ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ: ಸರ್ಕಾರ ರಚಿಸಿದ ಆಡಳಿತ ಮಂಡಳಿಗೆ ಕೋಮು ಸೌಹಾರ್ದ ವೇದಿಕೆ ವಿರೋಧ
ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ. ಆದ್ರೆ, ಇದೀಗ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದಕ್ಕೆ (Dattatreya Bababudan Swamy Dargah Dispute) ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಆಡಳಿತ ಮಂಡಳಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಆಡಳಿತ ಮಂಡಳಿಯಲ್ಲಿ ಓರ್ವ ಮುಸ್ಲಿಂ ಸದಸ್ಯ ಸೇರಿ 8 ಜನರು ಇದ್ದಾರೆ. ಆದ್ರೆ, ಈ ಆಡಳಿತ ಮಂಡಳಿ ರಚನೆಗೆ ಅಪಸ್ವರ ಕೇಳಿಬಂದಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ: ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆ
ಆಡಳಿತ ಮಂಡಳಿ ರಚನೆಗೆ ಕೋಮು ಸೌಹಾರ್ದ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಸಮಿತಿಯನ್ನು ವಿಸರ್ಜಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿನುದ್ದಿನ್, ಎರಡು ಸಮುದಾಯದವರು ಒಳಗೊಂಡಂತೆ 8 ಜನ ಇರಬೇಕಿತ್ತು. ಆದ್ರೆ, ಒಂದೇ ಸಮುದಾಯದ 7 ಜನರಿದ್ದಾರೆ. ಈ ಸಮಿತಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದರು.
ಓರ್ವ ಮುಸ್ಲಿಂ ಸೇರಿದಂತೆ 8 ಜನರ ಮಂಡಳಿ
ಬಾಬಾಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಅರ್ಚಕರನ್ನು ನೇಮಕ ಮಾಡುವ ವಿಚಾರಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿದೆ. ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನ ನೇಮಕ ಮಾಡಿದೆ. ಇಬ್ಬರು ಮಹಿಳೆಯರು, ಓರ್ವ ಮುಸ್ಲಿಂ ಸೇರಿದಂತೆ ಆಡಳಿತ ಮಂಡಳಿಯಲ್ಲಿ ಒಟ್ಟು ಎಂಟು ಜನ ಸದಸ್ಯರಿದ್ದಾರೆ.
ಜಿ. ಹೆಚ್. ಹೇಮಂತ್ ಕುಮಾರ್ ಚಿಕ್ಕಮಗಳೂರು * ಸುಮಂತ್ ನೆಮ್ಮಾರ್ ವಿಜಯಪುರ * ಸತೀಶ್ ಅತ್ತಿಗುಂಡಿ * ಶೀಲಾ ಅತ್ತಿಗುಂಡಿ * ಲೀಲಾ ಬ್ಯಾಗದಹಳ್ಳಿ * ಗುರುವೇಶ್ ಕಲ್ಲೇದೇವರಪುರ * ಚೇತನ್ ನರಿಗುಡ್ಡನಹಳ್ಳಿ * ಭಾಷಾ ಚಿಕ್ಕಮಗಳೂರು ಎನ್ನುವರು ಆಡಳಿತ ಮಂಡಳಿಯಲ್ಲಿದ್ದಾರೆ.
ವಿವಾದ: ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಿದೆ. ಆದರೆ ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದೂ ಮತ್ತೆ ಕೆಲವರು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. ಕಳೆದ ನಾಲ್ಕೈದು ದಶಕಗಳಿಂದ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರದ ಮೂಲಕ ವಿವಾದಿತ ಕೇಂದ್ರವೂ ಆಗಿದ್ದ ಈ ಧಾರ್ಮಿಕ ಕೇಂದ್ರದ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.