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ. ಒಟ್ಟಿನಲ್ಲಿ ಬಾಡಿ ಹೋಗಿದ್ದ ತಾಯಿ-ಮಗಳ ಮೊಗದಲ್ಲಿ ಮತ್ತೆ ಸಂತಸ ತಂದ ಸಂತೃಪ್ತಿ ಟಿವಿ9ನದ್ದು. ಹ್ಯಾಟ್ಸ್ ಆಫ್ ಟು ಸಮರ್ಪಣ ಚಾರಿಟೇಬಲ್ ಟ್ರಸ್ಟ್.
ಚಿಕ್ಕಮಗಳೂರು: ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅಂತಾ ಕನಸು ಕಂಡಿದ್ದ ಅಪ್ಪ, ಕ್ರೂರಿ ಕೊರೊನಾಗೆ ಬಲಿಯಾದ. ಮನೆಯ ಯಜಮಾನನ ಜೊತೆ ಬೆಂಗಳೂರಿಗೆ ಸೇರಿದ ತಾಯಿ, ಮಗಳು ಕಂಗಾಲಾದ್ರು. ವಿಧಿಯಿಲ್ಲದೇ ಏನೂ ಅಂದ್ರೆ ಏನೂ ಗೊತ್ತಿಲ್ಲದ ಬೆಂಗಳೂರನ್ನ ಬಿಟ್ಟು ಮರಳಿ ಊರು ಸೇರಿಕೊಂಡ್ರು. ಗಂಡನನ್ನ ಕಳೆದುಕೊಂಡು ಪತ್ನಿ ಶಾಕ್ ಗೆ ಒಳಗಾಗಿದ್ರೆ, ಮಗಳು ತಂದೆ ಇಲ್ಲದೇ ಇನ್ಯಾರು ನನಗೆ ದಾರಿದೀಪ ಅಂತಾ ಕಣ್ಣೀರಿಟ್ಟಿದ್ದಳು. ಕಂಗಲಾಗಿದ್ದ ಕುಟುಂಬದ ಸ್ಥಿತಿಯನ್ನ ಟಿವಿ9 ವರದಿ ಮಾಡಿತ್ತು. ಇದೀಗ ಅಪ್ಪನ ಕನಸನ್ನ ನನಸು ಮಾಡಲು ಅದೊಂದು ಸಂಸ್ಥೆ ಮುಂದೆ ಬಂದಿದ್ದು, ತಾಯಿ-ಮಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕ್ರೂರಿ ಕೊರೊನಾಗೆ ಅರ್ಧದಲ್ಲೇ ಬದುಕು ಮುಗಿಸಿದ ಕನಸುಗಾರ ತಂದೆ ಕ್ರೂರಿ ಕೊರೊನಾ ಅದೆಷ್ಟು ಜೀವಗಳನ್ನ ಬಲಿ ಪಡೆಯಿತೋ..? ಅದೆಷ್ಟು ಜನರ ಬದುಕು ಮೂರಾಬಟ್ಟೆಯಾಯಿತೋ ? ಅದೆಷ್ಟು ಜನರನ್ನ ಕಣ್ಣೀರಿಡುವಂತೆ ಮಾಡಿತೋ..? ಲೆಕ್ಕವಿಲ್ಲ.. ಹೆಮ್ಮಾರಿ ಕೊರೊನಾದ ಹೊಡೆತಕ್ಕೆ ಸಿಲುಕಿ ವಿಲವಿಲ ಅಂತಾ ಒದ್ದಾಟ ನಡೆಸಿದವರಲ್ಲಿ ಈ ತಾಯಿ-ಮಗಳು ಕೂಡ ಹೊರತಾಗಿಲ್ಲ. ಇವರ ಹೆಸ್ರು ಅನಿತಾ.. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ನಿವಾಸಿ.
ಕಳೆದ ಕೆಲ ವರ್ಷಗಳ ಹಿಂದೆ ಮಗಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಬೇಕು ಅಂತಾ ಪತಿ ಜಗದೀಶ್, ಪತ್ನಿ-ಮಗಳನ್ನ ಕರೆದುಕೊಂಡು ಕಾಫಿನಾಡಿನಿಂದ ಬೆಂಗಳೂರಿಗೆ ತೆರಳಿದ್ರು. ಕಾರು ಓಡಿಸಿಕೊಂಡು ಜೀವನ ನಡೆಸಿ, ಮಗಳಿಗೆ ಶಿಕ್ಷಣ ಕೊಡಿಸುತ್ತಿದ್ದ ಜಗದೀಶ್, ಕಳೆದ ಏಪ್ರಿಲ್ನಲ್ಲಿ ಕೊರೊನಾಗೆ ಬಲಿಯಾದ್ರು.
