ಕೇರಳದಲ್ಲಿ ಶರಣಾಗಿದ್ದ ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ ಕರ್ನಾಟಕಕ್ಕೆ ಹಸ್ತಾಂತರ: ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
ಕೃಷ್ಣಮೂರ್ತಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಚಿಕ್ಕಮಗಳೂರು: ಕೇರಳದಲ್ಲಿ ಶರಣಾಗಿದ್ದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ (B.G.Krishnamurthy) ಅವರನ್ನು ಕೇರಳ ಪೊಲೀಸರು ಗುರುವಾರ (ಫೆ.24) ಕರ್ನಾಟಕಕ್ಕೆ ಹಸ್ತಾಂತರ ಮಾಡಿದ್ದಾರೆ. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ಹಲವು ಚಟುವಟಿಕೆಗಳಲ್ಲಿ ಹಲವು ಕೃಷ್ಣಮೂರ್ತಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕೃಷ್ಣಮೂರ್ತಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಕೇರಳದಿಂದ ತಡರಾತ್ರಿ ಕೃಷ್ಣಮೂರ್ತಿಯನ್ನು ಕರ್ನಾಟಕಕ್ಕೆ ಕರೆತರಲಾಯಿತು. ಕೇರಳದಲ್ಲಿ ಇತ್ತೀಚೆಗೆ ಹೊಸಗದ್ದೆ ಪ್ರಭಾ ಅವರೊಂದಿಗೆ ಕೃಷ್ಣಮೂರ್ತಿ ಶರಣಾಗಿದ್ದರು.
ಎನ್.ಆರ್.ಪುರದ ನ್ಯಾಯಾಧೀಶರಾದ ಕೆ.ಹರೀಶ್ ಅವರು ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಮಾಹಿತಿ ನೀಡಿದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಣಾಕ್ಷಿ, ಬಿ.ಜಿ.ಕೃಷ್ಣಮೂರ್ತಿ ಅವರನ್ನು ಕೇರಳ ಪೊಲೀಸರು ಅವರನ್ನು ಈಚೆಗೆ ಬಂಧಿಸಿದ್ದರು. ಬಾಡಿ ವಾರೆಂಟ್ ಮೂಲಕ ಎನ್.ಆರ್.ಪುರ ಕೋರ್ಟ್‌ಗೆ ಅವರನ್ನು ಹಾಜರುಪಡಿಸಲಾಗಿದೆ. ಶೃಂಗೇರಿ ಕೋರ್ಟ್‌ನಲ್ಲಿ ಕೃಷ್ಣಮೂರ್ತಿ ವಿರುದ್ಧ 29 ಪ್ರಕರಣಗಳಿವೆ. ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶರು ರಜೆ ಇರುವ ಕಾರಣ ಎನ್.ಆರ್.ಪುರ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದರು.
ಕೃಷ್ಣಮೂರ್ತಿ ವಿರುದ್ಧ ಹೊರ ರಾಜ್ಯ, ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕೃಷ್ಣಮೂರ್ತಿ ಸಹ ವಕೀಲ ವೃತ್ತಿ ಮಾಡಿದ್ದರಂತೆ. ಕೋರ್ಟ್‌ನಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜಿಕೆ ಯಾರು?
ಮಾವೋವಾದಿ ಗುಂಪಿನ ನಾಯಕರಾಗಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ ಅವರು ಮೂಲತಃ ಶೃಂಗೇರಿ ತಾಲ್ಲೂಕಿನ ಬುಕ್ಕಡಿಬೈಲಿನ ನೆಮ್ಮಾರು ಎಸ್ಟೇಟ್ ಮೂಲದವರು. ಬಿ.ಎ, ಎಲ್‌ಎಲ್‌ಬಿ ಓದಿರುವ ಕೃಷ್ಣಮೂರ್ತಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟವೂ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್ ಮುಖಂಡರಾಗಿದ್ದ ಸಾಕೇತ್ ರಾಜನ್ ಹತ್ಯೆ ನಂತರ ಕೃಷ್ಣಮೂರ್ತಿ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದರು.
ವಯನಾಡ್ನ ಸುಲ್ತಾನ್ಬತೇರಿಯಲ್ಲಿ ಬಿಜಿಕೆಯನ್ನು ನಕ್ಸಲ್ ನಾಯಕಿ ಸಾವಿತ್ರಿಯೊಂದಿಗೆ ಬಂಧಿಸಲಾಗಿತ್ತು. ಕೃಷ್ಣಮೂರ್ತಿ ವಿರುದ್ಧ 53, ಸಾವಿತ್ರಿ ವಿರುದ್ಧ 22 ಪ್ರಕರಣಗಳು ದಾಖಲಾಗಿದ್ದವು. 2003ರಿಂದ ಬಿಜಿಕೆ ತಲೆಮರೆಸಿಕೊಂಡಿದ್ದರು.
ಇದನ್ನೂ ಓದಿ: Vittal Malekudiya: ವಿಠಲ್ ಮಲೆಕುಡಿಯ ನಕ್ಸಲ್ ನಂಟಿನ ಆರೋಪದಿಂದ ಮುಕ್ತ; 9 ವರ್ಷಗಳ ಬಳಿಕ ಮಹತ್ವದ ತೀರ್ಪು ಪ್ರಕಟ