ಚಿಕ್ಕಮಗಳೂರು, ಮಾರ್ಚ್ 27: ಮೋದಿ ಮೋದಿ (Modi) ಎನ್ನುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂದ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿಕೆಯನ್ನು ವಿರೋಧಿಸಿ, ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ (Congress) ಕಾರ್ಯಕರ್ತರ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಚುನಾವಣಾ ಅಧಿಕಾರಿಗಳು “ನೀತಿ ಸಂಹಿತೆ ಜಾರಿ ನಡುವೆಯೂ ಪ್ರತಿಭಟನೆ ನಡೆಸಿದ್ದಾರೆ” ಎಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚುನಾವಣಾ ಅಧಿಕಾರಿಗಳ ದೂರಿನ ಆಧಾರದ ಮೇಲೆ 15ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕಾರ್ಯಕರ್ತರ ಸಭೆ ನಡೆಸಲು ಮಾರ್ಚ್ 26 ರಂದು ಕೆ.ಜೆ.ಜಾರ್ಜ್ ಮತ್ತು ಜಯಪ್ರಕಾಶ್ ಹೆಗ್ಡೆ ನಗರಕ್ಕೆ ಬಂದಿದ್ದರು. ಆದ್ರಿಕ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿರುವ ಮಾಹಿತಿ ತಿಳಿದು, ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮೋದಿ ಭಾವಚಿತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಎಲ್ಲರನ್ನೂ ಬಂಧಿಸಿ ಕರೆದೊಯ್ದಿದ್ದರು.
ಮೋದಿ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿತ್ತು. ಆದರೆ, ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ ಮೋದಿ. ಹತ್ತು ವರ್ಷದಲ್ಲಿ ಇಪ್ಪತ್ತು ಕೋಟಿ ಯುವಕರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಮೋದಿ ಸರ್ಕಾರ ಭರವಸೆ ಈಡೇರಿಸಿಲ್ಲ. ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿ ಮಾಡದ ಕಾರಣ ‘ಮೋದಿ ಮೋದಿ’ ಅಂತ ಕೂಗುವ ವಿದ್ಯಾರ್ಥಿಗಳು ಮತ್ತು ಯುವಕರ ಅವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದರು.
ಇದನ್ನೂ ಓದಿ: ಮೋದಿ…ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದ ತಂಗಡಗಿ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು
ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ದರೆ ಹೊಡಿ ಎಂದು ಹೇಳಬೇಕು ಅಂದುಕೊಂಡಿದ್ದೆ. ಆದರೆ, ತಂಗಡಗಿ ಮಟ್ಟಕ್ಕೆ ನಾವು ಇಳಿದು ಮಾತನಾಡಲು ಹೋಗಲ್ಲ. ಇಂಥವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.ಸಂಸ್ಕೃತಿಯೇ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಸಚಿವರ ಹೇಳಿಕೆ ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿಯವರು ಸುಳ್ಳು, ಕಪಟದಿಂದ ನಮ್ಮ ಯುವ ಕರು, ಮಕ್ಕಳ ಹಾದಿ ತಪ್ಪಿಸುತ್ತಿದ್ದಾರೆ. ಅವರನ್ನು ತಿದ್ದಲು ಒಬ್ಬ ಅಣ್ಣ, ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಉತ್ತರ ಕರ್ನಾಟಕ ಭಾಷೆಯಲ್ಲಿ ಬುದ್ದಿ ಹೇಳಿದ್ದೇನೆ. ಹೊಡಿ ಬಡಿ ಸಂಸ್ಕೃತಿ ಬಿಜೆಪಿಯದ್ದೇ ಹೊರತು ನಮ್ಮ ದಲ್ಲ. ಕಾರಟಗಿಯಲ್ಲಿ ನೀಡಿರುವ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