ಎಷ್ಟೇ ಅವಲತ್ತುಕೊಂಡ್ರೂ ಬೆಂಗಳೂರಿನಲ್ಲಿ ಆಸ್ಪತ್ರೆಗಳು ಕೊರೊನಾ ರಿಪೋರ್ಟ್ ಇಲ್ಲದೇ ದಾಖಲಿಸಿಕೊಳ್ಳಲು ನಿರಾಕರಿಸಿದವು. ಕೊರೊನಾ ವರದಿ ಬರುವಷ್ಟರಲ್ಲಿ ಜಗದೀಶ್ ಪ್ರಾಣಪಕ್ಷಿ ಹಾರಿ ಹೋಯ್ತು. ಹೀಗೆ ಬೆಂಗಳೂರಿಗೆ ಕನಸನ್ನ ಕಟ್ಟಿಕೊಂಡು ಹೋದವರು, ತವರೂರಿಗೆ ಮರಳಿದ್ದು ಜಗದೀಶ್ ಶವವನ್ನ ಜೊತೆಯಲ್ಲಿ ಕಟ್ಟಿಕೊಂಡು.
ಸಂಕಷ್ಟದಲ್ಲಿದ್ದ ಕುಟುಂಬದ ಕಣ್ಣೀರಿನ ಕಥೆಯನ್ನ ಪ್ರಸಾರ ಮಾಡಿದ ಟಿವಿ9 ಮನೆಯ ಯಜಮಾನನ ಅಕಾಲಿಕ ಸಾವು ತಾಯಿ-ಮಗಳನ್ನ ಇನ್ನಿಲ್ಲದಂತೆ ಕಾಡಿತ್ತು. ಕಾರು ತೆಗೆದುಕೊಳ್ಳಲು ಮಾಡಿದ್ದ ಸಾಲ, ಕೈ ಸಾಲ, ಜೊತೆಗೆ ಮಗಳ ಶಿಕ್ಷಣ ನಿಂತು ಹೋಗುವ ಭಯ ಅನಿತಾರನ್ನ ಆತಂಕಗೊಳಿಸಿತು. ಸುದ್ದಿ ತಿಳಿದ ಟಿವಿ9 ತಂಡ, ಕೊರೊನಾ ಕಾಲ ಕಾರ್ಯಕ್ರಮದಲ್ಲಿ ಈ ಕುಟುಂಬದ ಕಣ್ಣೀರಿನ ಕಥೆಯನ್ನ ಪ್ರಸಾರ ಮಾಡಿದ್ದೆವು. ಟಿವಿ9 ವರದಿಗೆ ಸ್ಪಂದಿಸಿದ ಸಮರ್ಪಣ ಚಾರಿಟೇಬಲ್ ಟ್ರಸ್ಟ್, ಬಾಲಕಿ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದೆ.
ಮೃತ ಜಗದೀಶ್ ಕುಟುಂಬದ ಸಂಕಷ್ಟಕ್ಕೆ ಮಿಡಿದ ಟ್ರಸ್ಟ್, ಬಾಲಕಿಯ ಶಿಕ್ಷಣದ ಜವಾಬ್ದಾರಿಯನ್ನ ಹೊತ್ತಿದೆ. ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ 8ನೇ ತರಗತಿಗೆ ಬಾಲಕಿಯನ್ನ ದಾಖಲು ಮಾಡಿರೋ ಟ್ರಸ್ಟ್, ಆಕೆಯ ಶಾಲೆಯ ಶುಲ್ಕವನ್ನ ಕಟ್ಟಿ ಬಾಲಕಿಗೆ ಬೇಕಾಗಿರೋ ಎಲ್ಲಾ ಅಗತ್ಯ ಪಠ್ಯ ಸಾಮಾಗ್ರಿಗಳನ್ನ ಕೊಡಿಸಿದೆ. ಅಲ್ಲದೇ ಬಾಲಕಿ ಎಲ್ಲಿಯವರೆಗೂ ಓದುತ್ತಾಳೋ ಅಲ್ಲಿಯವರೆಗೂ ಓದಿಸುವ ಭರವಸೆಯನ್ನ ನೀಡಿದೆ.
