ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ: ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆ

TV9kannada Web Team

TV9kannada Web Team | Edited By: Ramesh B Jawalagera

Updated on: Nov 18, 2022 | 11:06 PM

ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಅರ್ಚಕರನ್ನು ನೇಮಕ ಮಾಡುವ ವಿಚಾರಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿದೆ.

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ: ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆ
ಬಾಬಾಬುಡನ್​ಗಿರಿ ಐಡಿ ಪೀಠದಲ್ಲಿರುವ ಫಲಕ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಅರ್ಚಕರನ್ನು ನೇಮಕ ಮಾಡುವ ವಿಚಾರಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿದೆ. ಈ ಆಡಳಿತ ಮಂಡಳಿಯಲ್ಲಿ ಓರ್ವ ಮುಸ್ಲಿಂ ಸದಸ್ಯ ಸೇರಿ 8 ಜನರು ಇರಲಿದ್ದಾರೆ. ಅರ್ಚಕರ ನೇಮಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ಆಡಳಿತ ಮಂಡಳಿ ಇಂತಿದೆ * ಜಿ. ಹೆಚ್. ಹೇಮಂತ್ ಕುಮಾರ್ ಚಿಕ್ಕಮಗಳೂರು * ಸುಮಂತ್ ನೆಮ್ಮಾರ್ ವಿಜಯಪುರ * ಸತೀಶ್ ಅತ್ತಿಗುಂಡಿ * ಶೀಲಾ ಅತ್ತಿಗುಂಡಿ * ಲೀಲಾ ಬ್ಯಾಗದಹಳ್ಳಿ * ಗುರುವೇಶ್ ಕಲ್ಲೇದೇವರಪುರ * ಚೇತನ್ ನರಿಗುಡ್ಡನಹಳ್ಳಿ * ಭಾಷಾ ಚಿಕ್ಕಮಗಳೂರು

ಏನಿದು ವಿವಾದ:

ಬಾಬಾಬುಡನ್‌ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಿದೆ. ಆದರೆ ಈ ಸ್ಥಳವನ್ನು ಬಾಬಾ ಬುಡನ್‌ ಗಿರಿ ಎಂದೂ ಮತ್ತೆ ಕೆಲವರು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರದ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.

ಹೆಸರಿನ ವಿವಾದ

ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರು. ಆ ಸ್ಥಳವನ್ನು ಇನಾಂ ದತ್ತಾತ್ರೇಯ ಪೀಠ, (ಐಡಿ ಪೀಠ) ಎಂದೂ ಹೆಸರಿಸುತ್ತಾರೆ. ಆದರೆ ಕೆಲವೆಡೆ ‘ಬಾಬಾಬುಡನ್​ಗಿರಿ’ ಎಂದೂ ಇನ್ನೂ ಕೆಲವೆಡೆ ದತ್ತಪೀಠ ಎಂದೂ ಕರೆಯುತ್ತಿದ್ದಾರೆ. ಈ ಹೆಸರಿನ ವಿಚಾರ ಸಣ್ಣದಲ್ಲ. ಯಾವ ಹೆಸರಿನಿಂದ ಕರೆಯಬೇಕು ಎಂಬ ಬಗ್ಗೆ ಹಿಂದೂ-ಮುಸ್ಲಿಂ ಧರ್ಮದ ಅನುಯಾಯಿಗಳ ನಡುವೆ ಹಲವು ದಶಕಗಳಿಂದಲೂ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಹಿಂದೂ-ಮುಸ್ಲಿಂ ಭಾವೈಕ್ಯತಾ ಕೇಂದ್ರವಾಗಿರುವ ಈ ಸ್ಥಳದ ಉಮೇದುವಾರಿಕೆ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಲೇ ಇದ್ದಾರೆ.

ಬಾಬಾಬುಡನ್​ಗಿರಿ ಮತ್ತು ರಾಜಕಾರಣ

ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada