Naxal Kishanda: ಅವರ ಜೊತೆ ಮಾತು ಕಷ್ಟ, ಯಾಮಾರಿದ್ರೆ ನಮ್ಮನ್ನೂ ನಕ್ಸಲ್ ಮಾಡಿಬಿಡ್ತಾರೆ: ಪೊಲೀಸ್ ಮುಖ್ಯಸ್ಥರೇ ಹೀಗೆ ಒಪ್ಪಿಕೊಂಡ ಕಿಶನ್ದಾ ಬದುಕಿನ ಇತಿವೃತ್ತಾಂತ ಇಲ್ಲಿದೆ
ಇದೀಗ 70ರ ಹರೆಯದಲ್ಲಿರುವ ಕಿಶನ್ದಾ ಅವರು ನಕ್ಸಲ್ ಸಂಘಟನೆಯ ಚಿಂತಕರ ಚಾವಡಿಯ ಮಿದುಳು ಎನಿಸಿದ್ದರು.
ಸಿಪಿಐ (ಮಾವೊವಾದಿ) ಕೇಂದ್ರ ಸಮಿತಿ ಸದಸ್ಯ ಪ್ರಶಾಂತ್ ಬೋಸ್ ಆಲಿಯಾಸ್ ಕಿಶನ್ದಾ ಅವರನ್ನು ಇತರ ಐವರು ಸಹಚರರೊಂದಿಗೆ ಜಾರ್ಖಂಡ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು ದೇಶವ್ಯಾಪಿ ದೊಡ್ಡ ಸುದ್ದಿಯಾಗಿತ್ತು. ಕೇಂದ್ರ ಗೃಹ ಇಲಾಖೆಯ ರಾಡಾರ್ನಲ್ಲಿ ಹಲವು ವರ್ಷಗಳಿಂದ ಇರುವ ಕಿಶನ್ದಾ ಬಂಧನಕ್ಕೆ ಕೇಂದ್ರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಅವಿರತ ಶ್ರಮಿಸುತ್ತಿದ್ದವು. ಇದೀಗ 70ರ ಹರೆಯದಲ್ಲಿರುವ ಕಿಶನ್ದಾ ಅವರು ನಕ್ಸಲ್ ಸಂಘಟನೆಯ ಚಿಂತಕರ ಚಾವಡಿಯ ಮಿದುಳು ಎನಿಸಿದ್ದರು. ನಕ್ಸಲ್ ಚಳವಳಿಯ ಕಾರ್ಯತಂತ್ರ, ಸಂಘಟನೆಯ ವಿಚಾರದಲ್ಲಿ ಇವರ ಮಾತುಗಳಿಗೆ ಯಾರೂ ಎದುರು ಹೇಳುತ್ತಿರಲಿಲ್ಲ. ಮಾವೊವಾದಿ ಸಂಘಟನೆಯ ಮಟ್ಟಿಗೆ ಇವರನ್ನು ವಿಶ್ವಕೋಶ ಎಂದೇ ಗೌರವಿಸಲಾಗುತ್ತಿತ್ತು.
ಕಿಶನ್ದಾ ಭಾರತೀಯ ಮಾವೋವಾದಿ ಕೇಂದ್ರದ (Maoist Communist Centre of India – MCCI) ಸ್ಥಾಪಕ ಸದಸ್ಯರು. ಈ ಸಂಘಟನೆಯು ಕ್ರಮೇಣ ಜನಸಂಘರ್ಷ ಸಮಿತಿ (ಪೀಪಲ್ಸ್ ವಾರ್ ಗ್ರೂಪ್) ಜೊತೆಗೆ ವಿಲೀನಗೊಂಡು ಸಿಪಿಐ (ಮಾವೋವಾದಿ) ಆಯಿತು. ಜಾರ್ಖಂಡ್ನಲ್ಲಿ ಕಿಶನ್ದಾ ವಿರುದ್ಧ 50 ಪ್ರಕರಣಗಳು ದಾಖಲಾಗಿವೆ, ಅವರ ಸುಳಿವು ಕೊಟ್ಟವರಿಗೆ ₹ 1 ಕೋಟಿ ಬಹುಮಾನವನ್ನೂ ಘೋಷಿಸಲಾಗಿತ್ತು.