ಅಲ್ಲದೇ ಮೃತ ಜಗದೀಶ್ ಮನೆಗೆ ಭೇಟಿ ನೀಡಿದ ಸಮರ್ಪಣಾ ಚಾರಿಟೇಬಲ್ ತಂಡದ ಸದಸ್ಯರು, ಜಗದೀಶ್ ಪತ್ನಿ ಅನಿತಾ, ಮಗಳಿಗೆ ಮಾನಸಿಕ ಧೈರ್ಯ ತುಂಬಿ ಮಾನವೀಯತೆ ಮೆರೆದಿದ್ದಾರೆ. ಮಗಳ ಶಿಕ್ಷಣದ ಜವಾಬ್ದಾರಿಯನ್ನ ಹೊತ್ತುಕೊಂಡು ಒಂದು ದೊಡ್ಡ ಭಾರವನ್ನ ಕಡಿಮೆ ಮಾಡಿದ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಗೆ ಅನಿತಾ ಋಣಿಯಾಗುವುದಲ್ಲದೇ ನಿಟ್ಟುಸಿರು ಬಿಟ್ಟಿದ್ದಾರೆ.
ಸಂತಸ ತಂದ ಸಂತೃಪ್ತಿ ಟಿವಿ9ಗೆ, ಹ್ಯಾಟ್ಸ್ಯಾಫ್ ಟು ಸಮರ್ಪಣ ಚಾರಿಟೇಬಲ್ ಟ್ರಸ್ಟ್..! ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅಂತಾ ಕನಸು ಕಂಡಿದ್ದ ಜಗದೀಶ್, ಕ್ರೂರಿ ಕೊರೊನಾಗೆ ಬಲಿಯಾಗಿರೋದು ಕುಟುಂಬವನ್ನ ಕಂಗಲಾಗುವಂತೆ ಮಾಡಿತ್ತು. ಸಾಲ ತಿರಿಸೋದಾ..? ಮಗಳಿಗೆ ಶಿಕ್ಷಣ ಕೊಡಿಸೋದಾ ಅಂತಾ ಮೃತ ಜಗದೀಶ್ ಪತ್ನಿ ಅನಿತಾ ಕಂಗಲಾಗಿದ್ರು. ಇದೀಗ ಮಗಳಿಗೆ ಶಿಕ್ಷಣ ಕೊಡಿಸುವ ಹೊಣೆಗಾರಿಕೆಯನ್ನ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಹೊತ್ತುಕೊಂಡಿರೋದ್ರಿಂದ ಮೃತ ಜಗದೀಶ್ ಪತ್ನಿ ಅನಿತಾ ಸಂತಸಗೊಂಡಿದ್ದಾರೆ..
“ನಹೀ ಜ್ಞಾನೇನ ಸದೃಶಂ ಪವಿತ್ರಮಹಿ ವಿದ್ಯತೇ” ಅನ್ನೋ ಮಾತಿನಂತೆ ಜ್ಞಾನಕ್ಕಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಯಾವುದು ಇಲ್ಲ ಅನ್ನೋದು ಸರ್ವಕಾಲಿಕ ಸತ್ಯ. ಅಂತಹ ಜ್ಞಾನವನ್ನ ಸಂಕಷ್ಟದಲ್ಲಿದ್ದ ಬಾಲಕಿಗೆ ಕೊಡಿಸುವ ಮಹತ್ತರ ಜವಾಬ್ದಾರಿ ಹೊತ್ತ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ.
ಒಟ್ಟಿನಲ್ಲಿ ಬಾಡಿ ಹೋಗಿದ್ದ ತಾಯಿ-ಮಗಳ ಮೊಗದಲ್ಲಿ ಮತ್ತೆ ಸಂತಸ ತಂದ ಸಂತೃಪ್ತಿ ಟಿವಿ9ನದ್ದು. ಹ್ಯಾಟ್ಸ್ಯಾಫ್ ಟು ಸಮರ್ಪಣ ಚಾರಿಟೇಬಲ್ ಟ್ರಸ್ಟ್. – ಪ್ರಶಾಂತ್, ಚಿಕ್ಕಮಗಳೂರು
ಅಪ್ಪನ ಸಮಾಧಿ ಬಳಿ ಕೇಕ್ ಕಟ್; ಸಮಾಧಿಗೆ ಕೇಕ್ ಅರ್ಪಿಸಿ, ಜನ್ಮ ದಿನ ಆಚರಿಸಿಕೊಂಡ ಬಾಲಕಿ, ಮನ ಮಿಡಿಯುವ ವಿಡಿಯೋ ವೈರಲ್
(father died due to coronavirus chikkamagaluru samarpana ngo helps daughter to continue education)
Published On - 10:27 am, Thu, 2 September 21