AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪರಿಶೀಲಿಸಲು ಮನವಿ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆಯೇ ಎಫ್​ಐಆರ್!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಸ್ಸಾಂ ಕಾರ್ಮಿಕರ ನೆಪದಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಆಶ್ರಯ ಪಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಕಾರ್ಮಿಕರ ಗುರುತು ಪತ್ರಗಳನ್ನು ಪರಿಶೀಲಿಸಿದ್ದಕ್ಕೆ, 9 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪರಿಶೀಲಿಸಲು ಮನವಿ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆಯೇ ಎಫ್​ಐಆರ್!
ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ ಬಜರಂಗದಳ, ವಿಹೆಚ್​ಪಿ ಕಾರ್ಯಕರ್ತರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jan 03, 2026 | 12:27 PM

Share

ಚಿಕ್ಕಮಗಳೂರು, ಜನವರಿ 3: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದಾರೆ ಎಂಬ ಆರೋಪ ಈಗ ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂಬಂಧ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಏಕಾಏಕಿ ಅಸ್ಸಾಂ ಕಾರ್ಮಿಕರ ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಬಜರಂಗದಳ ಮುಖಂಡ ಸುದೇವ್, ಸಂತೋಷ್ ಸೇರಿದಂತೆ ಒಟ್ಟು 9 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮೂಡಿಗೆರೆ ಪಟ್ಟಣದ ವಾರದ ಸಂತೆಗೆ ಕಾರ್ಯಕರ್ತರು ಏಕಾಏಕಿ ಪ್ರವೇಶಿಸಿ ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿತ್ತು.

ಬಾಂಗ್ಲಾದೇಶದಲ್ಲಿ ದೀಪು ಎಂಬಾತನ ಬರ್ಬರ ಹತ್ಯೆ ನಡೆದ ಹಿನ್ನೆಲೆ, ಕೆಲವು ದಿನಗಳ ಹಿಂದೆ ಬಜರಂಗದಳ ಮತ್ತು ವಿಹೆಚ್‌ಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇರುವ ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಈ ಕುರಿತು ಒಂದು ವಾರದ ಗಡುವನ್ನೂ ನೀಡಲಾಗಿತ್ತು.

ಜಿಲ್ಲಾಡಳಿತ, ಪೊಲೀಸರ ವಿರುದ್ಧ ಬಜರಂಗದಳ, ವಿಹೆಚ್​ಪಿ ಆಕ್ರೋಶ

ಆದರೆ ಗಡುವು ಮುಗಿದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ, ಬಜರಂಗದಳ ಹಾಗೂ ವಿಹೆಚ್‌ಪಿ ಕಾರ್ಯಕರ್ತರು ತಾವೇ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.

ಅಸ್ಸಾಂನಿಂದ ಚಿಕ್ಕಮಗಳೂರಿಗೆ ಬಂದಿದ್ದಾರೆ ಸಾವಿರಾರು ಕಾರ್ಮಿಕರು

ಕಾಫಿ ಕೊಯ್ಲು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಸಾವಿರಾರು ಅಸ್ಸಾಂ ಮೂಲದ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ ಕೆಲವರು ನಕಲಿ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾರೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ? ಮುಸ್ಲಿಂ ದಂಪತಿ ಆಧಾರ್ ಕಾರ್ಡ್ ನೋಡಿ ಬಿಜೆಪಿ ನಾಯಕರಿಗೆ ಶಾಕ್!

ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ. ಜಿಲ್ಲೆಯಲ್ಲಿ ಅಕ್ರಮ ವಲಸಿಗರ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