ನಕ್ಸಲ್ ವಲಯ ಕಮಾಂಡರ್ಗಳಾದ ಬಲ್ಲೋನ್ ಸರ್ದಾರ್ ಮತ್ತು ಸೂರಜ್ ಸರ್ದಾರ್ ಶರಣಾದ ನಂತರ ಪೊಲೀಸರಿಗೆ ಕಿಶನ್ದಾ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಯಿತು. ಕಿಶನ್ದಾ ಮತ್ತು ಇತರ ಐವರು ಹಿರಿಯ ನಾಯಕರು ಗಿರಿದಿಹ್ ಜಿಲ್ಲೆಯಿಂದ ಪಶ್ಚಿಮ ಸಿಂಗ್ಭೂಮ್ನ ದಟ್ಟ ಅರಣ್ಯ ಸರಂದ ಸಲ್ಗೆ ಬರುತ್ತಿದ್ದಾರೆ ಎಂಬ ಸುಳಿವು ಬೆನ್ನತ್ತಿದ ಪೊಲೀಸರು ಕಿಶನ್ದಾ ಮತ್ತು ಇತರರನ್ನು ಬಂಧಿಸಿದರು.
ಈ ತಂಡದಲ್ಲಿ ಒಟ್ಟು ಐವರು ಪುರುಷರು ಮತ್ತು ಓರ್ವ ಮಹಿಳೆ ಇದ್ದರು. ಇವರೆಲ್ಲರೂ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಕಂಡ್ರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ ಬಂಧಿತರ ಪೈಕಿ ಇಬ್ಬರು ಪ್ರಶಾಂತ್ ಬೋಸ್ ಮತ್ತು ಅವರ ಪತ್ನಿ ಶೈಲಾ ಮಾರಂಡಿ ಅಲಿಯಾಸ್ ಶೈಲಾಡಿ ಎಂದು ತಿಳಿದುಬಂತು. ಇತರ ನಾಲ್ವರನ್ನು ಬಿರೇಂದ್ರ ಹಂಡ್ಸಾ, ರಾಜು ತುಡು, ಕೃಷ್ಣ ಬಹಾಡ ಮತ್ತು ಗುರುಚರಣ್ ಎಂದು ಗುರುತಿಸಲಾಯಿತು. ಇವರೆಲ್ಲವರೂ ಸಿಪಿಐ (ಮಾವೋವಾದಿ) ಸದಸ್ಯರೇ ಆಗಿದ್ದರು. ಬಂಧಿತರ ಬಳಿ ಇದ್ದ ₹ 1.51 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ ಅನ್ವಯ ಇವರೆಲ್ಲರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಕ್ಸಲ್ ಸಂಘಟನೆಯಲ್ಲಿ ಕಿಶನ್ದಾ 1960ರಲ್ಲಿ ಪ್ರಶಾಂತ್ ಬೋಸ್ ನಕ್ಸಲರ ಸಂಪರ್ಕ ಹೊಂದಿದ್ದ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾದರು. 