ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ನ ಆಪರೇಷನ್ ಹಸ್ತ ಸಕ್ಸಸ್!
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲ್ಲೇ ಇದೆ. ಮತ್ತೊಂದೆಡೆ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರಗಾರಿಕೆ ಮಾಡುತ್ತಿವೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಕನಿಷ್ಟ 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಗುರಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಕೆಲ ಪ್ರಮುಖ ನಾಯಕರಿಗೆ ಗಾಳ ಹಾಕಿದ್ದು, ಆರಂಭದಲ್ಲಿ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದೆ.
![ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ನ ಆಪರೇಷನ್ ಹಸ್ತ ಸಕ್ಸಸ್!](https://images.tv9kannada.com/wp-content/uploads/2024/03/rajeev-and-shivanna.jpg?w=1280)
ಮೈಸೂರು, (ಮಾರ್ಚ್ 26): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತವರು ಜಿಲ್ಲೆ ಮೈಸೂರಿನಲ್ಲಿ ಲೋಕಸಭಾ ಚುನಾವಣೆಗೆ (Loksabha Elections 2024) ಭರ್ಜರಿ ತಯಾರಿ ನಡೆಸಿದ್ದಾರೆ. ಸ್ವ ಕ್ಷೇತ್ರದಲ್ಲಿ ಟಿಕಾಣಿ ಹೂಡಿರುವ ಸಿದ್ದು ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರ ಗೆಲ್ಲುವುದಕ್ಕೆ ಭರ್ಜರಿ ಗೇಮ್ ಪ್ಲಾನ್ ರೆಡಿ ಮಾಡುತ್ತಿದ್ದಾರೆ. ಎರಡೂ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಅವರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತರಿಗೆ ಗಾಳ ಹಾಕಿದ್ದಾರೆ.ಇದರ ಭಾಗವಾಗಿ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದೆ. ಹೌದು..ಮಾಜಿ ಸಚಿವ ಕೋಟೆ ಶಿವಣ್ಣ (Kote Shivanna) ಬಿಜೆಪಿ ತೊರೆದು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಕೋಟೆ ಶಿವಣ್ಣ ಅವರು ನಾಳೆ(ಮಾರ್ಚ್ 27) ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ ವಿಜಯಕುಮಾರ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್ವಿ ರಾಜೀವ್ ಅವರು ಸಹ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ: ಮೈಸೂರು ರೆಸಾರ್ಟ್ನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯ ಆಪರೇಷನ್ ಹಸ್ತ: ಯಡಿಯೂರಪ್ಪ ಆಪ್ತರಿಗೆ ಗಾಳ
1976ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಶಿವಣ್ಣ, 1978ರಲ್ಲಿ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಹೆಚ್ ಡಿ ಕೋಟೆ ಕ್ಷೇತ್ರದಿಂದ ಶಾಸಕರಾಗಿದ್ದರು. 1999 – 2004 ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಹಣಕಾಸು ಕನ್ನಡ ಸಂಸ್ಕೃತಿ ಇಲಾಖೆ ತೋಟಗಾರಿಕೆ ಸೇರಿ ಹಲವು ಖಾತೆ ನಿರ್ವಹಣೆ ಮಾಡಿದ್ದರು. ಬಳಿಕ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟೆ ಶಿವಣ್ಣ ಅವರು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿರದ್ದರು. ಆದ್ರೆ, ಇದೀಗ ಕೋಟೆ ಶಿವಣ್ಣ ಅವರು ವಾಪಸ್ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಶಿವಣ್ಣ ಕಾಂಗ್ರೆಸ್ ಸೇರುತ್ತಿರುವುದು ಬಿಜೆಪಿಗೆ ನಷ್ಟವಾಗಿದೆ.
ಬಿಎಸ್‌ವೈ ಆಪ್ತರಿಗೆ ಗಾಳ
ಶತಾಯಗತಾಯ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಆಪ್ತರಿಗೆ ಒಬ್ಬೊಬ್ಬರಾದ ಮೇಲೆ ಒಬ್ಬೊಬ್ಬರಂತೆ ಗಾಳ ಹಾಕುತ್ತಿದ್ದಾರೆ. ಮೂಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬೇಟೆ ನಂತರ ಈಗ ಮತ್ತೊಬ್ಬ ಆಪ್ತನನ್ನು ಸೆಳೆದಿದ್ದಾರೆ. ಅಲ್ಲದೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅತ್ಯಾಪ್ತರಾಗಿರುವ, ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದ ಅವರಿಗೂ ಗಾಳ ಹಾಕಿದ್ದಾರೆ. ಬಿಎಸ್‌ವೈ ಮತ್ತು ವಿಜಯೇಂದ್ರ ಬೆನ್ನಿಗೆ ನಿಲ್ಲುತ್ತಿದ್ದ ಸದಾನಂದ ಅವರನ್ನು ಟಾರ್ಗೆಟ್ ಮಾಡಲು ಕಾರಣವೂ ಇಲ್ಲವೆಂದೆಲ್ಲ. ಸದಾನಂದ ಅವರು ವೀರಶೈವ ಸಮುದಾಯದ ಮುಖಂಡರಾಗಿದ್ದಾರೆ. ಅಲ್ಲದೆ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಮತಗಳು ಹೆಚ್ಚಿವೆ. ಹೀಗಾಗಿ ವೀರಶೈವರ ಮತಗಳನ್ನು ಕ್ರೋಡೀಕರಣ ಮಾಡುವ ಪ್ಲ್ಯಾನ್ ಅನ್ನು ಸಿಎಂ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