ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಯಲ್ಲಿ ಕೂತ ವಿದ್ಯಾರ್ಥಿನಿಯರು; ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜು ಆಡಳಿತ ಮಂಡಳಿ
ಐಡಿಎಸ್ಜಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಸಮವಸ್ತ್ರ ಮತ್ತು ಐ.ಡಿ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು: ಐಡಿಎಸ್ಜಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು (Students) ಬುರ್ಖಾ, ಹಿಜಾಬ್ (Hijab) ಧರಿಸಿ ತರಗತಿಯಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಸಮವಸ್ತ್ರ ಮತ್ತು ಐ.ಡಿ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪ್ರತಿ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಕಾಲೇಜಿನ ಒಳಗಡೆ ಬಿಡುತ್ತಿದ್ದಾರೆ. ಸಮವಸ್ತ್ರ, ಐ.ಡಿ ಕಾರ್ಡ್ ಇದ್ದವರಿಗೆ ಮಾತ್ರ ಕಾಲೇಜಿನ ಒಳಗೆ ಪ್ರವೇಶ ನೀಡುತ್ತಿದ್ದಾರೆ. ಸಮವಸ್ತ್ರ, ಐ.ಡಿ ಕಾರ್ಡ್ ಇಲ್ಲದ ವಿದ್ಯಾರ್ಥಿಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾಲೇಜು ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
ಏನಿದು ಘಟನೆ
ಗುರವಾರ (ಆ.10) ನಗರದ ಐಡಿಎಸ್ಜಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು. ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿಯಲ್ಲಿ ಪಾಠ ಕೇಳುತ್ತಿರುವುದು ಮತ್ತು ಕಾಲೇಜು ಕಾರಿಡಾರ್ನಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಎಎಸ್ಪಿ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವು ಮಂದಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಉಡುಪಿಯಲ್ಲಿ ಆರಂಭವಾಗಿದ್ದ ಹಿಜಾಬ್ ವಿವಾದ
ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ್ದು 2022ರ ವರ್ಷಾರಂಭದಲ್ಲಿ ವಿವಾದಕ್ಕೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಹಿಂದೂ ವಿದ್ಯಾರ್ಥಿಗಳು ಕೇಸರಿನ ಶಾಲ ಧರಿಸಿ ಕಾಲೇಜಿಗೆ ಬಂದಿದ್ದರು. ನಂತರ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಆನಂತರ ಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಕ್ರಿಶ್ಚಿಯನ್ ಇಲ್ಲದ ಗ್ರಾಮದಲ್ಲಿ ಚರ್ಚ್ ನಿರ್ಮಾಣ: ಹಿಂದೂಪರ ಸಂಘಟನೆ, ಗ್ರಾಮಸ್ಥರ ವಿರೋಧ
ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ಸರ್ಕಾರ ಆದೇಶಿಸಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Fri, 11 August 23