1974ರಲ್ಲಿ ಅವರನ್ನು ಬಂಧಿಸಲಾಗಿತ್ತು, 1978ರಲ್ಲಿ ಬಿಡುಗಡೆಯಾದ ನಂತರ ಕನಾಯ್ ಚಟರ್ಜಿ ಅವರೊಡನೆ ಸೇರಿ ಮಾವೋವಾದಿ ಸಂಘಟನೆ ಹುಟ್ಟುಹಾಕಿದರು. ಜಮೀನ್ದಾರರ ವಿರುದ್ಧ ಸರಣಿ ಹೋರಾಟಗಳನ್ನು ಸಂಘಟಿಸಿದ ಬೋಸ್, ಸ್ಥಳೀಯ ಸಂತಲ್ ನಾಯಕರೊಂದಿಗೆ 2000ನೇ ಇಸವಿಯವರೆಗೂ ಹೋರಾಟ ಮಾಡಿದರು. ಪಲಮು, ಛಾತ್ರ, ಗುಮ್ಲಾ ಮತ್ತು ಲೊಹಾರ್ಡಗ ಪ್ರದೇಶಗಳಲ್ಲಿ ನಕ್ಸಲ್ ಚಳವಳಿ ಆಳವಾಗಿ ಬೇರು ಬಿಡಲು ಕಾರಣಕರ್ತರಾದರು. ಈ ಅವಧಿಯಲ್ಲಿ ಬೋಸ್ ಅವರು ಪೊಲೀಸರೊಂದಿಗೆ ಮಾತ್ರವೇ ಅಲ್ಲ, ಮೇಲ್ಜಾತಿ ಜಮೀನ್ದಾರರ ಖಾಸಗಿ ಸೇನೆಗಳಾದ ರಣಬೀರ್ ಸೇನಾ ಮತ್ತು ಬ್ರಹ್ಮಶ್ರೀ ಸೇನಾಗಳ ವಿರುದ್ಧವೂ ಹೋರಾಡಿದ್ದರು.
2004ರಲ್ಲಿ ಸಿಪಿಐ (ಮಾವೋವಾದ) ಆರಂಭವಾದ ನಂತರ ಕಿಶನ್ದಾ ಕೇಂದ್ರ ಸಮಿತಿ ಸದಸ್ಯರಾಗಿಯೇ ಕಾರ್ಯನಿರ್ವಹಿಸುತ್ತಿದ್ದರು. ನಕ್ಸಲ್ ಸಂಘಟನೆಯ ಸೆಂಟ್ರಲ್ ಮಿಲಿಟರಿ ಕಮಿಷನ್ ಮತ್ತು ಪೂರ್ವ ವಲಯ ದಳದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ದಕ್ಷಿಣ ಚೋಟಾನಗರ್ ಪ್ರದೇಶದ ಸಾರಂದಾ ಅರಣ್ಯದಲ್ಲಿ ಬಹುಕಾಲ ಕೆಲಸ ಮಾಡಿದ್ದರು. ಜಾರ್ಖಂಡ್, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಸಂಘಟನೆ ಬಲಪಡಿಸಲು ಶ್ರಮಿಸಿದ್ದರು. 2007ರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಜೇಮ್ಶೆಡ್ಪುರದ ಸಂಸದ ಸುನಿಲ್ ಮಹತೊ ಅವರನ್ನು 2007ರಲ್ಲಿ ಕೊಲೆ ಮಾಡಿದ್ದ ಆರೋಪವೂ ಕಿಶನ್ದಾ ಮೇಲಿತ್ತು.
ಬಂಧನದ ಪರಿಣಾಮ ಕಿಶನ್ದಾ ಬಂಧನದ ಒಂದು ದಿನದ ನಂತರ ನಕ್ಸಲರ ಪ್ರಮುಖ ನಾಯಕ ಮಿಲಿಂಗ್ ತೇಲ್ತುಂಬ್ದೆ ಸೇರಿದಂತೆ 26 ನಕ್ಸಲೀಯರನ್ನು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀರು ಕೊಂದಿದ್ದಾರೆ. ಕಿಶನ್ದಾ ಬಂಧನ ಮತ್ತು ಮಿಲಿಂದ್ ತೇಲ್ತುಂಬ್ದೆ ನಿಧನದಿಂದ ನಕ್ಸಲರ ಹೋರಾಟದ ಶಕ್ತಿ ಕುಂದಿದೆ. ನಕ್ಸಲ್ ಸಂಘಟನೆಯ ಸದಸ್ಯರಲ್ಲಿಯೂ ಹೋರಾಟದ ಮನೋಭಾವ ಕಡಿಮೆಯಾಗಿದೆ ಎಂದು ಪೊಲೀಸ್ ಮೂಲಗಳು ವಿಶ್ಲೇಷಿಸಿವೆ.
‘ನಕ್ಸಲ್ ಚಳವಳಿಯ ವಿವಿಧ ಮುಖಗಳಲ್ಲಿ ಕಳೆದ 45 ವರ್ಷಗಳಿಂದ ಸಕ್ರಿಯರಾಗಿದ್ದ ಕಿಶನ್ದಾ ಇಂದು ನಕ್ಸಲ್ ಸಂಘಟನೆಯ ಚುಕ್ಕಾಣಿ ಹಿಡಿದಿರುವ ಬಹುತೇಕ ಪ್ರಮುಖ ನಾಯಕರಿಗೆ ಸೈದ್ಧಾಂತಿಕ ಮತ್ತು ಹೋರಾಟದ ತರಬೇತಿ ನೀಡಿದವರು. ಸಿಪಿಐ (ಮಾವೋವಾದಿ) ಸಂಘಟನೆ ಆರಂಭವಾದ ನಂತರ ಕಿಶನ್ದಾ 2ನೇ ಹಂತದ ನಾಯಕರಾಗಿ ಮುಂದುವರಿದಿದ್ದರು. ತಮ್ಮ ಹುದ್ದೆಗೆ ಮೀರಿದ ಪ್ರಭಾವ ಹೊಂದಿದ್ದ ಕಿಶನ್ದಾ ಬಂಧನದಿಂದ ಮಾಹಿತಿಯ ದೊಡ್ಡ ಸಾಗರವೇ ಸಿಕ್ಕಂತೆ ಆಗಿದೆ. ಇವರಿಂದ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಲು ಕೆಲವು ತಿಂಗಳುಗಳೇ ಬೇಕಾಗಬಹುದು’ ಎಂದು ಜಾರ್ಖಂಡ್ ಡಿಜಿಪಿ ಸಿನ್ಹಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಅದೇ ಪತ್ರಿಕಾಗೋಷ್ಠಿಯಲ್ಲಿ ತಮಗೆ ಅರಿವಲ್ಲದೇ ಡಿಜಿಪಿ ಸಿನ್ಹಾ ಅವರು ಕಿಶನ್ದಾ ಅವರ ಸಾಮರ್ಥ್ಯವನ್ನೂ ಹೊಗಳಿದಿದ್ದರು. ‘ಮಾನಸಿಕವಾಗಿ ಅವರು ನಮ್ಮೆಲ್ಲರಿಗಿಂತಲೂ ಸದೃಢರು. ಅವರ ಹತ್ತಿರಕ್ಕೆ ಹೋಗಿ ನೋಡಿ, ನಿಮ್ಮನ್ನೂ ಅವರು ನಕ್ಸಲ್ ಮಾಡಿಬಿಡುತ್ತಾರೆ. ಆ ಮನುಷ್ಯನ ಜೊತೆ ಮಾತಾಡೋದು ಕಷ್ಟ. ಯಾಮಾರಿದ್ರೆ ನಮ್ಮನ್ನೂ ನಕ್ಸಲ್ ಮಾಡಿಬಿಡ್ತಾನೆ’ ಎಂದು ಹೇಳಿದ್ದರು.
ಇದನ್ನೂ ಓದಿ: ಛತ್ತೀಸ್‌ಗಢ ಮತ್ತು ಜಾರ್ಖಂಡ್ ನಕ್ಸಲ್ ಪೀಡಿತ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಜ್ಜಾದ ಭದ್ರತಾ ಪಡೆ ಇದನ್ನೂ ಓದಿ: Naxal Attack Mastermind Madvi Hidma: ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಮಾದ್ವಿ ಹಿದ್ಮಾ ಯಾರೀತ?
Published On - 6:30 pm, Tue, 16 November 21